ಅಪ್ಪನ ಕೊಂದ ಮಗ, ಮಗನ ಕೊಂದ ಅಪ್ಪ!

ಒಂದೆಡೆ ತಂದೆಯನ್ನು ಮಗ ಕೊಂದರೆ, ಮತ್ತೊಂದೆಡೆ ಮಗನನ್ನು ತಂದೆ ಕೊಲೆ ಮಾಡಿದ ವಿಚಿತ್ರ ಘಟನೆ ಹಾಸನ ಹಾಗೂ ತುಮಕೂರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಹಾಸನ/ತುರುವೇಕೆರೆ: ಒಂದೆಡೆ ತಂದೆಯನ್ನು ಮಗ ಕೊಂದರೆ, ಮತ್ತೊಂದೆಡೆ ಮಗನನ್ನು ತಂದೆ ಕೊಲೆ ಮಾಡಿದ ವಿಚಿತ್ರ ಘಟನೆ ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನಡೆದಿವೆ. 
ದಿನ ನಿತ್ಯ ಕಿರುಕುಳ ಕೊಡುತ್ತಿದ್ದ ಕಾರಣಕ್ಕೆ ತಂದೆಯನ್ನು ಕೊಂದಿದ್ದೇನೆಂದು ಮಗ ಹೇಳಿಕೊಂಡರೆ, ರೋಗಿಷ್ಠ ಮಗನ ವರ್ತನೆಯಿಂದ ಬೇಸತ್ತು ತಂದೆ ಕೊಲೆ ಮಾಡಿದ್ದಾನೆ. ಹಾಸನ ಜಿಲ್ಲೆಯ ದುದ್ದ ತಾಲೂಕಿನ ಚಿಕ್ಕಮೈನಹಳ್ಳಿಯಲ್ಲಿ ಪ್ರತಿದಿನ ಕುಡಿದು ಕಿರುಕುಳ ನೀಡುತ್ತಿದ್ದ ತಂದೆ ಮಂಜೇಗೌಡ (51) ಎಂಬುವರನ್ನು ಮಗ ಸುನಿಲ್ ಒನಕೆಯಿಂದ ಹೊಡೆದು ಕೊಂದಿದ್ದಾನೆ. 
ಕುಡಿತದ ಚಟಕ್ಕೆ ದಾಸನಾಗಿದ್ದ ಮಂಜೇಗೌಡ, ಪ್ರತಿದಿನ ಮನೆ ಮಂದಿಗೆಲ್ಲ ಚಿತ್ರಹಿಂಸೆ ನೀಡುತ್ತಿದ್ದ. ಅಲ್ಲದೆ, ಮನೆ ಹಾಗೂ ಜಮೀನನ್ನೂ ಮಾರಿದ್ದು, ಕುಟುಂಬದವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಮಂಜೇಗೌಡ, ಮರು ಮದುವೆಯಾಗುವುದಾಗಿ ಹೇಳುತ್ತಿದ್ದ. 
ಇದರಿಂದ ರೋಸಿಹೋಗಿದ್ದ ಸುನಿಲ್, ಕುಡಿದು ಜಗಳಕ್ಕಿಳಿದ ತಂದೆಯನ್ನು ಹತ್ಯೆಗೈದಿದ್ದಾನೆ. ಮಗನ ಕೊಂದ ತಂದೆ: ತುರುವೇಕೆರೆ ತಾಲೂಕಿನ ನಾಗಲಾಪುರ ಗ್ರಾಮದ ರಿಹಾನ್ (16) ಎಂಬಾತನನ್ನು ತಂದೆ ಉಮರ್ದರಾಜ್ ಕೊಲೆ ಮಾಡಿದ್ದಾನೆ. ರೋಗಿಷ್ಠ, ಏನು ಕೆಲಸ ಹೇಳಿದರೂ ಮಾಡಲಾಗದ ಸ್ಥಿತಿ. ಸದಾ ಮಲಗೇ ಇರುತ್ತಿದ್ದ ಎಂಬ ಕಾರಣಕ್ಕೆ ಕುಪಿತಗೊಂಡು ಈ ಕೃತ್ಯ ನಡೆಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ರೋಗದ ಕಾರಣದಿಂದ ರಿಹಾನ್ ದೇಹ ಕೃಶವಾಗಿತ್ತು. ತಂದೆ ಹೇಳಿದ ಕೆಲಸವನ್ನು ತಕ್ಷಣವೇ ಮಾಡಲು ಅಸಹಾಯಕನಾಗಿದ್ದ. ಸದಾ ಮಲಗಿರುತ್ತಿದ್ದ, ತಂದೆ ಉಮರ್ದರಾಜ್ ತೋಟದಿಂದ ಮನೆಗೆ ಬಂದವನೇ ಮಲಗಿದ್ದ ಮಗನಿಗೆ ತೋಟಕ್ಕೆ ಹೋಗಲು ಹೇಳಿದ್ದಾನೆ. 
ಮಾತಿಗೆ ಸ್ಪಂದಿಸದೆ ಮತ್ತೆ ಮಲಗಿದ್ದರಿಂದ ಕೋಪಗೊಂಡ ತಂದೆ ಉಮರ್ದರಾಜ್ ಮಾಂಸ ಕಡಿಯುವ ಕತ್ತಿಯಿಂದ ಕೊಲೆ ಮಾಡಿದ್ದಾನೆ ಎಂದು ರಿಹಾನ್‍ನ ತಾಯಿ ಶಬೀನಾ ತಾಜ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕೊಲೆ ಆರೋಪಿ ಉಮರ್ದರಾಜ್‍ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com