ಬೆಂಗಳೂರು ರೌಡಿ ಪುಣೆ ಬಳಿ ಕೊಲೆ

ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದರ್ಶನ ಮುಗಿಸಿಕೊಂಡು ನಗರಕ್ಕೆ ಬರುತ್ತಿದ್ದ ನಗರದ ಕುಖ್ಯಾತ ರೌಡಿ ಚಂದ್ರಶೇಖರ್ ಆಚಾರಿ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on: 

ಬೆಂಗಳೂರು: ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದರ್ಶನ  ಮುಗಿಸಿಕೊಂಡು ನಗರಕ್ಕೆ ಬರುತ್ತಿದ್ದ ನಗರದ ಕುಖ್ಯಾತ ರೌಡಿ ಚಂದ್ರಶೇಖರ್ ಆಚಾರಿ (35) ಪುಣೆ ಬಳಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾನೆ.

ರಾಮಮೂರ್ತಿನಗರದ ಹೊಯ್ಸಳನಗರದಲ್ಲಿ ವಾಸವಿದ್ದ ಚಂದ್ರಶೇಖರ್ ನ್ನು ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಪುಣೆ ಸಮೀಪದ ರಾಜ್‍ಗಡ್ ಜಿಲ್ಲೆಯಲ್ಲಿ ಇಬ್ಬರು ದುಷ್ಕರ್ಮಿಗಳು 3 ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

2008ರಲ್ಲಿ ಹೊಸಕೋಟೆ ಮತ್ತು 2009ರಲ್ಲಿ ರಾಮಮೂರ್ತಿನಗರದಲ್ಲಿ ನಡೆದ 2 ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಚಂದ್ರಶೇಖರ್ ಜೈಲು ಸೇರಿದ್ದ. ಈತನ ವಿರುದ್ಧ ಡಕಾಯಿತಿ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ರಾಮಮೂರ್ತಿನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು.

ಅಪರಾಧ ಲೋಕದಿಂದ ದೂರವಾಗಿದ್ದೇನೆಂದು ಹೇಳುತ್ತಿದ್ದ ಚಂದ್ರಶೇಖರ್, ರಿಯಲ್ ಎಸ್ಟೇಟ್ ಉದ್ಯಮದ ಜತೆಗೆ ಬಿಬಿಎಂಪಿ ಗುತ್ತಿಗೆದಾರನಾಗಿದ್ದ. ಮುಂಬರುವ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದ ಎಂದು ಚಂದ್ರಶೇಖರ್ ಸಂಬಂಧಿಕರು ಮತ್ತು ಸ್ನೇಹಿತರು ಮಾಹಿತಿ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.
 ಶೂಟೌಟ್: ಹೊಯ್ಸಳನಗರದಲ್ಲಿ ಹೊಸದಾಗಿ ಮನೆ ನಿರ್ಮಿಸಿದ್ದ ಚಂದ್ರಶೇಖರ್, ಸಮೀಪದಲ್ಲೇ ಸಾಯಿಬಾಬ ಮಂದಿರ ಕಟ್ಟಿಸಿದ್ದ. ಮಂದಿರದಲ್ಲಿ ಸಾಯಿಬಾಬ ಮೂರ್ತಿ ತರಲೆಂದು ಸ್ನೇಹಿತರ ಜತೆ ಕಾರಿನಲ್ಲಿ ಶಿರಡಿಗೆ ಹೋಗಿದ್ದ. ಗನ್ ಮ್ಯಾನ್ ಸೇರಿ 8 ಮಂದಿ ಶಿರಡಿಗೆ ತೆರಳಿದ್ದರು.

ಶುಕ್ರವಾರ ರಾತ್ರಿ ನಗರಕ್ಕೆ ವಾಪಸ್ಸಾಗುತ್ತಿದ್ದಾಗ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಾಜ್ ಗಡ್ ಬಳಿ ಕಾರು ನಿಲ್ಲಿಸಿದ್ದರು. ಆತನನ್ನೇ ಹಿಂಬಾಲಿಸುತ್ತಿದ್ದ ಹಂತಕರು, ಹೆದ್ದಾರಿ ಪಕ್ಕದ ನಟರಾಜ ಹೆಸರಿನ ಹೋಟೆಲ್‍ನಲ್ಲಿ ಚಂದ್ರಶೇಖರ್ ನೀರಿನ ಬಾಟಲ್ ಖರೀದಿಸುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಚಂದ್ರಶೇಖರ್ ನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವವಾಗಿ ಮಾರ್ಗ ಮಧ್ಯದಲ್ಲೆ ಮೃತಪಟ್ಟಿದ್ದಾನೆ. ಪುಣೆಯ ರಾಜ್‍ಗಡ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕುಖ್ಯಾತ ರೌಡಿಯೊಬ್ಬನ ಜತೆ ಚಂದ್ರಶೇಖರ್ ಗುರುತಿಸಿಕೊಂಡಿದ್ದ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ದ್ವೇಷ ಬೆಳೆದಿತ್ತು ಎಂದು ಆತನ ಸಹಚರರು ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com