ರಾಜ್ಯದಲ್ಲಿ ಮತ್ತೆ ಎಂಟು ಮಂದಿ ರೈತರ ಆತ್ಮಹತ್ಯೆ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ನಿಂತಿಲ್ಲ. ಬುಧವಾರವೂ ಎಂಟು ರೈತರು ಸಾವಿಗೆ ಶರಣಾಗಿದ್ದು, ಮಂಡ್ಯ ತಾಲೂಕಿನವರೇ ಮೂವರಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ನಿಂತಿಲ್ಲ. ಬುಧವಾರವೂ ಎಂಟು ರೈತರು ಸಾವಿಗೆ ಶರಣಾಗಿದ್ದು, ಮಂಡ್ಯ ತಾಲೂಕಿನವರೇ ಮೂವರಿದ್ದಾರೆ.
ಮಂಡ್ಯದ ಭಾರತೀನಗರ ಸಮೀಪದ ಅರೆಚಾಕಹಳ್ಳಿಯ ಶಿವಲಿಂಗೇಗೌಡ ಎಂಬುವರ ಪುತ್ರ ಮಧು (25) ರೇಷ್ಮೆ ಕೃಷಿ ಕೈಗೊಂಡಿದ್ದರು. ಇದಕ್ಕಾಗಿ ರು. 5.50 ಲಕ್ಷ ಸಾಲ ಮಾಡಿದ್ದರು. ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಸಿಗದ ಹಿನ್ನೆಲೆಯಲ್ಲಿ ಮಧು ಐದು ದಿನಗಳ ಹಿಂದೆಯೇ   ನೇಣುಬಿಗಿದುಕೊಂಡಿದ್ದರು. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಅವರ ದೇಹ ತೋಟದಲ್ಲಿ ಪತ್ತೆಯಾಗಿದೆ. ಇನ್ನು ಇದೇ ತಾಲೂಕಿನ ದ್ಯಾಪಸಂದ್ರದ ನಿಂಗೇಗೌಡ (60) ರೇಷ್ಮೆ ಬೆಳೆಗೆ ಧಾರಣೆ ಸಿಗದೆ ಮನನೊಂದಿದ್ದರು. ಸಾಲ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಿಂದ
ನೋಟಿಸ್ ಪಡೆದಿದ್ದರು.
ಮಂಡ್ಯ ತಾಲೂಕಿನ ಬಸರಾಳು ಸಮೀಪದ ಮೊಳೆ ಗ್ರಾಮದ ರೈತ ಹೊಂಬಯ್ಯ (52) ಮಾತ್ರೆ ಸೇವಿಸಿ ಕೊನೆಯುಸಿರೆಳೆದಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಬೆಳೆ ಕೈಕೊಟ್ಟಿದ್ದರಿಂದ ಕಂಗೆಟ್ಟಿದ್ದರು. ಸುಮಾರು ರು. 1.50 ಲಕ್ಷ ಕೈ ಸಾಲ  ಮಾಡಿಕೊಂಡಿದ್ದರು. ಅಥಣಿ ತಾಲೂಕಿನ ರೈತ ಕೊಕಟನೂರ ಗ್ರಾಮದ ಅಣ್ಣಪ್ಪ ಬಾಳಪ್ಪ ನೇಮಗೌಡ (28) ಕಬ್ಬಿನ ಬಾಕಿ ಸಿಗದ ಹಿನ್ನೆಲೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಅವರು ಲೇವಾದೇವಿದಾರರ ಬಳಿ ರು.  2 ಲಕ್ಷ ಹಾಗೂ ಬ್ಯಾಂಕ್ ನಿಂದ ರು.1.50 ಲಕ್ಷ ಸಾಲ ಪಡೆದಿದ್ದರು. ಸಾಲ ತೀರಿಸಲು ಕಬ್ಬಿನ ಬಿಲ್‍ಗಾಗಿ ಕಾಯುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಬಸಪ್ಪ ಶರಣಪ್ಪ ಅಸ್ಕಿ (52) ಬ್ಯಾಂಕ್ ಮತ್ತು ಪರಿಚಯಸ್ಥರಿಂದ ರು.10 ಲಕ್ಷ ಸಾಲ ಮಾಡಿಕೊಂಡಿದ್ದರು. ಮುಂಗಾರು ಕೈಕೊಟ್ಟಿದ್ದರಿಂದ ಬೆಳೆಯೂ ನಷ್ಟವಾಗಿತ್ತು. ಸಾಲ ಮರುಪಾವತಿ ಮಾಡುವ ಮಾರ್ಗ ಕಾಣದೆ ಸಾವಿಗೆ ಶರಣಾಗಿದ್ದಾರೆ. ಶಿರಹಟ್ಟಿ ತಾಲೂಕಿನ ಭಾವನೂರಿನ ಸೋಮಣ್ಣ ಕೊಟ್ರಪ್ಪ ಜೈನರ (55) ತಮ್ಮ ತೋಟದಲ್ಲಿದ್ದ ಕೊಳವೆ ಬಾವಿಯಲ್ಲಿ ದಿಢೀರನೆ ನೀರು ಬತ್ತಿಹೋಗಿತ್ತು. ಹೀಗಾಗಿ 2.5 ಎಕರೆ ಜಮೀನಿನಲ್ಲಿದ್ದ ಕಬ್ಬು ಬೆಳೆ ಒಣಗಿತ್ತು. ಈ ಹಿಂದೆ ಫ್ಯಾಕ್ಟರಿಗೆ ಹಾಕಿದ್ದ ಕಬ್ಬಿನ ಬಾಕಿಯ ಬಿಲ್ಲನ್ನು ಮಂಗಳವಾರವಷ್ಟೆ ಪಡೆದಿದ್ದ ಕೊಟ್ರಪ್ಪ, ಅದನ್ನೆಲ್ಲ ಸಾಲಗಾರಿಗೆ ಕೊಟ್ಟಿದ್ದರು. ಸಾಲ ಇನ್ನೂ ಉಳಿದಿದ್ದರಿಂದ ವಿಷ ಕುಡಿದಿದ್ದಾರೆ. ಹಗರಿಬೊಮ್ಮನಹಳ್ಳಿಯ ನಿಂಗಪ್ಪ (42) ಬೆಳೆ ಹಾನಿ ಮತ್ತು ಸಾಲ ಬಾಧೆಯಿಂದ ನೇಣುಬಿಗಿದುಕೊಂಡಿದ್ದಾರೆ. 2.5 ಎಕರೆ ಭೂಮಿಯಲ್ಲಿ ನಿಂಗಪ್ಪ ಹತ್ತಿ ನಾಟಿ ಮಾಡಿದ್ದರು. ಸಕಾಲಕ್ಕೆ ಮಳೆ ಬಾರದೆ ಬೆಳೆ ಹಾನಿ ಗೀಡಾಗಿತ್ತು. ದಾವಣಗೆರೆಯ ತಾಲೂಕಿನ ನಗರನ ಹಳ್ಳಿಯ ರೈತ ಗುರುನಾಥ (51) ಸಾಲದ ಬಾಧೆಗೆ ನೇಣು ಹಾಕಿಕೊಂಡಿದ್ದಾರೆ. ಅವರಿಗೆ ರು. 3 ಲಕ್ಷ ಸಾಲ ವಿತ್ತು. ಅಲ್ಲದೆ, ಕೊಳವೆಬಾವಿ ವೈಫಲ್ಯವೇ ಈ ನಿರ್ಧಾರಕ್ಕೆ ಕಾರಣ ಎಂದು ಕುಟುಂಬದವರು ತಿಳಿಸಿದ್ದಾರೆ.

ಆತ್ಮಹತ್ಯೆ ಪ್ರಯತ್ನ: ಹಿರೇಕೆರೂರು ತಾಲೂಕಿನ  ವಡೆನಪುರ ಗ್ರಾಮದ ಬಂಗಾರೆಪ್ಪ ಭರಮಪ್ಪ ಶಿರಳ್ಳೇರ ಅವರು ತಾವು ಮಾಡಿದ್ದ ರು.5 ಲಕ್ಷ ಸಾಲಕ್ಕೆ ಹೆದರಿ ಬುಧವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ವಿಷ ಸೇವಿಸಿದ್ದ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com