ಜಿಕೆಎಂ ಕಾಲೇಜಿಗೆ ರು.1 ಲಕ್ಷ ದಂಡ

ಬೆಂಗಳೂರು ವಿಶ್ವವಿದ್ಯಾಲಯ ಮಾನ್ಯತೆ ಪಡೆಯದೆ ಬಿ.ಎಡ್ ಕೋರ್ಸ್‍ಗೆ 100 ಮಂದಿ ವಿದ್ಯಾರ್ಥಿಗಳನ್ನು ಅಕ್ರಮವಾಗಿ ದಾಖಲಿಸಿಕೊಂಡ ನಗರದ ಜಿಕೆಎಂ ಕಾಲೇಜಿಗೆ ಹೈಕೋರ್ಟ್ ಸೋಮವಾರ ರು.1 ಲಕ್ಷ ದಂಡ ವಿಧಿಸಿದೆ...
ಹೈಕೋರ್ಟ್ (ಸಂಗ್ರಹ ಚಿತ್ರ)
ಹೈಕೋರ್ಟ್ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮಾನ್ಯತೆ ಪಡೆಯದೆ ಬಿ.ಎಡ್ ಕೋರ್ಸ್‍ಗೆ 100 ಮಂದಿ ವಿದ್ಯಾರ್ಥಿಗಳನ್ನು ಅಕ್ರಮವಾಗಿ ದಾಖಲಿಸಿಕೊಂಡ ನಗರದ ಜಿಕೆಎಂ ಕಾಲೇಜಿಗೆ ಹೈಕೋರ್ಟ್ ಸೋಮವಾರ ರು.1 ಲಕ್ಷ ದಂಡ ವಿಧಿಸಿದೆ.

ಬಿ.ಎಡ್ ಕೋರ್ಸ್‍ಗೆ ಮಾನ್ಯತೆ ನೀಡಲು ಸರ್ಕಾರ ಹಾಗೂ ಬೆಂಗಳೂರು ವಿವಿಗೆ ನಿರ್ದೇಶಿಸುವಂತೆ ಕೋರಿ ಜಿಕೆಎಂ ಕಾಲೇಜು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾ.ಅಶೋಕ್ ಬಿ.ಹಿಂಚಿಗೇರಿ ಅವರಿದ್ದ ಏಕ ಸದಸ್ಯ ಪೀಠ, ಕಾಲೇಜಿಗೆ ದಂಡ ವಿಧಿಸಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲೂ ಬಿ.ಎಡ್ ಕೋರ್ಸ್‍ಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ಪ್ರಮಾಣಪೂರ್ವಕ ಹೇಳಿಕೆ ಸಲ್ಲಿಸುವಂತೆ ಕಾಲೇಜಿಗೆ ಇದೇ ವೇಳೆ ಹೈಕೋರ್ಟ್ ತಾಕೀತು ಮಾಡಿತು.

ಕಳೆದ 2014-15ನೇ ಸಾಲಿನಲ್ಲಿ ಬಿಎಡ್ ಕೋರ್ಸ್ ಆರಂಭಿಸಲು ಮಾನ್ಯತೆ ನೀಡುವಂತೆ ಜಿಕೆಎಂ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿತ್ತು. ಕಾಲೇಜು ಸಮರ್ಪಕವಾದ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂಬ ಕಾರಣಕ್ಕೆ ಮಾನ್ಯತೆ ನೀಡಲು ವಿಶ್ವವಿದ್ಯಾಲಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಕಾಲೇಜು ಉಪ ಪ್ರಾಂಶುಪಾಲ ಸಿ.ಆರ್. ಮೋಹನ್ ಕುಮಾರ್ ಹಾಗೂ ಕಾಲೇಜಿನ 100 ಮಂದಿ ವಿದ್ಯಾರ್ಥಿಗಳು ದಾಖಲಿಸಿಕೊಂಡು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಸರ್ಕಾರಿ ವಕೀಲರು, ಸಮರ್ಪಕ ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಮಾನ್ಯತೆ ನೀಡಿಲ್ಲ. ಆದರೂ ಕಾಲೇಜು ಬಿ.ಎಡ್ ಕೋರ್ಸ್‍ಗೆ 100 ಮಂದಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಕೋರ್ಟ್ ಅರ್ಜಿ ವಜಾಗೊಳಿಸಿ ಕಾಲೇಜಿಗೆ ದಂಡ ವಿಧಿಸಿತು.

ಸರ್ಕಸ್‍ಗೆ ಸ್ಥಳಾವಕಾಶ: ಅರ್ಜಿ ವಜಾ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ಕಸ್ ನಡೆಸಲು ಸ್ಥಳಾವಕಾಶ ಕೋರಿ ಜೆಮಿನಿ ಹಾಗೂ ಜಂಬೋ ಸರ್ಕಸ್‍ಗಳ ಪ್ರವರ್ತಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮೋಹನ ಬಿ.ಶಾಂತನಗೌಡರ ಹಾಗೂ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿದೆ. ವಿಚಾರಣೆ ವೇಳೆ ಸರ್ಕಾರಿ ವಕೀಲ, ಅರಮನೆ ಮೈದಾನದಲ್ಲಿ ಸರ್ಕಸ್ ನಡೆಸಲು ಅವಕಾಶ ನೀಡಿದರೆ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರದ ಸಮಸ್ಯೆ ತಲೆದೋರುತ್ತದೆ ಹಾಗೂ ಸಮೀಪದಲ್ಲೇ ದೂರದರ್ಶನ ಕೇಂದ್ರವೂ ಇರುವುದರಿಂದ ಭದ್ರತೆಯ ಸಮಸ್ಯೆಯೂ ಹೆಚ್ಚುತ್ತದೆ. ಆದ್ದರಿಂದ ಸರ್ಕಸ್ ನಡೆಸಲು ಅವಕಾಶ ನೀಡಬಾರದು' ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ಪೀಠವು ಅರ್ಜಿ ವಜಾಗೊಳಿಸಿತು.

ಹೇಬಿಯಸ್ ಕಾರ್ಪಸ್ ಹಿಂಪಡೆದ ಬನ್ನಂಜೆ ರಾಜ
ತನ್ನನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂದು ಆರೋಪಿಸಿ ಭೂಗತ ಪಾತಕಿ ಬನ್ನಂಜೆ ರಾಜ ಸಲ್ಲಿಸಿದ್ದ ಹೇಬಿಯಸ್‍ಕಾರ್ಪ್‍ಸ್ ಅರ್ಜಿಯನ್ನು ಹಿಂಪಡೆದಿದ್ದಾರೆ.

ಮೊರಾಕ್ಕೋ ನ್ಯಾಯಾಲಯ ಯಾವ ಆರೋಪಗಳಿಗೆ ತನ್ನನ್ನು ಉಡುಪಿ ಪೊಲೀಸರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಕಾರಣ ನೀಡಿಲ್ಲ. ಆದ್ದರಿಂದ ತನ್ನನ್ನು ವಿನಾಕಾರಣ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ರಾಜಾ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ಬಿಳ್ಳಪ್ಪ ಮತ್ತು ನ್ಯಾ.ಕೆ. ಎನ್.ಪಣೀಂದ್ರ ಅವರಿದ್ದ ನ್ಯಾಯಪೀಠ, ಬಂಧನಕ್ಕೆ ಸಂಬಂಧಿಸಿದಂತೆ ಮೊರಾಕ್ಕೋ ನ್ಯಾಯಾಲಯದ ಆದೇಶದ ಲಭ್ಯವಾದ ಬಳಿಕ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಎಂದು ಅವಕಾಶ ಕಲ್ಪಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿ ಹಿಂಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com