ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆಯಿಂದಲೇ ಸುರಿದ ಭಾರಿ ಮಳೆಗೆ ಜನ ತತ್ತರಿಸಿದರು. ಸಂಜೆಗೆ ಸಣ್ಣದಾಗಿ ಆರಂಭವಾಗಿ ಕ್ರಮೇಣ ಜೋರಾಗಿ ಸುರಿದಿದ್ದರಿಂದ ಸವಾರರು ಪರದಾಡಿದರು.
ಒಂದು ವಾರದಿಂದ ನಗರದಲ್ಲಿ ಮೋಡಕವಿದ ವಾತಾವರಣವಿತ್ತು, ಜತೆಗೆ ಜಿಟಿ ಮಳೆ ಆಗುತ್ತಿತ್ತು. ಆದರೆ ಶುಕ್ರವಾರ ಬೆಳಿಗ್ಗೆ ಮಾತ್ರ ಕೆಲವು ದಿನಗಳ ಬಳಿಕ ಬಿಸಿಲಿನ ವಾತಾವರಣವಿತ್ತು. ಆದರೆ, ಬೆಳಗ್ಗೆ ಇದ್ದಕ್ಕಿದ್ದಂತೆ ಮಳೆ ಸುರಿಯಿತು. ಭಾರೀ ಮಳೆ ಸುರಿದ ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತ, ಕೆ.ಆರ್.ರಸ್ತೆ, ಕೆ.ಜಿ.ರಸ್ತೆ, ಜೆ.ಸಿ.ರಸ್ತೆ, ಪುಲಿಕೇಶಿ ನಗರ, ವಾಟಾಳ್ ನಾಗರಾಜ್ ರಸ್ತೆ, ಗೂಡ್‍ಶೆಡ್ ರಸ್ತೆ, ಕಾಟನ್ ಪೇಟೆ ರಸ್ತೆ, ಕೆಂಪೇಗೌಡ ಏರ್‍ಪೋರ್ಟ್ ರಸ್ತೆ ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಏರ್‍ಪೋರ್ಟ್ ನಿಂದ ಮನೆಗೆ ಹೋಗುತ್ತಿದ್ದ ಹಾಗೂ ಮನೆಯಿಂದ ಏರ್ ಪೋರ್ಟ್ ಗೆ ಹೋಗುತ್ತಿದ್ದ ನೂರಾರು ಪ್ರಯಾಣಿಕರು ಪರದಾಡಿದರು. ಮತ್ತೊಂದೆಡೆ ನಗರದ ರಸ್ತೆಗಳೆಲ್ಲ ಗುಂಡಿಮಯವಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮತ್ತಷ್ಟು ಕಿರಿಕಿರಿ ಉಂಟಾಗಿತ್ತು. ರಾತ್ರಿಯಾದರೂ ಸಂಚಾರ ಪೊಲೀಸರು ವಾಹನ ದಟ್ಟಣೆ ಯಂತ್ರಿಸಲು ಹರಸಾಹಸಪಡುತ್ತಿದ್ದುದು ಸಾಮಾನ್ಯವಾಗಿತ್ತು.