ಜಿಲ್ಲಾ ಸುದ್ದಿ

ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಬದ್ಧ

ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಬದ್ಧ
ಮುಖ್ಯಮಂತ್ರಿ ಸಿದ್ದರಾಮಯ್ಯ
Published On :

ಬೆಂಗಳೂರು: ರಾಜ್ಯ ಸರ್ಕಾರ ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ನೋಡುತ್ತದೆ. ಈ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರು ಕಾಂಗ್ರೆಸ್ ನೇತೃತ್ವದ ಸರ್ಕಾರ ಇರುವವರೆಗೂ ಆತಂಕ ಪಡಬೇಕಾದ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಗರದ ಸೇಂಟ್ ಜೋಸೆಫ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೊಂಕಣಿ ಕ್ಯಾಥೋಲಿಕ್ ಸಮುದಾಯ ಒಕ್ಕೂಟ ದಿನದ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯ ಸರ್ಕಾರ ಎಲ್ಲ ಜಾತಿ ಧರ್ಮಗಳ ರಕ್ಷಣೆಗೆ ಬದ್ಧವಾಗಿದೆ. ಕ್ರಿಶ್ಚಿಯನ್ನರು ಇಂದು ದೇಶದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಭಾವನೆಗೆ ಗೌರವ ನೀಡುವುದು ಹಾಗೂ ಅವರ ಹಕ್ಕನ್ನು ರಕ್ಷಿಸಲು ಸರ್ಕಾರ ಎಲ್ಲ ರೀತಿಯಲ್ಲೂ ಸಿದ್ಧವಿದೆ ಎಂದರು.

ರಾಜ್ಯದಲ್ಲಿ ಲಿಪಿಯೇ ಇಲ್ಲದ ಕೊಂಕಣಿ ಮಾತನಾಡುವವರು ಸುಮಾರು 15 ಲಕ್ಷ ಮಂದಿ ಇದ್ದಾರೆ. ಆದರೂ ಅವರು ಅಲ್ಪಸಂಖ್ಯಾತರಾಗಿಯೇ ಉಳಿದಿದ್ದಾರೆ. ಅವಕಾಶ ವಂಚಿತರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಜಾತಿ, ಧರ್ಮ, ಭೇದವಿಲ್ಲದೇ ಸಾಮಾಜಿಕ ನ್ಯಾಯ ಒದಗಿಸುವ ಕಾಯಕಕ್ಕೆ ಸರ್ಕಾರ ಬದ್ಧವೆಂದರು.

ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಇತಿಹಾಸ ಗಮನಿಸಿದಾಗ ಕಾಂಗ್ರೆಸ್ ಕ್ರಿಶ್ಚಿಯನ್ನರಿಗೆ ನೀಡಿದ ಪ್ರಾಮುಖ್ಯತೆ ಇನ್ಯಾವ ಪಕ್ಷಗಳೂ ನೀಡಿಲ್ಲ. ಈ ಧರ್ಮೀಯರಿಂದು ಕಡಿಮೆ ಇರಬಹುದು. ಆದರೆ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಇಷ್ಟಿದ್ದರೂ ಕ್ರಿಶ್ಚಿಯನ್ನರು ರಾಜಕೀಯ ಹಾಗೂ ಸರ್ಕಾರದ ಉನ್ನತ ಹುದ್ದೆ ಅಲಂಕರಿಸುವಲ್ಲಿ ಹಿಂದುಳಿದಿದ್ದಾರೆ. ಈ ಕಾರಣಕ್ಕಾಗಿಯೇ ಅವರ ಹಕ್ಕು ರಕ್ಷಣೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವೆಡೆಗೆ ಹೆಚ್ಚು ಗಮನಹರಿಸಬೇಕಿದೆ ಎಂದರು.

ಇದೇ ವೇಳೆ ಕೊಂಕಣಿ ಕ್ಯಾಥೋಲಿಕ್ ಸಮುದಾಯದ ಒಕ್ಕೂಟ, ಸರ್ಕಾರಗಳಿಗೆ ಕ್ರಿಶ್ಚಿಯನ್ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಎಕರೆ ಜಮೀನನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರೂ, ಈವರೆಗೂ ನಿವೇಶನ ಮಂಜೂರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿಎಂ ನಿವೇಶನಕ್ಕಾಗಿ ಬಿಡಿಎ ಸದ್ಯದಲ್ಲೇ ಅರ್ಜಿ ಆಹ್ವಾನಿಸಲಿದ್ದು, ಆ ವೇಳೆ ಕೊಂಕಣಿ ಕಾಥೋಲಿಕ್ ಸಮುದಾಯದ ವತಿಯಿಂದ ಅರ್ಜಿ ಸಲ್ಲಿಸಿದರೆ, ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಏಳ್ಗೆಗೆ ಶ್ರಮವಹಿಸಿ ಸಾಧನೆಗೈದ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿ'ಸೋಜಾ, ಜೇಕೊಬ್ ಕ್ರಾಸ್ಟಾ ಮತ್ತು ಆಸ್ಟಿನ್ ರೋಚ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಶಾಸಕರಾದ ಜೆ.ಆರ್.ಲೊಬೋ, ಇವಾನ್ ಡಿಸೋಜಾ, ಕ್ರಿಶ್ಚಿಯನ್ ಧರ್ಮಗುರು ಡಾ. ಬರ್ನಾರ್ಡ್ ಮೊರಾಸ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.