ಬೆಂಗಳೂರು: ತುಳುನಾಡಿನ ಸಾಂಪ್ರದಾಯಿಕ ಸ್ಪರ್ಧೆ ಕಂಬಳ ನಡೆಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ನ್ಯಾಯಾಲಯದ ಕಟ್ಟುಪಾಡುಗಳಿಗೆ ಬದ್ದವಾಗಿ ಈ ಸ್ಪರ್ಧೆಯನ್ನು ನಡೆಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಉಡುಪಿ ಜನರು ತಮ್ಮ ಸಾಂಪ್ರದಾಯಿಕ ಕ್ರೀಡೆ ಕಂಬಳ ನಡೆಸಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸ್ವೀಕರಿಸಿದ ಸರ್ಕಾರ ಜಿಲ್ಲಾಡಳಿತದವರು ಆಯಾ ಜಿಲ್ಲೆಯಲ್ಲಿ ಸ್ಪರ್ಧೆಗೆ ಅನುಮತಿ ನೀಡಬೇಕೆಂದು ಹೇಳಿದೆ.
ಆದಾಗ್ಯೂ, ಸುಪ್ರೀಂ ಕೋರ್ಟ್‌ನ ಕಟ್ಟುಪಾಡುಗಳಿಗೆ ಬದ್ಧವಾಗಿ ಈ ಸ್ಪರ್ಧೆಯನ್ನು ನಡೆಸಬೇಕು. ಇಲ್ಲಿ ಈ ಕಟ್ಟುಪಾಡುಗಳನ್ನು ಉಲ್ಲಂಘಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಜಿಲ್ಲಾಡಳಿತ ಮತ್ತು ಪ್ರಾಣಿಗಳ ಹಕ್ಕು ಸಂರಕ್ಷಣಾ ಸಂಸ್ಥೆಗಳು ನಿಗಾವಹಿಸಲಿವೆ ಎಂದು ಪಶುಸಂಗೋಪನ ಸಚಿವ ಎ. ಮಂಜು ಹೇಳಿದ್ದಾರೆ.
ಕಂಬಳ ನಡೆಯುವಾಗ ಎತ್ತುಗಳಿಗೆ ಹೊಡೆಯುವಂತಿಲ್ಲ. ಅವುಗಳ ದೇಹದ ಮೇಲೆ ಯಾವುದೇ ದ್ರಾವಣಗಳನ್ನು ಸವರುವಂತಿಲ್ಲ. ಯಾವುದೇ ಕಾರಣಕ್ಕೂ ಪ್ರಾಣಿಗಳಿಗೆ ನೋವು ಮಾಡುವಂತಿಲ್ಲ. ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರಾಣಿಗಳಿಗೆ ಯಾವುದೇ ನೋವು ಮಾಡದೆ ಕಂಬಳ ನಡೆಸಬೇಕಾಗಿದೆ ಎಂಬುದು ನ್ಯಾಯಾಲಯದ ಆದೇಶವಾಗಿದೆ.