

ಬೆಂಗಳೂರು: ಯುಪಿಎ ಸರ್ಕಾರವಿದ್ದಾಗ ಸರಕು ಮತ್ತು ಸೇವಾ ತೆರಿಗೆ ಮಸೂದೆ(ಜಿಎಸ್ಟಿ) ಜಾರಿಗೆ ಎನ್ಡಿಎ ವಿರೋಧಿಸಿತ್ತು. ಈಗ ಎನ್ಡಿಎ ಅದನ್ನು ಜಾರಿಗೆ ಹೊರಟಾಗ ಯುಪಿಎ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್ ಸಂತೋಷ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಯುವಿಸಿಇ ಅಲೂಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಉದ್ಯೋಗಾಕಾಂಕ್ಷಿಗಳ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಎಸ್ಟಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಅನುಸರಿಸುತ್ತಿರುವ ಇಬ್ಬಗೆಯ ನೀತಿಯನ್ನು ವಿರೋಧಿಸಿದರು.``ಒಂದು ದಿನದ ಅಧಿವೇಶನಕ್ಕೆ 5 ಕೋಟಿ ಖರ್ಚಾಗುತ್ತದೆ. ಜಿಎಸ್ಟಿಗಾಗಿ 5 ದಿನದ ಅಧಿವೇಶನ ಬಲಿಯಾಗಿದೆ. ಅಂದರೆ ದೇಶದ 25 ಕೋಟಿ ನಷ್ಟವಾಗಿದೆ. ಶ್ರೀಮಂತಿಕೆಯನ್ನು ಮತ್ತು ಅಧಿಕಾರದಲ್ಲಿರುವವರನ್ನು ಪೂಜಿಸುವುದರಿಂದಲೇ ಇಂತಹ ವ್ಯವಸ್ಥೆ ಸೃಷ್ಟಿಯಾಗಿದೆ. ಕೆಲವೇ ಕೆಲವು ಪ್ರಾಮಾಣಿಕರಿಂದ ಏನು ಆಗುವುದಿಲ್ಲ. ಹೋರಾಟದಿಂದ ಬದಲಾವಣೆಯಾಗದಿರಬಹುದು, ಆದರೆ ಹೋರಾಟ ಮಾಡದಿರುವುದು ದೊಡ್ಡ ತಪ್ಪು,'' ಎಂದು ಹೇಳಿದರು.
`ಜನರಿಂದ, ಜನರಿಗಾಗಿ, ಜನರಿಗೋಸ್ಕರ' ಎಂಬುದು ಈಗ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಎಂಬಂತಾಗಿದೆ. ಶಾಸನ ಸಭೆಯು ಲೋಕಸೇವಾ ಆಯೋಗದ ಅಗತ್ಯವನ್ನು ಒತ್ತಿ ಹೇಳಿತು. ಈ ಆಯೋಗಕ್ಕೆ ನೇಮಕ ಮಾಡುವ ಅಧಿಕಾರವನ್ನು ಶಾಸಕಾಂಗಕ್ಕೆ ನೀಡಬಾರದು ಎಂಬ ವಾದವೂ ಇತ್ತು. ಆದರೆ ಸಾಕಾರವಾಗಲಿಲ್ಲ. ಹೀಗಾಗಿಯೇ ಇಂದು ಯುಪಿಎಸ್ಸಿ, ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರವಿದೆ. ಕೆಲವೇ ಮಂದಿ ಈ ಸಂಸ್ಥೆಗಳನ್ನು ತಮ್ಮ ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೆಗ್ಡೆ ವಿಷಾದಿಸಿದರು.
ಉದ್ಯೋಗಾಂಕ್ಷಿಗಳು ಒಟ್ಟಿಗೆ ಸೇರಿ ಕರಡು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಅಗತ್ಯ ಸಲಹೆ-ಸಹಕಾರವನ್ನು ನಾವು ನೀಡುತ್ತೇವೆ. ಆದರೆ ಹೋರಾಟಗಾರರು ಕೊನೆಯವರೆಗೂ ಬದ್ದತೆಯಿಂದ ನಡೆದುಕೊಳ್ಳಬೇಕು.
ಜೆ.ಎಸ್.ಪಾಟೀಲ
ವಿಶ್ರಾಂತ ಕುಲಪತಿ, ಕಾನೂನು ವಿವಿ