ಬೆಂಗಳೂರು ಗ್ರಾಮಾಂತರ

'ನ್ಯಾಯವಾದಿ-ನ್ಯಾಯಾಧೀಶರು ಒಗ್ಗಟ್ಟಿನಿಂದ ಕೆಲಸ ಮಾಡಲಿ'

Published On :

ಕ.ಪ್ರ. ವಾರ್ತೆ   ಮಾಗಡಿ   ಏ.1-
ಅನ್ಯಾಯಕ್ಕೊಳಗಾದ  ಜನತೆಗೆ ಶೀಘ್ರ  ನ್ಯಾಯ ಸಿಗಬೇಕಾದರೆ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು ಒಗ್ಗಟ್ಟಿನಿಂದ  ಮತ್ತು ಜವಾಬ್ದಾರಿಯಿಂದ  ಪ್ರಾಮಾಣಿಕವಾಗಿ  ತಮ್ಮ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾ ಆಡಳಿತಾತ್ಮಕ  ನ್ಯಾಯಾಧೀಶ ಕೆ.ಎನ್. ಕೇಶವ ನಾರಾಯಣ ನುಡಿದರು. ಅವರು ಮಾಗಡಿ ಜಿಲ್ಲಾ ಮತ್ತು ತಾಲೂಕು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ  ನ್ಯಾಯಾಲಯ ಮತ್ತು ಎರಡನೇ ಅಪರ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಗಳನ್ನು  ಶನಿವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶೇ. 40 ರಷ್ಟು ಅನಕ್ಷರಸ್ಥರಿದ್ದಾರೆ. ನೇರವಾಗಿ  ಕಕ್ಷಿದಾರರೇ   ಕಟ್ಲೆ  ನಡೆಸಲಿಕ್ಕೆ ಸಾಧ್ಯವಿಲ್ಲ, ವಕೀಲರ ಅನಿವಾರ್ಯತೆ ಇದೆ. ವಕೀಲರು ಕಡಿಮೆ ಖರ್ಚಿನಲ್ಲಿ ಕಕ್ಷಿದಾರರರಿಗೆ ನ್ಯಾಯ ಒದಗಿಸಿ ಕೊಡಲು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ  ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ವಕೀಲರು, ನ್ಯಾಯಾಧೀಶರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದರು.
ಸಂತಸದ ಸಂಗತಿ: ತಾಲೂಕಿನ ವಕೀಲರ ಸಂಘದ ಅಧ್ಯಕ್ಷ  ಜಿ.ಪಾಪಣ್ಣ ಮಾತನಾಡಿ, ತಾಲೂಕಿನಲ್ಲಿ ಮತ್ತೆರಡು ನ್ಯಾಯಾಲಯ ಉದ್ಘಾಟನೆ ಗೊಂಡಿರುವುದು ಸಂತಸ ಸಂಗತಿಯಾಗಿದ್ದರೂ ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯಗಳು ಅಗತ್ಯವಿದೆ. ಸರ್ಕಾರಿ ಅಭಿಯೋಜಕರಿಗಳಿಗೆ ವಸತಿ ಗೃಹ, ನ್ಯಾಯಾಲಯದ ವಿವಿಧ ಚಟುವಟಿಕೆಗಳು ನಡೆಯಲಿಕ್ಕೆ ಸುಂದರ ಸಭಾಂಗಣ, ಮಧ್ಯಸ್ಥಿಕೆ ರಾಜಿ  ಸಂಧಾನಕ್ಕೆ ಅಗತ್ಯ  ಪೀಠೋಪಕರಣಗಳನ್ನು ಒದಗಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ತಾಲೂಕಿನಲ್ಲಿ ಸುಸಜ್ಜಿತ ನ್ಯಾಯಾಲಯದ ಕಟ್ಟಡ ಹೊಂದಿದ್ದು, ತಾವರೆಕೆರೆ ಹೋಬಳಿಯ ಪ್ರಕರಣಗಳನ್ನು ಮಾಗಡಿ ನ್ಯಾಯಾಲಯಕ್ಕೆ ಒಳಪಡಿಸಿಕೊಳ್ಳಲು  ನ್ಯಾಯಾಂಗ ವ್ಯವಸ್ಥೆ ಮಾಡಿದೆ. ನ್ಯಾಯಾಲಯದ ಆವರಣದ ಸುತ್ತಲೂ ಗಿಡಿ ಬೆಳೆದು ನಿಂತಿದೆ. ಪುರಸಭೆ ಗಮನಕ್ಕೆ ತಂದು  ಗಿಡ ತೆಗೆಸಿ ಸ್ವಚ್ಛತೆ ಕಾಪಾಡುವ ಮೂಲಕ ನ್ಯಾಯಾಲಯದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕು.  ಜನತಾ ನ್ಯಾಯಾಲಯ, ಲೋಕ ಅದಲಾತ್, ಮಧ್ಯಸ್ಥಿಕೆಯ ರಾಜಿ ಸಂಧಾನ ಮೂಲಕವೂ ನ್ಯಾಯದಾನ ಕೊಡಿಸಿದರೆ, ಬಡ ರೈತರು ನ್ಯಾಯಾಲಯಕ್ಕೆ ಅಲೆಯುವುದು
ತಪ್ಪುತ್ತದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ  ಹುಲವಾಡಿ ಜಿ.ರಮೇಶ್ ಹೇಳಿದರು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ  ಎಂ.ಕೆ. ಪ್ರಹ್ಲಾದ್, ಜಿಲ್ಲಾ ಅಪರ ಸಿವಿಲ್ ನ್ಯಾಯಾಧೀಶ  ಕೆ.ನಾರಾಯಣ ಪ್ರಸಾದ್,  ಪ್ರಧಾನ  ಸಿವಿಲ್ ಮತ್ತು ಜೆ.ಎಂ.ಎಫ್.ಸಿ.  ನ್ಯಾಯಾಧೀಶೆ ಎಸ್. ಶ್ಯಾಮಲ, ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಎನ್.ಡಿ. ಮಾಲಾ, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಮುನಿಸ್ವಾಮಿ ನಾಯಕ್, ಉಪಾಧ್ಯಕ್ಷ ರಂಗಯ್ಯ, ಸಿದ್ದಲಿಂಗಪ್ಪ, ಖಜಾಂಚಿ ಎಲ್. ನಾಗರಾಜು, ಜಂಟಿ ಕಾರ್ಯದರ್ಶಿ ಆರ್. ಹರೀಶ್, ವಕೀಲರಾದ ಡಿ.ಎಚ್.ಮಲ್ಲಿಕಾರ್ಜುನಯ್ಯ, ಕೆಂಪಣ್ಣ, ಸುರೇಶ್, ರಮೇಶ್, ಸಿದ್ದರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.