ಬೆಂಗಳೂರು: ವೈದ್ಯರು ಕೈಗೊಂಡ ವಿಶ್ವಾಸಾರ್ಹತೆಯ ಸಂಶೋಧನೆಗಳಿಂದ ಕ್ಯಾನ್ಸರ್ ರೋಗವು ಶೇ.80 ರಷ್ಟು ನಿಯಂತ್ರಣದಲ್ಲಿದ್ದು, ಇದಕ್ಕೆ ಕಾರಣಕರ್ತರಾದ ವೈದ್ಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸುವು ದಾಗಿ ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಹೇಳಿದರು.
`ದಿ ಯೂರೋ- ಇಂಡಿಯನ್ ಹೆಲ್ತ್ ಕ್ಲಸ್ಟರ್', ಗ್ಲೋಬಲ್ ಕ್ಯಾನ್ಸರ್ ಫೌಂಡೇಷನ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಸಂಯುಕ್ತಾಶ್ರಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ `ಜಾಗತಿಕ ಕ್ಯಾನ್ಸರ್ ಶೃಂಗಸಭೆ- 2015' ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನು ಐದಾರು ವರ್ಷಗಳಲ್ಲಿ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧವನ್ನು ಕಂಡು ಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ವೈದ್ಯರು ತಮ್ಮ ಅನುಭವವನ್ನು ಉಪಯೋಗಿಸಿಕೊಂಡು ಕ್ಯಾನ್ಸರ್ ರೋಗ ನಿವಾರಣೆಗೆ ಔಷಧ ಕಂಡು ಹಿಡಿಯಬೇಕು. ಕ್ಯಾನ್ಸರ್ ರೋಗ ಯಾವುದರಿಂದ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಿ ನಂತರ ಔಷಧವನ್ನು ಕಂಡು ಹಿಡಿಯಬೇಕು. ತೆಳ್ಳಗಿರುವುದರಿಂದ, ಬಡತನದಲ್ಲಿ ಅಪೌಷ್ಟಿಕತೆ ಕೊರತೆಯಿಂದ ರೋಗ ಬರುತ್ತದೆ ಎಂದು ಹೇಳುವುದಾದರೆ ಶ್ರೀಮಂತರಲ್ಲಿ ಸಿರಿತನವಿದ್ದರೂ ಪೌಷ್ಟಿಕ ಆಹಾರ ಸೇವಿಸಿದರು ಕೂಡ ಕ್ಯಾನ್ಸರ್ ಬರುತ್ತದೆ. ಅಂದರೆ ಜನರು ವಾಸಿಸುವ ಪ್ರದೇಶ, ಸೇವಿಸುವ ಆಹಾರ, ಕುಡಿಯುವ ನೀರಿನಿಂದ ಕ್ಯಾನ್ಸರ್ ಬರಲ್ಲ. ಹೀಗಾಗಿ ಬದಲಾದ ಜೀವನ ಶೈಲಿ ಕಾರಣವಿರಬಹುದೆ? ಎಂಬುದನ್ನು ವೈದ್ಯರು ತಿಳಿಸಬೇಕು ಎಂದು ಹೇಳಿದರು.
ವೈದ್ಯರು ಕೈಗೊಳ್ಳುವ ಸಂಶೋಧನೆಗಳು ನಂಬಿಕೆ ಹುಟ್ಟುಹಾಕಿವೆ. ಭವಿಷ್ಯದಲ್ಲಿ ಮತ್ತಷ್ಟು ಸಮರ್ಪಕ ಸಂಶೋಧನೆಗಳಾದಲ್ಲಿ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ತೊಡೆದು ಹಾಕಬಹುದು. ಎಚ್ ಐವಿ ಮತ್ತು ಕ್ಯಾನ್ಸರ್ ಗುಣಪಡಿಸಲಾದ ರೋಗ ಎಂಬ ಮಾತುಗಳಿದ್ದವು. ಕಿಮೋಥೆರಪಿ, ರೇಡಿಯನ್ಸ್ ಥೆರಪಿಯಿಂದ ರೋಗ ಗುಣಪಡಿಸುವುದನ್ನು ನೋಡುತ್ತಿದ್ದೇವೆ. ಪ್ರಪಂಚದಲ್ಲಿ ಯಾವುದು ಅಸಾಧ್ಯ ಎನ್ನುವಂತದ್ದಿಲ್ಲ. ಆ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕಾಗಿದೆ. ರೋಗ ಬಂದ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಪ್ರತಿಯೊಬ್ಬರಿಗೂ ಆರೋಗ್ಯ ಸುರಕ್ಷತೆಗಾಗಿ ವಿಮೆ ಮಾಡಿಸಲಾಗಿದೆ. ರಾಜ್ಯ ಸರ್ಕಾರದ ಕಾಳಜಿ ಹೆಚ್ಚಿದೆ ಎಂದು ವಾಲಾ ತಿಳಿಸಿದರು.
ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಮಟ್ಟದಿಂದ ಗ್ರಂಥಿ ತಜ್ಞರು ಮತ್ತು ಥೆರಪಿಟಿಕ್ಸ್ ಭಾಗವಹಿಸಿದ್ದಾರೆ. ಕ್ಯಾನ್ಸರ್ ರೋಗ ಪತ್ತೆ ಹಚ್ಚಿ ಗುಣಪಡಿಸಲು ಅಗತ್ಯವಿರುವ ಅತ್ಯಾಧುನಿಕ ವೈದ್ಯಕೀಯ ವಿಧಾನ ಮತ್ತು ಥೆರಪಿಗಳ ಬಗ್ಗೆ ತಲಾಸ್ಪರ್ಶಿಯಾಗಿ ಚರ್ಚಿಸಲಿದ್ದಾರೆ.