ದೋಷಪೂರಿತ ಮೀಟರ್ 100 ಆಟೋಗಳ ಜಪ್ತಿ

ಪ್ರಯಾಣಿಕರು ಕರೆದಲ್ಲಿಗೆ ಬಾರದಿರುವುದು, ಮೀಟರ್‍ಗಿಂತ ದುಪ್ಪಟ್ಟು ದರ ವಸೂಲಿ, ದೋಷಪೂರಿತ ಮೀಟರ್ ಹೊಂದಿರುವ ಆಟೋ ಚಾಲಕರ ವಿರುದ್ಧ ಮಫ್ತಿ ಕಾರ್ಯಾಚರಣೆ ನಡೆಸಿದ ಸಿಟಿ ಮಾರುಕಟ್ಟೆ ಸಂಚಾರ ಪೊಲೀಸರು 100 ಆಟೋಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ...
ದೋಷಪೂರಿತ ಮೀಟರ್ 100 ಆಟೋಗಳ ಜಪ್ತಿ (ಸಾಂದರ್ಭಿಕ ಚಿತ್ರ)
ದೋಷಪೂರಿತ ಮೀಟರ್ 100 ಆಟೋಗಳ ಜಪ್ತಿ (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಪ್ರಯಾಣಿಕರು ಕರೆದಲ್ಲಿಗೆ ಬಾರದಿರುವುದು, ಮೀಟರ್‍ಗಿಂತ ದುಪ್ಪಟ್ಟು ದರ ವಸೂಲಿ, ದೋಷಪೂರಿತ ಮೀಟರ್ ಹೊಂದಿರುವ ಆಟೋ ಚಾಲಕರ ವಿರುದ್ಧ ಮಫ್ತಿ ಕಾರ್ಯಾಚರಣೆ ನಡೆಸಿದ ಸಿಟಿ ಮಾರುಕಟ್ಟೆ ಸಂಚಾರ ಪೊಲೀಸರು 100 ಆಟೋಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ.

ಆಟೋ ಚಾಲಕ ವಿವರ ಫಲಕ ಹಾಕದಿರುವ, ಸಮವಸuಉ ಧರಿಸದಿರುವುದು, ಚಾಲನ ಪರವಾನಗಿ ಹೊಂದಿಲ್ಲದ ಬಗ್ಗೆ ಚಾಲಕರ ವಿರುದ್ಧ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ನಿರ್ದೇಶನ ಮೇಲೆ ಸಿಟಿ ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ 6.30 ರಿಂದ 8.30ರವರೆಗೆ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಯಮ ಉಲ್ಲಂಘಿಸಿದ ಆಟೋಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಚಾಲಕರ ಚಾಲನ ಪರವಾನಗಿ ಮತ್ತು ನೋಂದಣಿ ಪ್ರಮಾಣ ಪತ್ರ ವಶಕ್ಕೆ ಪಡೆದಿದ್ದು, ಅಮಾನತು ಮಾಡುವಂತೆ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ. ಪಶ್ಚಿಮ ವಿಭಾಗದಲ್ಲಿ ಮುಂದಿನ ದಿನಗಳಲ್ಲೂ ಈ ವಿಶೇಷ ಕಾರ್ಯಾಚರಣೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಶಕ್ಕೆ ಪಡೆದ ಆಟೋಗಳ ಪೈಕಿ 40 ಆಟೋಗಳನ್ನು ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಉಳಿದ 60 ಆಟೋಗಳನ್ನು ಸಿಟಿ ಮಾರ್ಕೆಟ್‍ನಲ್ಲಿರುವ ನಿಲುಗಡೆ ಜಾಗದಲ್ಲಿ ನಿಲ್ಲಿಸಲಾಗಿದೆ. ಕೋರ್ಟ್‍ನಲ್ಲಿ ದಂಡ ಕಟ್ಟಿ 40 ಆಟೋಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಸಿಟಿ ಮಾರ್ಕೆಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು:
ಕಾಟನ್‍ಪೇಟೆ ಸಮೀಪದ ಭಕ್ಷಿ ಗಾರ್ಡನ್‍ನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿದ್ದ ಬಡಗಿ ಸೆಂಧಿಲ್‍ಕುಮಾರ್(32) ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ.

ಸೆಂಧಿಲ್, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಭಕ್ಷಿ ಗಾರ್ಡನ್‍ಲ್ಲಿ ವಾಸವಿದ್ದರು. ಬುಧವಾರ ಮಧ್ಯಾಹ್ನ 2.30ರ ವೇಳೆಗೆ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮನೆಗೆ ನುಗ್ಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಅಕ್ಕಪಕ್ಕದ ಮನೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆ ಮತ್ತು ಎದೆಭಾಗಕ್ಕೆ ಗಂಭೀರ ಗಾಯವಾಗಿದ್ದ ಸೆಂಧಿಲ್ ವಿಕ್ಟೋರಿಯಾ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com