ಎಟಿಎಂ ದರೋಡೆ ಯತ್ನ ಆರೋಪಿಗಳು ಪೊಲೀಸ್ ಬಲೆಗೆ

ಎಟಿಎಂ
ಎಟಿಎಂ

ಬೆಂಗಳೂರು: ಯಲಹಂಕ ಹಾಗೂ ಕೊಡಿಗೆಹಳ್ಳಿ ಸಮೀಪದ ಭದ್ರಪ್ಪ ಬಡಾವಣೆಯಲ್ಲಿ ಕಳೆದ ಶನಿವಾರ ನಡೆದಿದ್ದ ಎಟಿಎಂ ಘಟಕ ದರೋಡೆ ಯತ್ನ ಪ್ರಕರಣದ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಜಕ್ಕೂರು ಸಮೀಪದ ಅಗ್ರಹಾರ ಬಡಾವಣೆ ನಿವಾಸಿ ಮಧು(27), ದೊಡ್ಡಬಳ್ಳಾಪುರ ಶಾಂತಿ ನಗರ ನಿವಾಸಿ ವಿನಯ್ ಕುಮಾರ್(23) ಹಾಗೂ ಜಕ್ಕೂರಿನ ಭಾನುಚಂದ್ರ(27) ಬಂಧಿತರು. ಇವರಿಂದ ಗ್ಯಾಸ್ ಕಟರ್, ಕಟ್ಟಿಂಗ್ ಪ್ಲೇಯರ್, ಸ್ಕ್ರೂಡ್ರೈವರ್, ಮಂಕಿ ಕ್ಯಾಪ್ ಹಾಗೂ ಕೆಎಸ್ ಟಿಡಿಸಿಗೆ ಅಟ್ಯಾಚ್ ಮಾಡಲಾಗಿದ್ದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಫೆ.8ರ ರಾತ್ರಿ 2.45ರಲ್ಲಿ ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ಯೂನಿಯನ್ ಬ್ಯಾಂಕ್ ಎಟಿಎಂ ಕೇಂದ್ರ ಹಾಗೂ ಫೆ.10ರಂದು ಭದ್ರಪ್ಪ ಬಡಾವಣೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಯತ್ನಿಸಿದ್ದರು. ಅಲ್ಲದೇ ತಿಪಟೂರು, ಗುಬ್ಬಿ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ಎಟಿಎಂ ಘಟಕಗಳಲ್ಲೂ ದರೋಡೆ ಯತ್ನ ನಡೆಸಿದ್ದರು. ಮಂಕಿ ಕ್ಯಾಪ್: ಮೊದಲನೇ ಆರೋಪಿ, ಸಾಲ ಮಾಡಿ ಕಾರು ಖರೀದಿಸಿ ಅದನ್ನು ಕೆಎಸ್‍ಟಿಡಿಸಿಗೆ ಅಟ್ಯಾಚ್ ಮಾಡಿದ್ದ. ಕಾರು ಕೆಂಪೇಗೌಡ ಅಂತಾ
ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚರಿಸುತ್ತಿತ್ತು.

ಈತನೊಂದಿಗೆ ಕೆಲಸ ಮಾಡದೆ ಓಡಾಡುತ್ತಿದ್ದ ವಿನಯ್ ಹಾಗೂ ಭಾನುಚಂದ್ರ ಸೇರಿಕೊಂಡು ಸುಲಭವಾಗಿ ಹಣ ಮಾಡಲು ದರೋಡೆಗೆ ಯೋಜಿಸಿದ್ದರು. ಅದರಂತೆ ಆರೋಪಿಗಳು ಕೆಎಸ್‍ಟಿಡಿಸಿ ಕಾರಿನಲ್ಲಿ ಓಡಾಡುತ್ತ ಎಟಿಎಂ ಕೇಂದ್ರಗಳ ಹುಡುಕಾಟ ನಡೆಸುತ್ತಿದ್ದರು. ರಾತ್ರಿ ವೇಳೆ ಎಟಿಎಂ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ ಮಂಕಿ ಕ್ಯಾಪ್ ಧರಿಸಿ ಎಟಿಎಂ ಕೇಂದ್ರಕ್ಕೆ ನುಗ್ಗುತ್ತಿದ್ದರು. ಶೆಟರ್ ಎಳೆದು ಚಾಕುವಿನಿಂದ ಸೆಕ್ಯುರಿಟಿ ಗಾರ್ಡ್‍ನನ್ನು ಬೆದರಿಸಿ ಸಿಸಿ ಕ್ಯಾಮೆರಾ ಧ್ವಂಸ ಗೊಳಿಸುತ್ತಿದ್ದರು. ಬಳಿಕ ಗ್ಯಾಸ್ ಕಟರ್ ಹಾಗೂ ಇತರ ಆಯುಧಗಳನ್ನು ಬಳಸಿ ಎಟಿಎಂ ಯಂತ್ರ ಒಡೆಯಲು ಯತ್ನಿಸುತ್ತಿದ್ದರು. ಆದರೆ, ಒಮ್ಮೆಯೂ ಹಣ ದೋಚುವಲ್ಲಿ ಸಫಲರಾಗಿರಲಿಲ್ಲ. ಯಲಹಂಕ ಎಸಿಪಿ ತೀರ್ಥರಾಜು, ಪೊಲೀಸ್ ಇನ್ಸ್‍ಪೆಕ್ಟರ್ ರಾಜೀವ್, ಎಸ್ಸೈ ಪ್ರಶಾಂತ್, ತಂಡ ಆರೋಪಿಗಳನ್ನು ಬಂಧಿಸಿದೆ.

ಸುಳಿವು ನೀಡಿತು ಜಿಪಿಎಸ್

ಯಲಹಂಕದಲ್ಲಿ ನಡೆದ ದರೋಡೆ ಯತ್ನ ಪ್ರಕರಣದಲ್ಲಿ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಮುಖ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹೀಗಾಗಿ, ಪೊಲೀಸರು ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದರು. ಘಟನೆ ನಡೆದ ಸಂದರ್ಭದಲ್ಲಿ ಈ ಮಾರ್ಗದ ಬೇರೆ ಬೇರೆ ಸಿಸಿ ಕ್ಯಾಮೆರಾಗಳಲ್ಲಿ ಕಂಡಂತೆ ಪ್ರತಿ 5 ನಿಮಿಷಗಳ ಅಂತರದಲ್ಲಿ 12 ಏರ್‍ಪೋರ್ಟ್ ಕಾರುಗಳು ಓಡಾಡಿದ್ದವು. ಒಂದು ಕಾರು ಮಾತ್ರ ಒಂದು ಸಿಸಿ ಕ್ಯಾಮೆರಾದಿಂದ ಮತ್ತೊಂದು ಸಿಸಿ ಕ್ಯಾಮೆರಾವನ್ನು ಹಾದುಹೋಗಲು ಸುಮಾರು 50 ನಿಮಿಷ ತೆಗೆದುಕೊಂಡಿತ್ತು.

ಆ ಕಾರಿನ ಮೇಲೆ ಪೊಲೀಸರಿಗೆ ಅನುಮಾನ ಬಂದಿತ್ತು. ಏರ್‍ಪೊರ್ಟ್ ಕಾರುಗಳಿಗೆ ಸಾಮಾನ್ಯವಾಗಿ ಜಿಪಿಎಸ್ ಅಳವಡಿಸಲಾಗಿರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಓಡಾಡಿದ 12 ಕಾರುಗಳ ಮಾಹಿತಿಯನ್ನು ಕ್ಯಾಬ್ ಸಂಸ್ಥೆಗಳಿಂದ ಪಡೆದರು. ಬಳಿಕ ಆ ಕಾರುಗಳ ಚಾಲಕರನ್ನು ವಿಚಾರಣೆ ನಡೆಸುತ್ತಾ ಹೋದಾಗ ಆರೋಪಿ ಮಧು ಮೇಲೆ ಅನುಮಾನ ಬಂದಿದೆ. ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ 6 ದರೋಡೆ ಯತ್ನ ಪ್ರಕರಣಗಳು ಬಯಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com