

ಬೆಂಗಳೂರು: ಬಿಬಿಎಂಪಿ ಚುನಾವಣೆ ಮುಂದೂಡುವುದಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಅರ್ಜಿ ಸಲ್ಲಿಸುತ್ತದೆ ಎಂಬುದು ಶುದ್ಧ ಸುಳ್ಳು ಎಂದು ಸಾರಿಗೆ ಮತ್ತು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ನಂತರ ಮುಂದೂಡುವುದಕ್ಕೆ ಸಾಧ್ಯವೇ ಇಲ್ಲ, ಕಾಂಗ್ರೆಸ್ ಈಗಾಗಲೇ ಚುನಾವಣಾ ಪ್ರಕ್ರಿಯೆಗೆ ತನ್ನನ್ನು ತೊಡಗಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಕೊಡುಗೆ ಶೂನ್ಯ:
ಕಳೆದ ಎಂಟು ವರ್ಷದಿಂದ ಬಿಬಿಎಂಪಿಯಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನಗರದ ಅಭಿವೃದ್ಧಿಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಪಾಲಿಕೆಯ ಆಸ್ತಿ ಅಡವಿಟ್ಟು ಸಾಲ ಮಾಡಿದ್ದಷ್ಟೇ ಸಾಧನೆ. ನಾನು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾಲ ಮಾಡಿರಲಿಲ್ಲ. ಆದಾಯ ಮತ್ತು ಖರ್ಚು ಸಮತೋಲಿತವಾಗಿತ್ತು, ಪೌರ ಕಾರ್ಮಿಕರ ಪಿಎಫ್ ಹಣವನ್ನು ಕಟ್ಟುವುದಕ್ಕೂ ಇವರಿಗೆ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
ತಿಂಗಳಾಂತ್ಯಕ್ಕೆ ವರದಿ:
ಮಾರ್ಕೊಪೋಲೊ ಬಸ್ ಖರೀದಿ ಹಗರಣದ ತನಿಖೆ ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿರಿಯ ಐಎಎಸ್ ಅಧಿಕಾರಿ ಉಮಾಶಂಕರ್ ನೇತೃತ್ವದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ವರದಿ ಸಲ್ಲಿಕೆಯಾಗುತ್ತದೆ. ಆ ಬಳಿಕ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.ಮುಂದಿನ ಆಗಸ್ಟ್ ಅಂತ್ಯದ ವೇಳೆಗೆ ನಾಯಂಡಹಳ್ಳಿಯವರೆಗೆ ಮೆಟ್ರೋ ಸೇವೆ ಲಭಿಸುತ್ತದೆ ಎಂದರು.