

ಹುಬ್ಬಳ್ಳಿ: ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಬರೆದಿದ್ದ ವಾಲ್ಮೀಕಿ ಯಾರು? ಪುಸ್ತಕದ ಮೇಲೆ ರಾಜ್ಯ ಸರ್ಕಾರ ಹೇರಿದ್ದ ನಿಷೇಧಾಜ್ಞೆಯನ್ನು ಸರ್ಕಾರ ಗುರುವಾರ ಹಿಂಪಡೆದಿದೆ.
ನಾರಾಯಣಾಚಾರ್ಯರು ಬರೆದ ವಾಲ್ಮೀಕಿ ಯಾರು? ಪುಸ್ತಕದಲ್ಲಿ ವಾಲ್ಮೀಕಿಯು ಪ್ರಚೇತಸ ಮುನಿಯ ಮಗನೆಂದು ಉಲ್ಲೇಖಿಸಲಾಗಿದೆ. ಆದರೆ, ಅವರು ಹಿಂದುಳಿದ ಜಾತಿಗೆ ಸೇರಿದವರು. ಈ ಪುಸ್ತಕದಲ್ಲಿ ಸುಳ್ಳು ದಾಖಲಿಸಿ ಲೇಖಕರು ಜನರನ್ನು ತಪ್ಪು ದಾರಿಗೆ ಎಳೆದಿದ್ದಾರೆಂದು ಶಾಸಕ ವಿ.ಎಸ್. ಉಗ್ರಪ್ಪ ವಿಧಾನ ಪರಿಷತ್‍ನಲ್ಲಿ ಇತ್ತೀಚೆಗೆ ಆರೋಪಿಸಿದ್ದರು.
ಹೀಗಾಗಿ ಸರ್ಕಾರ ಪುಸ್ತಕದ ಮೇಲೆ ನಿರ್ಬಂಧ ಹೇರಿತ್ತು. ಆಗ ಹಲವೆಡೆ ಲೇಖಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆನಂತರ ಲೇಖಕ ನಾರಾಯಣಾಚಾರ್ಯರು, ತಮ್ಮಲ್ಲಿದ್ದ ಆಧಾರದಿಂದ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಸರ್ಕಾರಕ್ಕೆ ನಿಮ್ಮಲ್ಲಿದ್ದ ಆಧಾರವನ್ನು ಸಲ್ಲಿಸಿ ಎಂದು ಸೂಚಿಸಿದಾಗ, ವಾಲ್ಮೀಕಿ ಕುರಿತು ಯಾವುದೇ ದಾಖಲೆಗಳಿರದ ಕಾರಣ ತಾನೇ ಹೇರಿದ್ದ ನಿಷೇಧವನ್ನು ಸರ್ಕಾರ ಹಿಂಪಡೆಯಿತು.