ಪಾಲಿಕೆ ರು.164 ಕೋಟಿ ಗೌಪ್ಯ ಉಳಿತಾಯ ಪತ್ತೆ

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಬಿಬಿಎಂಪಿಯ ನೂರಾರು ಚಾಲ್ತಿ ಬ್ಯಾಂಕ್ ಖಾತೆಗಳಲ್ಲಿ ರು.164 ಕೋಟಿ ಮೊತ್ತವನ್ನು ಗೌಪ್ಯವಾಗಿ ಉಳಿಸಿರುವುದನ್ನು ತೆರಿಗೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಪತ್ತೆಹಚ್ಚಿದ್ದಾರೆ.
ಸಮಿತಿಯ ಅಧ್ಯಕ್ಷರಾಗಿ ನೂರು ದಿನ ಪೂರೈಸಿದರ ಅಂಗವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಶಿವರಾಜು, ಕಳೆದ ನಾಲ್ಕು ವರ್ಷಗಳಲ್ಲಿ ಪಾಲಿಕೆಯ ಹೆಸರಿನಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿನ 900ಕ್ಕೂ ಹೆಚ್ಚು ಚಾಲ್ತಿ ಖಾತೆಗಳಲ್ಲಿ ರು. 164 ಕೋಟಿ ಉಳಿದಿದೆ. ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಕಾಪಾಡುವ ದೃಷ್ಟಿಯಿಂದ 900ಕ್ಕೂ ಹೆಚ್ಚು ಚಾಲ್ತಿ ಖಾತೆಗಳಲ್ಲಿನ ಹಣವನ್ನು ಪಾಲಿಕೆ ಖಾತೆಗೆ ವರ್ಗಾವಣೆ ಮಾಡಿ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ 26 ಉಳಿತಾಯ ಖಾತೆಗಳನ್ನು ಪ್ರಾರಂಭಿಸಲಾಗಿದೆ. ಪಾಲಿಕೆಯ ನಿಯಮಾವಳಿ ಪ್ರಕಾರ ವಲಯ ಕಚೇರಿಗಳ ಖಾತೆಯಲ್ಲಿನ ಹಣ ವಾರದೊಳಗೆ ಕೇಂದ್ರ ಕಚೇರಿಯ ಖಾತೆಗೆ ವರ್ಗಾವಣೆಯಾಗಬೇಕು.
ಆದರೆ, ವಲಯ ಕಚೇರಿಗಳ ಖಾತೆಯಲ್ಲಿನ ಹಣ ವರ್ಷಗಳು ಕಳೆದರೂ ಕೇಂದ್ರ ಕಚೇರಿಯ ಖಾತೆಗೆ ಬಂದಿಲ್ಲದ ಕಾರಣ ಪಾಲಿಕೆಗೆ
ನಷ್ಟವಾಗಿದೆ ಎಂದರು. ದಕ್ಷಿಣ ವಲಯದ ಖಾತೆಯಲ್ಲಿಯೇ ರು. 107 ಕೋಟಿ ಗೌಪ್ಯವಾಗಿ ಉಳಿದಿರುವುದು ಕಂಡುಬಂದಿದ್ದು, ಜಾಹೀರಾತು ವಿಭಾಗದ ಖಾತೆಗಳಲ್ಲಿ ರು. 37.15 ಕೋಟಿ ಉಳಿಸಿಕೊಳ್ಳಲಾಗಿತ್ತು. ಎಲ್ಲ ವಲಯಗಳಲ್ಲಿ ಹಣಕಾಸು ವರ್ಗಾವಣೆಯನ್ನು ಚಾಲ್ತಿ ಖಾತೆಯಲ್ಲಿ
ನಡೆಸಲಾಗಿದ್ದು, ಉಳಿತಾಯ ಖಾತೆ ಮೂಲಕ ವರ್ಗಾವಣೆ ನಡೆಸಿದಿದ್ದರೆ ಬಡ್ಡಿ ರೂಪದಲ್ಲಿ ಪ್ರತಿವರ್ಷ ಪಾಲಿಕೆಗೆ ರು.20 ಕೋಟಿ ಬರಬೇಕಿತ್ತು. ಈ ಕುರಿತು ಆಯುಕ್ತರಿಗೆ ಪತ್ರ ಬರೆದು ಪಾಲಿಕೆಗೆ ನಷ್ಟವಾಗಲ್ಲಿ ಪಾತ್ರವಹಿಸಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.
ತೆರಿಗೆ ಸಂಗ್ರಹದಲ್ಲಿ ಹೆಚ್ಚಳ: ಅಧಿಕಾರವಹಿಸಿಕೊಂಡ 100 ದಿನಗಳಲ್ಲಿ ರು. 264 ಕೋಟಿ ವಸೂಲು ಮಾಡಲಾಗಿದ್ದು, ಸರ್ಕಾರ ನೀಡಿರುವ ರು.2400 ಕೋಟಿ ಸಂಗ್ರಹ ಗುರಿಯನ್ನು ತಲುಪಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ವಲಯವಾರು
ಪ್ರಗತಿ ಪರಿಶೀಲನೆ ವೇಳೆ ರು. 7.17 ಕೋಟಿ ಮೊತ್ತದ 5618 ಚೆಕ್‍ಗಳು ಬೌನ್ಸ್ ಆಗಿದ್ದು, ಜನವರಿ 1ರವರೆಗೆ 1839 ಚೆಕ್‍ಗಳಿಂದ ರು. 1.58 ಕೋಟಿ ನಗದಾಗಿದೆ. ಉಳಿದ ಚೆಕ್‍ಗಳ ಹಣವನ್ನು ಜ.10ರೊಳಗೆ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ನಗರದ
ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು 198 ವಾರ್ಡ್‍ಗಳ ಆಸ್ತಿ ವಿವರ ಪಟ್ಟಿಯನ್ನು ವಾರ್ಡ್ ವಾರು ಸಲ್ಲಿಸುವಂತೆ ಸೂಚಿಸಲಾಗಿದೆ.
ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರನ್ನು ಪತ್ತೆ ಹಚ್ಚಲು ಮೊದಲ ಹಂತದಲ್ಲಿ 5 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳ ಮರುಮೌಲ್ಯಮಾಪನ ಕೈಗೊಳ್ಳಲಾಗುವುದು. ಅಲ್ಲದೆ, ತೆರಿಗೆ ವಸೂಲಿಗಾಗಿ ಪ್ರತಿ ಬುಧವಾರ ಹಮ್ಮಿಕೊಳ್ಳುತ್ತಿದ್ದ ವಿಶೇಷ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಈ ವರ್ಷ ಎರಡನೇ ಹಂತ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಶಿವರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


