

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲೇ ನಡೆದಿದ್ದ ಲಂಚ ಪ್ರಕರಣದಲ್ಲಿ ಮಾಜಿ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸುವಂತೆ ಸಲ್ಲಿಸಿದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೋಪಯ್ಯ, ಹಗರಣದ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ನೀವು ಭಾಸ್ಕರ್ ರಾವ್ ವಿರುದ್ಧ ಸಲ್ಲಿಸಿರುವ ದಾಖಲೆಗಳು ಅವರನ್ನು ಆರೋಪಿಯನ್ನಾಗಿ ಮಾಡಲು ಸಾಕಾಗುವುದಿಲ್ಲ. ಅಲ್ಲದೇ ಹಗರಣದಲ್ಲಿ ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕೆ ತಂದೆಯನ್ನು ಆರೋಪಿಯನ್ನಾಗಿಸಲು ಸಾಧ್ಯವಿಲ್ಲ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದರು.
ಹಗರಣದಲ್ಲಿ ಭಾಸ್ಕರ್ ರಾವ್ ಪಾತ್ರವಿದ್ದು, ತಮ್ಮ ಮಗ ಅಶ್ವಿನ್ ರಾವ್ ಮೂಲಕ ಲೋಕಾ ಕಚೇರಿಯಲ್ಲೇ ಅಧಿಕಾರಿಗಳಿಂದ ಲಂಚ ವಸೂಲಿ ಮಾಡಿದ್ದಾರೆ. ಲೋಕಾಯುಕ್ತರ ಅಧಿಕೃತ ನಿವಾಸದಲ್ಲಿಯೂ ಕೂಡ ಭ್ರಷ್ಟಾಚಾರ ನಡೆಸಿದ್ದಾರೆ. ಈ ಸಂಬಂಧ ಪ್ರಕರಣದಲ್ಲಿ ಭಾಸ್ಕರ್ ರಾವ್ ಅವರನ್ನು ಆರೋಪಿ-ಯನ್ನಾಗಿ ಮಾಡಬೇಕು ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಅರ್ಜಿ ಸಲ್ಲಿಸಿದ್ದರು.