

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ನೀತಿ ಸಂಹಿತೆ ಆರಂಭವಾಗುವ ಮುನ್ನವೇ ನಗರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಗೆ ಪಾಲಿಕೆ ಸಜ್ಜಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ನೀತಿ ಸಂಹಿತೆ ಆರಂಭವಾಗುವ ಮುನ್ನ ಉದ್ಘಾಟಿಸಬೇಕಾದ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಆಗಸ್ಟ್ 23 ಅಥವಾ 24ರಂದು ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಈ ಅವಧಿಯೊಳಗೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ಮುಂದಿನ ಶನಿವಾರ ಅಥವಾ ಭಾನುವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಹಾಗೂ ಆರಂಭವಾಗಬೇಕಾದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಜಾಹಿರಾತು ತೆರವಿಗೆ ಟೆಂಡರ್: ಜಾಹಿರಾತು ಫಲಕ ದರ ಪರಿಷ್ಕರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನಧಿಕೃತ ಜಾಹಿರಾತು ಗುರುತಿಸಿದ್ದು, ತೆರವುಗೊಳಿಸಲು ಟೆಂಡರ್ ಕರೆಯಲಾಗಿದೆ. ಜಾಹಿರಾತು ಅಕ್ರಮದಿಂದ 2 ಸಾವಿರ ಕೋಟಿ ನಷ್ಟವಾಗಿದೆ ಎಂದು ಉಲ್ಲೇಖಿಸಿ ಜಾಹಿರಾತು ವಿಭಾಗದ ಸಹಾಯಕ ಆಯುಕ್ತ ಮಥಾಯ್ ಅವರು ನೀಡಿದ ವರದಿ ಇನ್ನೂ ಕೈ ಸೇರಿಲ್ಲ. ವರದಿ ದೊರೆತ ನಂತರ ಪರಿಶೀಲಿಸಲಾಗುವುದು ಎಂದು ಆಡಳಿತಾಧಿಕಾರಿ ವಿಜಯ್ ಭಾಸ್ಕರ್ ತಿಳಿಸಿದರು.
ಬಿಬಿಎಂಪಿ ಚುನಾವಣೆ ಖಂಡಿತ ನಡೆಯಲಿದೆ. ಕಳೆದ ಬಾರಿ ಬಿಜೆಪಿ ಮೂರು ವರ್ಷ ಚುನಾವಣೆ ಮುಂದೂಡಿದಂತೆ ಈಗ ಮಾಡಲು ಸಾಧ್ಯವಿಲ್ಲ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಿಬಿಎಂಪಿ ಚುನಾವಣೆಯಲ್ಲೂ ಜನ ಬೆಂಬಲ ನೀಡಿದ್ದಾರೆ.
-ರಾಮಲಿಂಗಾರೆಡ್ಡಿ