ದೌರ್ಜನ್ಯ ಬೇಡ, ಪ್ರೀತಿ- ಮಾರ್ಗದರ್ಶನ ನೀಡಿ

ಬೆಂಗಳೂರು: ಎಲ್ಲರಂತೆ ನಮಗೂ ಸಂವಿಧಾನ ಹಕ್ಕುಕೊಟ್ಟಿದೆ. ನಮ್ಮ ಹಕ್ಕುಗಳ ರಕ್ಷಣೆ ನಿಮ್ಮೆಲ್ಲರ ಜವಾಬ್ದಾರಿ. ನಮ್ಮ ಮೇಲೆ ದೌರ್ಜನ್ಯ ನಡೆಸಬೇಡಿ, ಪ್ರೀತಿ, ಮಾರ್ಗದರ್ಶನ ನೀಡಿ ಎಂದು ಮಕ್ಕಳ ಉದ್ಘೋಷಗಳ ಮೊರೆತ ಕಬ್ಬನ ಪಾರ್ಕ್ನಲ್ಲಿ ನೆರೆದಿದ್ದವರ ಮುಂಜಾವಿನ ಮೈ ಕೊರೆಯುವ ಚಳಿಯನ್ನು ದೂರ ಓಡಿಸಿತು.
ಶುಕ್ರವಾರ ಮಕ್ಕಳಿಗೆ ಶಾಲಾ ಬ್ಯಾಗ್, ಪೆನ್ನು, ನೋಟ ಪುಸ್ತಕದ ಹೊರೆಯಿದ್ದಿಲ್ಲ. ಗೃಹಪಾಠಗಳ ಜಂಜಾಟವಿರಲಿಲ್ಲ. ಕಬ್ಬನ್ ಪಾರ್ಕ್ನಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಬಳಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ, ರಮೇಶ್ ವೆಲ್ ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್, ಲರ್ನಿಂಗ್ ಟುವಡ್ರ್ಸ್ ಸೋಶಿಯಲ್ ರೆಸ್ಪಾನ್ಸಿಬಲಿಟಿ ಟ್ರಸ್ಟ್ ಸಹಯೋಗದಲ್ಲಿ ನಡೆದ `ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ' ದಿನಾಚರಣೆಯಲ್ಲಿ 10 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಸಂತಸಪಟ್ಟರು.
ನೀಲಿ-ಬಿಳಿ ರಂಗು: ಪುಟಾಣಿಗಳು ತಮ್ಮ ಕೈಯಲ್ಲಿದ್ದ ನೀಲಿ ಮತ್ತು ಬಿಳಿ ಬಣ್ಣದ ಬಲೂನ್ ಹಾರಿಬಿಟ್ಟಾಗ ಬಾನಂಗಳದಲ್ಲಿ ಹಾರಾಡುತ್ತಿದ್ದ ಹದ್ದುಗಳು ಕ್ಷಣ ವಿಚಲಿತವಾದವು. ಕಳೆದ ಹತ್ತಾರು ದಿನಗಳಿಂದ ಮೋಡದ ಮರೆಯಲ್ಲಿ ಅವಿತು ಕುಳಿತಿದ್ದ ಸೂರ್ಯ ಮಕ್ಕಳ ಕಲರವ ವಿಕ್ಷಿಸಲು ಹೊರಬಂದವನಂತೆ ಹಿತಕರವಾದ ಬಣ್ಣಗಳನ್ನು ಸೂಸಿ ಮಕ್ಕಳ ಮನಸ್ಸಿಗೆ ಮುದ
ನೀಡಿದ. `ಗೀಯ್ ಗಾ, ಗಾಗಿಯ ಗೀಯ, ನಾವು ಬಂದೇವ ನಾವು ಬಂದೇವ ನಮ್ಮ ಕಷ್ಟ ಹೇಳುವುದಕ್ಕ' ಗೀತೆಯ ಮೂಲಕ ಬೀದಿ ನಾಟಕ ಮಾಡಿದ ಲಿಟಲ್ ಫ್ಲವರ್ ಶಾಲೆಯ ಮಕ್ಕಳು ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ ಕಾರ್ಮಿಕ ಪದ್ಧತಿ, ಬಡ್ಡಿ ವ್ಯವಹಾರ, ಜೀತ ಪದ್ಧತಿ, ಬಾಲ್ಯ ವಿವಾಹದ ಕುರಿತು ನಾಟಕ ಪ್ರದರ್ಶಿಸಿದರು. ನಾವು ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕೆಂದು ಸಾರಿ ಹೇಳಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಬದ್ಧವಾಗಿ ಮಕ್ಕಳಿಗೆ ಕೊಟ್ಟಿರುವ ಹಕ್ಕುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ಮಗುವಿನ ಹಕ್ಕು. ಹಾಗಾಗಿ ಪ್ರತಿಯೊಬ್ಬರಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಶಾಲೆಗಳಲ್ಲಿ ಮಕ್ಕಳಿಗೆ ರಕ್ಷಣೆ ನೀಡುವುದು ಸರ್ಕಾರ ಮತ್ತು ಶಿಕ್ಷಕರ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಚಿವರಾದ ಡಿ.ಕೆ. ಶಿವಕುಮಾರ್, ಎಸ್. ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಅಭಯಚಂದ್ರ ಜೈನ್, ಕಿಮ್ಮನೆ ರತ್ನಾಕರ್, ಮಹದೇವಪ್ರಸಾದ, ಶಾಸಕರಾದ ಐವಾನ್ ಡಿಸೋಜಾ, ಶಕುಂತಲಾ ಶೆಟ್ಟಿ, ನಾರಾಯಣ ಸ್ವಾಮಿ, ಎಂಎಲ್ಸಿ ಮೋಟಮ್ಮ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಉಪಸ್ಥಿತರಿದ್ದರು.
ಪ್ರತಿಯೊಂದು ಮಗು ತನಗೆ ತಾನೇ ರಕ್ಷಣೆ ಒದಗಿಸಿಕೊಂಡು ತಂದೆ ತಾಯಿಗೂ ಧೈರ್ಯ ಹೇಳುವ ಛಾತಿ ಬೆಳೆಸಿಕೊಳ್ಳಬೇಕು.
●ಉಮಾಶ್ರೀ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ.
ವಿಸರ್ಜನೆ ಹಕ್ಕಿಲ್ಲ
ಮಕ್ಕಳ ಹಕ್ಕುಗಳ ದಿನಾಚರಣೆಗೆ ಬಂದಿದ್ದ ಸಾವಿರಾರು ಮಕ್ಕಳು ಕಬ್ಬನ್ ಪಾರ್ಕ್ನಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಇಲ್ಲದ್ದರಿಂದ ಜಲಬಾಧೆ ತೀರಿಸಿಕೊಳ್ಳಲು ಪರದಾಡಿದರು. ಅದರಲ್ಲೂ ಹೆಣ್ಣುಮಕ್ಕಳು ಪಾಡು ಹೇಳತೀರದಾಗಿತ್ತು. ಬೆಳಗಿನ ಜಾವವೇ ಮನೆ ಬಿಟ್ಟಿದ್ದ ವಿದ್ಯಾರ್ಥಿಗಳಿಗೆ ಆಯೋಗದಿಂದ ಕನಿಷ್ಟ ತಿಂಡಿ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಈ ಬಗ್ಗೆ ಆಯೋಗದ ಅಧ್ಯಕ್ಷರನ್ನು ಪ್ರಶ್ನಿಸಿದಾಗ, ಬಿಸ್ಕಿಟ್, ಫ್ರೂಟಿ ಮತ್ತು ನೀರಿನ ವ್ಯವಸ್ಥೆ ಮಾಡಿದ್ದೇವೆ ಎಂದು ಉತ್ತರಿಸಿದರು. ಆದರೆ, ಎಷ್ಟೋ ವಿದ್ಯಾರ್ಥಿಗಳು ಬೆಳಗ್ಗೆ ತಿಂಡಿ ತಿಂದು ಬಂದಿಲ್ಲ ಎಂದು ಅವಲತ್ತುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


