

ಬೆಂಗಳೂರು: ಇಸಿಸ್ ಉಗ್ರ ಸಂಘಟನೆ ಪರ ಟ್ವಿಟರ್ ಖಾತೆ ನಿರ್ವಹಿಸಿ ಬಂಧಿತನಾಗಿರುವ ಮೆಹ್ದಿ ಮಸ್ರೂರ್ ಬಿಸ್ವಾಸ್ ಹಾಗೂ ಭಟ್ಕಳದ ಶಂಕಿತ ಉಗ್ರರ ಬಂಧನ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯಲ್ ಅವರನ್ನು ಸಿಸಿಬಿ ಡಿಸಿಪಿ ಹುದ್ದೆಯಿಂದ ಎತ್ತಂಗಡಿ ಮಾಡಿರುವುದರಿಂದ ಗಂಭೀರ ಪ್ರಕರಣಗಳ ತನಿಖೆಗೆ ಹಿನ್ನಡೆಯಾಗಿದೆ.
ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು, 1ವರ್ಷ 2 ತಿಂಗಳು ಕಾಲ ಸಿಸಿಬಿ ಡಿಸಿಪಿಯಾಗಿದ್ದ ಗೋಯಲ್ ಅವರು ಚಚ್ರ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲೂಸಕ್ರಿಯರಾಗಿದ್ದರು. ದೆಹಲಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಬಿ.ಟೆಕ್ ಪದವಿಧರರಾಗಿರುವ ಗೋಯಲ್ ಅವರು ಮೆಹ್ದಿ ಪ್ರಕರಣದಲ್ಲಿಹೆಚ್ಚಿನ ಆಸಕ್ತಿ ಹೊಂದಿದ್ದು ತನಿಖೆಯಲ್ಲಿ ತಾಂತ್ರಿಕವಾಗಿ ಮುಂಚೂಣಿಯಲ್ಲಿದ್ದರು. ಮೆಹ್ದಿಯ ಖುದ್ದು ವಿಚಾರಣೆ ನಡೆಸಿದ್ದ ಗೋಯಲ್, ಸಾಕಷ್ಟು ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದರು.
ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸುವ ತಯಾರಿ ನಡೆಸುತ್ತಿದ್ದರು. ಹೀಗೆ, ಪ್ರಕರಣದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ್ದ ಅಧಿಕಾರಿಯನ್ನು ದಿಢೀರ್ ಎತ್ತಂಗಡಿ ಮಾಡಿರುವುದು ಪ್ರಕರಣಕ್ಕೆ ಪೆಟ್ಟು ಬೀಳುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಗೋಯಲ್‍ರನ್ನು ಸಿಎಆರ್‍ಗೆ ವರ್ಗಾಯಿಸಿರುವ ರಾಜ್ಯ ಸರ್ಕಾರ, ಆ ಸ್ಥಾನಕ್ಕೆ ಡಿಸಿಪಿ ರಮೇಶ್‍ರನ್ನು ನಿಯೋಜಿಸಿದೆ.
ನೂತನ ಅಧಿಕಾರಿ ಪ್ರಕರಣದ ಬಗ್ಗೆ ಅಧ್ಯಯನ ನಡೆಸಿ ತಿಳಿದುಕೊಳ್ಳಲು ಸಾಕಷ್ಟು ಕಾಲಾವಕಾಶ ಬೇಕು. ಗಂಭೀರ ಪ್ರಕರಣಗಳ ತನಿಖೆ: ಬೆಂಗಳೂರು ಮತ್ತು ಭಟ್ಕಳದಲ್ಲಿ ಏಕಕಾಲದಲ್ಲಿ ಸಿಕ್ಕಿಬಿದ್ದ ಐಎಂ ಸಂಘಟನೆಯ ನಾಲ್ವರು ಶಂಕಿತ ಉಗ್ರರ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಪ್ರಕರಣದಲ್ಲೂ ಗೋಯಲ್ ಅವರು ತಮ್ಮದೇ ರೀತಿಯಲ್ಲಿ ತನಿಖೆ ನಡೆಸುತ್ತಿದ್ದರು. ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ, ಆನ್‍ಲೈನ್ ವಂಚನೆ, ಕಾಮೆಡ್-ಕೆ ಪರೀಕ್ಷೆ ಹಗರಣದಂಥ ಹಲವು ಗಂಭೀರ ಪ್ರಕರಣಗಳ ತನಿಖಾ ಜವಾಬ್ದಾರಿಯನ್ನು ಗೋಯಲ್ ನಿರ್ವಹಿಸುತ್ತಿದ್ದರು. ಇದೀಗ ದಿಢೀರನೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಿರುವುದರಿಂದ ಈ ಎಲ್ಲ ಪ್ರಕರಣಗಳ ತನಿಖೆಗೆ ಹಿನ್ನಡೆಯಾಗಲಿದೆ.
ಮಹತ್ವದ ಪ್ರಕರಣಗಳ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ತನಿಖೆಯ ಮಧ್ಯಭಾಗದಲ್ಲಿ ವರ್ಗಾವಣೆ ಮಾಡುವುದಿಲ್ಲ. ಇದರಿಂದ ತನಿಖೆಗೆ ಹಿನ್ನಡೆಯಾಗುತ್ತದೆ ಎಂದು ಖುದ್ದು ಗೃಹಸಚಿವ ಕೆ.ಜೆ.ಜಾರ್ಜ್ ಅವರೇ ಹಲವು ಬಾರಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರೂ ವರ್ಗಾವಣೆ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಎಸ್‍ಪಿಯಾಗಿದ್ದ ಅಭಿಷೇಕ್ ಗೋಯಲ್‍ರನ್ನು 2014ರ ಜ.1ರಂದು ಬೆಂಗಳೂರು ಸಿಸಿಬಿ ಡಿಸಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. 1 ವರ್ಷ 2 ತಿಂಗಳು ಕಳೆಯುವಷ್ಟರಲ್ಲಿ ನಗರ ಶಸ್ತ್ರಾಸ್ತ್ರ ಮೀಸಲು (ಸಿಎಆರ್) ಪಡೆಗೆ ವರ್ಗಾವಣೆ ಮಾಡಲಾಗಿದೆ. ಒಂದೂವರೆ ತಿಂಗಳ ಹಿಂದೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ (ಅಪರಾಧ) ಹೇಮಂತ್ ನಿಂಬಾಳ್ಕರ್ ನ್ನೂ ಸರ್ಕಾರ ಬೇರೆಡೆಗೆ ವರ್ಗಾವಣೆಗೊಳಿಸಿತ್ತು.