ಬೆಂಗಳೂರು: ನಗರದಲ್ಲಿ ನೀರಿಗಾಗಿ ಜನ ಪರದಾಡುತ್ತಿರುವಾಗ, ಪ್ರತೀ ದಿನ ಇಲ್ಲಿ 10 ಮಿಲಿಯನ್ ಲೀಟರ್ ನೀರು ಪೋಲಾಗುತ್ತಿದೆ. ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಆಗುತ್ತಿರುವ ಪೈಪ್‌ಲೈನ್ ಸೋರಿಕೆಯಾಗುತ್ತಿದ್ದು, ಕಳೆದ ಒಂದು ತಿಂಗಳಿಂದ ಪ್ರತೀ ದಿನ ಇಷ್ಟೊಂದು ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ.
2.7 ಮೀಟರ್ ಸುತ್ತಳತೆಯ ಪೈಪ್ ಮೂಲಕ ತೊರೈಕಾಡನಹಳ್ಳಿ (ಟಿಕೆ ಹಳ್ಳಿ)ಯಿಂದ ಹಾರೋಹಳ್ಳಿಗೆ ನೀರು ಸರಬರಾಜು ಆಗುತ್ತಿದೆ. ಅದರ ವಾಯು ಕವಾಟ (ಏರ್ ವಾಲ್ವ್ )ನಲ್ಲಿ ತೂತು ಕಂಡುಬಂದಿದ್ದು ನೀರು ಪೋಲಾಗಲು ಇದೇ ಕಾರಣ. ಬೆಂಗಳೂರಿನಿಂದ 80 ಕಿಮೀ ದೂರದಲ್ಲಿರುವ ಗುಂಡಾಪುರ್ ಗ್ರಾಮದಲ್ಲಿರುವ ಭದ್ವವಾದ 20್ಢ30 ವಾಲ್ವ್ ಹೌಸ್‌ನಲ್ಲಿ ಈ ಏರ್ ವಾಲ್ವ್ ಸ್ಥಿತಿಗೊಂಡಿದೆ.
ಬೆಂಗಳೂರು ಜಲ ಪೂರೈಕೆ ಮತ್ತು ಒಳ ಚರಂಡಿ (BWSSB ) ನೌಕರರು ಏರ್ ವಾಲ್ವ್ ಬಳಿ ಸೋರಿಕೆಯಾಗುತ್ತಿರುವ ನೀರನ್ನು ಹೊರ ಹರಿಯಲು ಬಿಟ್ಟಿದ್ದಾರೆ. ಹೀಗೆ ಹೊರ ಹರಿಯುತ್ತಿರುವ ನೀರನ್ನು ಆ ಗ್ರಾಮದ ಜನರು ಕೃಷಿಗಾಗಿ ಬಳಸುತ್ತಿವೆ ಎಂದು ಬಲ್ಲಮೂಲಗಳು ಹೇಳಿವೆ.
ಆದಾಗ್ಯೂ, ನೀರು ಸೋರಿಕೆಯಾಗುತ್ತಿರುವುದು ತಿಳಿದಿದ್ದರೂ ಸಂಬಂಧಪಟ್ಟ ಇಲಾಖೆಯವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ಆರೋಪಿಸಿದ್ದಾರೆ.
ಪ್ರಸ್ತುತ ಬೆಂಗಳೂರು ನಗರಕ್ಕೆ ಪ್ರತಿ ದಿನ 1, 400 ಮಿಲಿಯನ್ ಲೀಟರ್ ಲಭಿಸುತ್ತಿದೆ. ಇದರಲ್ಲಿ 135 ಮಿಲಿಯನ್ ಲೀಟರ್ ನೀರು ಕಾವೇರಿ ನೀರು ಮೊದಲ ಹಂತದ ಯೋಚನೆಯ ಭಾಗವಾಗಿ ಸರಬರಾಜು ಆಗುತ್ತಿದೆ.