

ಬೆಂಗಳೂರು: ಕರ್ನಾಟಕ ಸಕ್ಕರೆ ಕಾರ್ಖಾನೆಗಳು ಮತ್ತು ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘ ರೈತರಿಗೆ ಕಬ್ಬಿನ ಬಾಕಿ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದು, ಈ ಕಾರ್ಖಾನೆಗಳ ತಾಳಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಕುಣಿಯುತ್ತಿದೆ ಎಂದು ಕರ್ನಾಟಕ ಪ್ರದೇಶ ಕಬ್ಬು ಬೆಳಗಾರರ ಸಂಘ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಗುರುಮಠ, ಸಕ್ಕಾರೆ ಕಾರ್ಖಾನೆಗಳು ನೇರವಾಗಿ ರಾಜ್ಯ ಸರ್ಕಾರ ಕಬ್ಬು ಬಾಕಿ ಪಾವತಿಸುವುದಿಲ್ಲ ಎಂದು ಹೇಳುತ್ತಿದ್ದರು, ಸರ್ಕಾರ ಕ್ರಮಕೈಗೊಳ್ಳದೇ ನಿರ್ಲಕ್ಷ್ಯತನ ತೋರುತ್ತಿದೆ. ಇತ್ತೀಚೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಹರಿದುಬರುತ್ತಿದ್ದರೂ, ರಾಜ್ಯ ಸರ್ಕಾರ ಮಾತ್ರ ತಗಾದೆ ತೆಗೆಯುತ್ತಲಿದೆ ಎಂದು ದೂರಿದ್ದಾರೆ.
ರೈತರ ಆತ್ಮಹತ್ಯೆಯನ್ನು ತಡೆಯಬೇಕಾದರೆ ಸರ್ಕಾರ ರೈತರಿಗೆ ನಿಗದಿಪಡಿಸಿರುವ ಹಣವನ್ನು ಪಾವತಿಸಬೇಕು. ಕಬ್ಬು ನಿಯಂತ್ರಣ ಮಂಡಳಿಯಿಂದ ಯಾವುದೇ ರೈತರ ಹಿತ ಕಾಯುವುದು ಅಸಾಧ್ಯವಾಗಿದ್ದು, ಇದನ್ನು ವಿಸರ್ಜಿಸಬೇಕು ಎಂದ ಅವರು, ರೈತರಿಗೆ ಬಾಕಿ ಹಣ ಪಾವತಿಯಾಗದೆ ಅನ್ಯಾಯವಾಗುತ್ತಿದ್ದರೂ, ಇತ್ತ ರಾಜ್ಯ ಸರ್ಕಾರ ಮತ್ತಷ್ಟು ಹೊಸ ಸಕ್ಕರೆ ಕಾರ್ಖಾನೆಗಳಿಗೆ ಮಂಜೂರಾತಿ ಮಾಡುತ್ತಿದೆ. ಇದರಿಂದ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆಗಳಿಗೆ ಮಂಜೂರಾತಿ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.