ಆಸೆ, ಆಮಿಷಗಳಿಗೆ ಮತದಾರ ಬಲಿಯಾಗುವುದಿಲ್ಲ
ಚನ್ನಪಟ್ಟಣ: ಈ ನೆಲದ ಜನತೆ ನಂಬಿರುವ ತತ್ವ ಸಿದ್ಧಾಂತಗಳಲ್ಲಿ ಗಟ್ಟಿತನವಿದ್ದು ಚುನಾವಣಾ ಸಮಯದಲ್ಲಿ ಕೆಲ ಮಂದಿ ನೀಡುವ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಕ್ಷೇತ್ರದ ಸಂಭವನೀಯ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆ ಗೊಂಡ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ಜೆಡಿಎಸ್ ತತ್ವ ಸಿದ್ದಾಂತ, ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಮೆಚ್ಚಿ ಬರುತ್ತಿರುವವರ ನಂಬಿಕೆಯನ್ನು ಪಕ್ಷ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದರು.
ಹಿಂದಿನಿಂದಲೂ ಸ್ವಾಭಿಮಾನಕ್ಕಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಇಲ್ಲಿನ ಜನತೆ ಪ್ರಮಾಣಿಕರಾಗಿದ್ದು, 12ವರ್ಷಗಳಿಂದ ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗದೆ ಜನತೆ ಪರಿತಪಿಸುತ್ತಿದ್ದು, ಈ ಜನತೆಯ ಸೇವೆ ಮಾಡುವ ಉದ್ದೇಶದಿಂದ ನಾನು ಕಣಕ್ಕಿಳಿಯುತ್ತಿದ್ದೇನೆ ಎಂದರು.ಆನೆಬಲ ಬಂದಿದೆ: ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಅನ್ಯ ಪಕ್ಷಗಳಿಂದ ಜೆಡಿಎಸ್ಗೆ ಸೇರ್ಪಡೆ ಗೊಳ್ಳುತ್ತಿದ್ದು ಇದರೊಂದಿಗೆ ನಮ್ಮ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲವು ಸಾಧಿಸುವುದು ಶತಸಿದ್ಧವಾಗಿದ್ದು ಇದನ್ನು ತಪ್ಪಿಸಲು ಯಾರು ಏನು ಮಾಡಿದರೂ ಸಾಧ್ಯವಿಲ್ಲ ಎಂದರು. ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಆಗಮಿಸಲು ಸಾಕಷ್ಟು ಮಂದಿ ತುದಿಗಾಲಲ್ಲಿ ನಿಂತಿದ್ದು ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಬರುವ ಎಲ್ಲರಿಗೂ ಸ್ವಾಗತವಿದೆ ಎಂದು ತಿಳಿಸಿದ ಅವರು, ಪಕ್ಷದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ಸಂಘಟಿಸುವುದಾಗಿ ತಿಳಿಸಿದರು.
ಜೆಡಿಎಸ್ ಬೆಂಬಲಿಸಿ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ, ಸರ್ಕಾರಿ ಸವಲತ್ತುಗಳನ್ನು ಸಾರ್ವಜನಿಕರಿಗೆ ತಲುಪಿಸಲು ಜೆಡಿಎಸ್ ಬೆಂಬಲಿಸ ಬೇಕಿದ್ದು ಮತದಾರರಿಗೆ ಜೆಡಿಎಸ್ ಅಗತ್ಯತೆಯನ್ನು ಮನವರಿಕೆ ಮಾಡಿ ಕೊಟ್ಟು ಪಕ್ಷದಪರ ಮತಚಲಾಯಿಸುವಂತೆ ನೋಡಿ ಕೊಳ್ಳಿ ಎಂದು ಸಂಭವನೀಯ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ತಿಳಿಸಿದರು.
ತಾಲೂಕು ಜೆಡಿಎಸ್ ದಿನದಿಂದ ದಿನಕ್ಕೆ ಸದೃಢಗೊಳ್ಳುತ್ತಿದ್ದು, 1994ರ ಚುನಾವಣೆಯ ದಿನಗಳು ಮತ್ತೆ ಮರುಕಳಿಸುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅನಿತಾಕುಮಾರಸ್ವಾಮಿ, ಜನತೆ ನಮ್ಮ ಪಕ್ಷವನ್ನು ಬೆಂಬಲಿಸಲು ಮುಂದಾಗಿರುವ ಸಂಗತಿ ಮನದಟ್ಟಾಗಿದ್ದ ಸದಾಕಾಲ ಜನ ಸೇವೆಯನ್ನೇ ಗುರಿಯಾಗಿಸಿ ಕೊಂಡಿರುವ ಜೆಡಿಎಸ್ ಗೆಲವಿಗೆ ಶ್ರಮಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುದುಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಇತ್ತೀಚಿಗೆ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದ ದೀಪು ಮತ್ತೆ ಜೆಡಿಎಸ್ಗೆ ಮರಳಿದರೆ, ಪಾಂಡು, ಶಿವಪ್ಪ, ರಾಜು, ನವೀನ, ರವಿ ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ನಿಂದ ಜೆಡಿಎಸ್ಗೆ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜುನಗೌಡ, ವಿಶಾಲ್ರಘು, ತಾ.ಪಂ ಸದಸ್ಯ ಕಾಂತರಾಜು, ಗ್ರಾ.ಪಂ ಸದಸ್ಯ ಜಯಕುಮಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

