ಸೈನಿಕನ ಉತ್ಸಾಹಕ್ಕೆ ಕಾಣದ ಕೈ ತಣ್ಣೀರು!
ಮತ್ತೀಕೆರೆ ಜಯರಾಮ್
ರಾಮನಗರ: ರೇಷ್ಮೆನಾಡಿನಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಇದೀಗ ವಿದ್ಯುಕ್ತವಾಗಿ ಸಜ್ಜಾಗಿದೆ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಎದುರಾಳಿಯಾಗಿರುವ ಜೆಡಿಎಸ್ ತ್ತು ಕಾಂಗ್ರೆಸ್ ಎಲ್ಲ ನಾಲ್ಕೂ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿವೆ. ಕಾಂಗ್ರೆಸ್ಗೆ 2 ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಾಕುವ ಸಾಧ್ಯತೆ ನಿಚ್ಚಳವಾಗಿದೆ.
ನಿರೀಕ್ಷೆಯಂತೆಯೇ ಜೆಡಿಎಸ್ನಿಂದ ಎಚ್.ಡಿ.ಕುಮಾರಸ್ವಾಮಿ-ರಾಮನಗರ, ಅನಿತಾ ಕುಮಾರಸ್ವಾಮಿ-ಚನ್ನಪಟ್ಟಣ, ಪಿ.ಜಿ.ಆರ್.ಸಿಂಧ್ಯಾ-ಕನಕಪುರ, ಎಚ್.ಸಿ.ಬಾಲಕೃಷ್ಣ-ಮಾಗಡಿ ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್ನಿಂದ ಡಿ.ಕೆ.ಶಿವಕುಮಾರ್ ಕನಕಪುರ, ಎ.ಮಂಜುನಾಥ್ ಮಾಗಡಿ, ಮರಿದೇವರು-ರಾಮನಗರದ ಅಭ್ಯರ್ಥಿಗಳು.
ಅನಿರೀಕ್ಷಿತ ಬೆಳವಣಿಗೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನಿರಾಕರಿಸಿರುವ ಕಾಂಗ್ರೆಸ್ ಹೈಕಮಾಂಡ್ ಮಾಜಿ ಶಾಸಕ ಸಾದತ್ ಆಲಿಖಾನ್ಗೆ ಮಣೆ ಹಾಕಿದೆ. ಬಿಜೆಪಿಯಿಂದ ಕನಕಪುರಕ್ಕೆ ನಾಗರಾಜು, ಚನ್ನಪಟ್ಟಣಕ್ಕೆ ರವಿಕುಮಾರಗೌಡ ಅಭ್ಯರ್ಥಿಗಳು. ಮಾಗಡಿ, ರಾಮನಗರ ಕ್ಷೇತ್ರಕ್ಕೆ ಇನ್ನು ಅಂತಿಮಗೊಳಿಸಿಲ್ಲ.
ಅಖಾಡಕ್ಕೆ ಸೈನಿಕ ಸಜ್ಜು: ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಚನ್ನಪಟ್ಟಣದ 'ಸೈನಿಕ' ಸಿ.ಪಿ.ಯೋಗೇಶ್ವರ್ ಪೌರ ಸಂಸ್ಥೆ ಚುನಾವಣೆ ವೇಳೆ ಸಚಿವ, ಶಾಸಕ ಸ್ಥಾನ ತ್ಯಜಿಸಿ ಬಿಜೆಪಿಗೆ ವಿದಾಯ ಹೇಳಿದ್ದರು. ತರಾತುರಿಯಲ್ಲೇ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿ ಕಾಂಗ್ರೆಸ್ ಬಾವುಟ ಹಿಡಿದು, ಪಕ್ಷ ಸೇರ್ಪಡೆ ಶಾಸ್ತ್ರ ಮುಗಿಸಿದ್ದರು. ಬಳಿಕ ದೆಹಲಿಗೂ ಹೋಗಿ ಬಂದಿದ್ದರು.
ಕಾಂಗ್ರೆಸ್ ಟಿಕೆಟ್ ನೆಚ್ಚಿಕೊಂಡು ಚನ್ನಪಟ್ಟಣ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದ ಯೋಗೇಶ್ವರ್ ಮತ್ತು ಬೆಂಬಲಿಗರಿಗೆ ಪಕ್ಷದ ವರಿಷ್ಠರ ತೀರ್ಮಾನ ಆಘಾತ ನೀಡಿದೆ. 1999ರಲ್ಲಿ ಚೊಚ್ಚಲ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆಲವು ಸಾಧಿಸಿದ್ದ ಯೋಗೇಶ್ವರ್ ಈ ಬಾರಿಯೂ ಅಂತಹದ್ದೇ ಪ್ರಯತ್ನಕ್ಕೆ ಮುಂದಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಕಾಂಗ್ರೆಸ್ 'ಕೈ' ಬಿಟ್ಟಿರಬಹುದು. ಆದರೆ, ಚನ್ನಪಟ್ಟಣ ಮತದಾರರು ತಮ್ಮನ್ನು 'ಕೈ' ಬಿಡುವುದಿಲ್ಲ ಎನ್ನುವ ಭರವಸೆ ಯೋಗೇಶ್ವರ್ ಪಾಳಯದ್ದಾಗಿದೆ. ಸ್ವತಂತ್ರವಾಗಿ ಕಣಕ್ಕೆ ಇಳಿಯುವಂತೆ ಯೋಗೇಶ್ವರ್
ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಟಿಕೆಟ್ ಪ್ರಕಟವಾದ ಕೆಲ ಹೊತ್ತಿನಲ್ಲೇ ಯೋಗೇಶ್ವರ್ ಬೆಂಬಲಿಗರು ತುರ್ತು ಸಭೆ ಸೇರಿ, ಮುಂದಿನ ನಡೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಮುನ್ಸೂಚನೆ ನೀಡಿದ್ದ ಡಿಕೆಶಿ: ಮೂರು ದಿನಗಳ ಹಿಂದಷ್ಟೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಹೈಕಮಾಂಡ್ ಚನ್ನಪಟ್ಟಣದಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪಕ್ಷದ ಅಭ್ಯರ್ಥಿ ಆಯ್ಕೆ ನಡೆಸಲಿದೆ ಎಂದು ಹೇಳಿದ್ದರು.
ಸಾಮಾಜಿಕ ನ್ಯಾಯ ಎನ್ನುವ ವ್ಯಾಖ್ಯಾನದ ಹಿಂದೆ ಅಲ್ಪ ಸಂಖ್ಯಾತ ಕೋಮಿನ ಅಭ್ಯರ್ಥಿಗೆ ಟಿಕೆಟ್ ಖಚಿತವೆನ್ನುವ ಸುಳಿವನ್ನು ಅವರು ನೀಡಿದ್ದರು. ಶಿವಕುಮಾರ್ ಮತ್ತು ಯೋಗೇಶ್ವರ್ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಅರಣ್ಯ ಗಣಿಗಾರಿಕೆಯಲ್ಲಿ ತಮಗೆ ಖೆಡ್ಡಾ ತೋಡಿದ್ದ ಯೋಗೇಶ್ವರ್ ವಿರುದ್ಧ ಶಿವಕುಮಾರ್ ಇಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ನ ಪ್ರಬಲ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ವಿರುದ್ಧ ಗೆಲವು ಸಾಧಿಸಬೇಕಿದ್ದರೆ ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ್ ಅವರಿಗೇ ಟಿಕೆಟ್ ನೀಡಬೇಕು ಎಂದು ಪ್ರತಿಪಾದಿಸಲಾಗುತ್ತಿತ್ತು. ಆದರೆ, ಪಕ್ಷದ ನಿರ್ಧಾರಕ್ಕೆ ತಮ್ಮ ತಕರಾರು ಇಲ್ಲ ಎನ್ನುವ ತಮ್ಮ ವೈಯಕ್ತಿಕ ನಿಲುವನ್ನು ಕಾಂಗ್ರೆಸ್ ಪ್ರಭಾವಿ ಮುಖಂಡ ಸಿ.ಎಂ.ಲಿಂಗಪ್ಪ ಪಟ್ಟಿ ಪ್ರಕಟದ ಕೆಲವೇ ಹೊತ್ತಿಗೆ ಮುನ್ನ ವ್ಯಕ್ತಪಡಿಸಿದ್ದರು.
ಜೇಡ್ರಳ್ಳಿ ನಡೆ ನಿಗೂಢ: ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಎಂ.ಕೃಷ್ಣಮೂರ್ತಿ(ಜೇಡ್ರಳ್ಳಿ ಕೃಷ್ಣಪ್ಪ) ಅವರಿಗೂ ವರಿಷ್ಠರು ಕೈಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ, ವಾಪಸ್ ಪಡೆದಿದ್ದ ಅವರ ನಡೆ ಈ ಬಾರಿ ನಿಗೂಢವಾಗಿದೆ. ಟಿಕೆಟ್ ನಿರಾಕರಣೆ ಬೆನ್ನಲ್ಲೇ ಅವರೂ ಮುಂದಿನ ತೀರ್ಮಾನ ಕುರಿತು ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಸ್ತಿತ್ವ ಉಳಿಸಿಕೊಳ್ಳಲು ಶತಾಯ ಗತಾಯ ಸ್ಪರ್ಧೆಗೆ ಇಳಿಯಲೇಬೇಕು ಎನ್ನುವ ಅಭಿಪ್ರಾಯ ಕೃಷ್ಣಮೂರ್ತಿ ಮತ್ತು ಬೆಂಬಲಿಗರದ್ದಾಗಿದೆ. ಅವರಿಗೆ ಗಾಳ ಹಾಕಲು ಕೆಜೆಪಿ ಮುಖಂಡರು ಕಸರತ್ತು ನಡೆಸುತ್ತಿದ್ದಾರೆ. ಕೃಷ್ಣಮೂರ್ತಿ ಬಂಡಾಯ ಸ್ಪರ್ಧೆ ಒಡ್ಡುವರೋ, ಕೆಜೆಪಿಯಿಂದ ಕಣಕ್ಕೆ ಇಳಿಯುವರೋ ಅಥವಾ ಕಾಂಗ್ರೆಸ್ ನಿಷ್ಠರಾಗಿ ಮುಂದುವರೆಯುವರೋ ಎನ್ನುವ ಬಗ್ಗೆ ಕುತೂಹಲ ಕೆರಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

