

ಬೆಂಗಳೂರು: ದೇಶದ ಏಕೈಕ ಮಾನಸಿಕ ಆರೋಗ್ಯ ಸಂಸ್ಥೆ ನಿಮ್ಹಾನ್ಸ್ ಗೆ ಶನಿವಾರದಿಂದ ಪ್ರಭಾರಿ ನಿರ್ದೇಶಕರೂ ಇರುವುದಿಲ್ಲ! ಏಕೆಂದರೆ, ಆರು ತಿಂಗಳ ಹಿಂದೆಯೇ ನಡೆಯಬೇಕಿದ್ದ ನಿರ್ದೇಶಕರ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
ಅಷ್ಟೇ ಏಕೆ ನೂತನ ಅಧ್ಯಕ್ಷರು ಬರುವವರೆಗೂ ಇರಬೇಕಾದ ಪ್ರಭಾರಿ ನಿರ್ದೇಶಕರ ನೇಮಕವೂ ಆಗಿಲ್ಲ. ಸದ್ಯ ಪ್ರಭಾರ ನಿರ್ದೇಶಕರಾಗಿರುವ ಡಾ.ಪ್ರಧಾನ್ ಸೇವಾವಧಿ ಜು.31ಕ್ಕೆ ಅಂತ್ಯವಾಗಲಿದ್ದು, ನಂತರ ಪ್ರಭಾರ ನಿರ್ದೇಶಕರಾಗಿ ಯಾರು ಕಾರ್ಯನಿರ್ವಹಿಸಬೇಕು ಎನ್ನುವ ಪ್ರಶ್ನೆ ಉದ್ಭವಿಸಿದೆ.
ಹಿಂದಿನ ನಿರ್ದೇಶಕ ಡಾ.ಸತೀಶ್‍ಚಂದ್ರ ಅವಧಿ ಜೂ.29ಕ್ಕೆ ಮುಗಿಯುತ್ತಿದ್ದಂತೆ ಡಾ.ಪ್ರಧಾನ್ ಪ್ರಭಾರ ನಿರ್ದೇಶಕರಾದರು. ಈಗ ಅವರ ಅವಧಿಯೂ ಶುಕ್ರವಾರ ಮುಗಿಯುತ್ತಿದೆ. ಆನಂತರ ಜ್ಯೇಷ್ಠತೆಯ ಪಟ್ಟಿಯಲ್ಲಿ ಡಾ.ಶೋಭಾ, ಡಾ.ಉಮಾ ಮಹೇಶ್ವರ ರಾವ್ ಸೇರಿದಂತೆ ಐವರು ಸರದಿಯಲ್ಲಿದ್ದಾರೆ. ಆದರೆ, ಇವರಲ್ಲಿ ಯಾರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಕ ಮಾಡಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ.
ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಯಾವುದೇ ಸೂಚನಾ ಪತ್ರ ಕೂಡ ಬಂದಿಲ್ಲ. ಹೀಗಾಗಿ ಡಾ.ಪ್ರಧಾನ್ ಮತ್ತೆ ಪ್ರಭಾರಿಯಾಗಿಯೇ ಮುಂದುವರಿಯಬೇಕೇ? ಅಥವಾ ಜ್ಯೇಷ್ಠತೆ ಪಟ್ಟಿಯಲ್ಲಿರುವವರ ಪೈಕಿ ಯಾರಿಗೆ ಪ್ರಭಾರ ಸ್ಥಾನ ವಹಿಸಬೇಕು ಎಂಬ ಜಿಜ್ಞಾಸೆ ತಲೆದೋರಿದೆ. ಈ ಮಧ್ಯೆ ನಿಮಾ್ಹನ್ಸ್‍ನ ನೌಕರರ ಸಂಘಟನೆಗಳು ಈಗಿರುವ ಡಾ. ಪ್ರಧಾನ್ ಅವರನ್ನೇ ಪ್ರಭಾರಿ ನಿರ್ದೇಶಕರನ್ನಾಗಿ ಮುಂದುವರಿಸಬೇಕೆಂದು ಆಗ್ರಹಿಸಿ ಕೇಂದ್ರ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿವೆ. ಆದರೆ, ಇದಕ್ಕೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಕೇಂದ್ರ ಆರೋಗ್ಯ ಇಲಾಖೆ ಸಕಾಲಕ್ಕೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಸದಿರುವ ತಪ್ಪಿಗೆ ಸಂಸ್ಥೆಯ ಆಡಳಿತ ಯಂತ್ರ ಸಮಸ್ಯೆ ಎದುರಿಸುವಂತಾಗಿದೆ. ಗುಂಪುಗಾರಿಕೆ ತಂದ ತಲೆನೋವು: ಈ ಮಧ್ಯೆ ಮಾಜಿ ನಿರ್ದೇಶಕ ಸತೀಶ್ ಚಂದ್ರ ಹಾಗೂ ಮಾಜಿ ರಿಜಿಸ್ಟ್ರಾರ್ ಡಾ.ರವಿ ಅವರನ್ನು ವಜಾಗೊಳಿಸಿದ್ದರಿಂದ ಉದ್ಭವಿಸಿ ರುವ ಗೊಂದಲ ಮುಂದುವರಿದಿದ್ದು, ಇವರಿಬ್ಬರು ತಮ್ಮ ವಿರುದಟಛಿ ಕೈಗೊಂಡಿರುವ ಕ್ರಮಕ್ಕೆಆಕ್ಷೇಪ ವ್ಯಕ್ತಪಡಿಸುತ್ತಲೇ ಸೇವೆಯಲ್ಲಿ ಮುಂದುವರಿದಿದ್ದಾರೆ.
ನಿಮ್ಹಾನ್ಸ್ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿರ್ದೇಶಕರ ಹುದ್ದೆ ಅನುಭವಿಸಿದವರು ಮತ್ತೆ ಉನ್ನತ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಬಾರದು.
ಈ ನಿಯಮ ಆಧರಿಸಿ ಮಾಜಿ ನಿರ್ದೇಶಕ ಡಾ.ಸತೀಶ್ ಚಂದ್ರ ಅವರನ್ನು ತೆಗೆಯಲಾಗಿದೆ ಎಂದು ಪ್ರಭಾರಿ ನಿರ್ದೇಶಕರ ಕಚೇರಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದನ್ನು ಮೌನವಾಗಿಯೇ ವಿರೋಧಥಿಸುತ್ತಿರುವ ಡಾ. ಸತೀಶ್‍ಚಂದ್ರ ಎಂದಿನಂತೆ ಪ್ರೊಫೆಸರ್ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ. ತಮ್ಮನ್ನು ವಜಾಗೊಳಿಸುವ ಪತ್ರವನ್ನು ಅವರು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಇನ್ನು, ರಿಜಿಸ್ಟ್ರಾರ್ ಡಾ.ರವಿ ತಮ್ಮನ್ನು ವಜಾಗೊಳಿಸಿರುವ ಕ್ರಮದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.
ಈ ಎಲ್ಲ ಬೆಳವಣಿಗೆ ನಂತರ ನಿಮ್ಹಾನ್ಸ್ ನಲ್ಲಿ ಹಾಲಿ ಮತ್ತು ಮಾಜಿ ನಿರ್ದೇಶಕರ ಪರ, ವಿರೋಧ ಗುಂಪುಗಾರಿಕೆ ತೀವ್ರವಾಗಿದೆ. ಇದರೊಂದಿಗೆ ಜಾತಿ ಹೆಸರಿನಲ್ಲೂ ಗುಂಪುಗಾರಿಕೆ ನಡೆಯುತ್ತಿದ್ದು, ದೇಶದ ಮಹತ್ವದ ರಾಷ್ಟ್ರೀಯ ಸಂಸ್ಥೆ ಎನಿಸಿಕೊಂಡಿರುವ ನಿಮ್ಹಾನ್ಸ್ ಇಂಥ ಬೆಳವಣಿಗೆಗಳಿಂದಾಗಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.