

ಬೆಂಗಳೂರು: ಯಶವಂತಪುರ ಮೇಲ್ಸೇತುವೆಯ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಬೈಕ್‍ವೊಂದು ಮುಂದಿನ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಹಾವೇರಿ ಮೂಲದ ಅಕ್ಷಯ್ ನಾಯರಿ (21) ಮೃತಪಟ್ಟವರು. ಆಸೀಫ್ ಖಾನ್ (21) ಮತ್ತು ಮುದ್ದುಕೃಷ್ಣ (21) ಗಾಯಗೊಂಡವರು. ಮೂವರು ಸ್ನೇಹಿತರು ರಾತ್ರಿ ಹೆಬ್ಬಾಳದ ಆಲ್‍ಬೇಕ್‍ನಲ್ಲಿ ಊಟ ಮುಗಿಸಿ ಮನೆಗೆ ವಾಪಸ್ ಬರುವಾಗ ಈ ಘಟನೆ ಜರುಗಿದೆ.
ವೈದ್ಯಕೀಯ ಪುಸ್ತಕಗಳ ವ್ಯಾಪಾರಿ ಅಕ್ಷಯ್ ನಾಯರಿ ಮತ್ತು ಡ್ರೈ ಫ್ರೂಟ್ಸ್ ವ್ಯಾಪಾರಿ ಆಸೀಫ್ ಖಾನ್ ರಾಜಾಜಿನಗರದ ಪಿಜಿವೊಂದರಲ್ಲಿ ನೆಲೆಸಿದ್ದಾರೆ. ಹಾವೇರಿಯ ಮುದ್ದುಕೃಷ್ಣ, ಸ್ನೇಹಿತರನ್ನು ನೋಡಲು ಸೋಮವಾರ ಬೆಂಗಳೂರಿಗೆ ಬಂದಿದ್ದ. ಬಹಳ ದಿನಗಳ ನಂತರ ಸ್ನೇಹಿತ ಬಂದಿದ್ದರಿಂದ ಮೂವರು ಸ್ನೇಹಿತರು ರಾತ್ರಿ ಎರಡು ಬೈಕ್‍ಗಳಲ್ಲಿ ಹೆಬ್ಬಾಳದ ಆಲ್‍ಬೇಕ್ ಹೊಟೇಲ್ ಗೆ ಊಟಕ್ಕೆ ಹೋಗಿದ್ದರು.
ಊಟದ ಬಳಿಕ ರಾಜಾಜಿನಗರದ ಪಿಜಿಗೆ ವಾಪಸಾಗಲು ಬೈಕ್ ಏರಿದ್ದಾರೆ. ಮುದ್ದುಕೃಷ್ಣ ಪಲ್ಸರ್ ಬೈಕ್‍ನಲ್ಲಿ ಮುಂದೆ ಬಂದರೆ, ಆಸೀಫ್ ಖಾನ್ ಮತ್ತು ಅಕ್ಷಯ್ ನಾಯರಿ ಯಮಹಾ ಎಫ್ 2 ಬೈಕ್‍ನಲ್ಲಿ ಹಿಂದೆ ಬಂದಿದ್ದಾರೆ. ರಾತ್ರಿ 12.30ರ ಸುಮಾರಿನಲ್ಲಿ ಯಶವಂತಪುರ ಮೇಲ್ಸೇತುವೆಯಲ್ಲಿ ತಿರುವು ಎದುರಾಗಿ ಮುದ್ದುಕೃಷ್ಣ ತಮ್ಮ ಬೈಕ್ ವೇಗ ಕಡಿಮೆ ಮಾಡಿದ್ದಾರೆ. ಆದರೆ ಹಿಂದಿನ ಬೈಕ್‍ನಲ್ಲಿ ವೇಗವಾಗಿ ಬರುತ್ತಿದ್ದ ಆಸೀಫ್ ಖಾನ್ ನಿಯಂತ್ರಣ ಕಳೆದುಕೊಂಡು ಮುದ್ದುಕೃಷ್ಣ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಎರಡು ಬೈಕ್‍ಗಳ ಸವಾರರು ಗಾಯಗೊಂಡಿದ್ದು, ಹಿಂಬದಿ ಸವಾರ ಅಕ್ಷಯ್ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ ಸ್ಥಳೀಯರು ಮೂವರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಕ್ಷಯ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯಸಿರೆಳೆದಿದ್ದಾರೆ.