ಬೆಂಗಳೂರು ಗ್ರಾಮಾಂತರ

ತಪ್ಪಿದ ಟಿಕೆಟ್; ಕಣ್ಣೀರಿಟ್ಟ ಚಂದ್ರಣ್ಣ

Published On :

ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಆವೇಶದ ಭಾಷಣ


ಕ.ಪ್ರ.ವಾರ್ತೆ  ದೇವನಹಳ್ಳಿ  ಏ.6
ದೇವನಹಳ್ಳಿ ವಿದಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಟಿಕೆಟ್ ನಿರಾಕರಿಸಿರುವುಕ್ಕೆ ಮಾಜಿ ಶಾಸಕರಾದ ಜಿ.ಚಂದ್ರಣ್ಣ ತಮ್ಮ ಆವೇಶದ ಭಾಷಣದೊಂದಿಗೆ ಕಣ್ಣೀರಿಟ್ಟ ಘಟನೆ ದೇವನಹಳ್ಳಿ ತಾಲೂಕು ಐಬಸಾಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಮತ್ತು ಅವರ ಅಭಿಮಾನಿಗಳ ಸಭೆಯಲ್ಲಿ ಶನಿವಾರ ನಡೆಯಿತು.   
ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಮಾಜಿ ಶಾಸಕರಾದ ಜಿ. ಚಂದ್ರಣ್ಣರವರು ತಮಗೇ ಟಿಕೆಟ್ ದೊರೆಯುವುದೆಂದು ತಿಳಿದಿದ್ದರು. ಆದರೆ ಕಡೇ ಗಳಿಗೆಯಲ್ಲಿ ಪಿಳ್ಳಮುನಿಶಾಮಪ್ಪ ಎಂಬುವರಿಗೆ ಟಿಕೆಟ್ ಘೋಷಣೆಯಗಿರುವ ಹಿನ್ನೆಲೆಯಲ್ಲಿ ಶನಿವಾರ ಐಬಸಾಪುರ ಗ್ರಾಮದಲ್ಲಿ ತಮ್ಮ ಬೆಂಬಲಿಗರ ಮತ್ತು ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಮಾಜಿ ಸಂಸದರು ಹಾಗೂ ಜೆಡಿಎಸ್ ಮುಖಂಡರಾದ ಸಿ.ನಾರಾಯಣಸ್ವಾಮಿ  ಭಾಗವಹಿಸಿದ್ದರು.
ಕಣ್ಣೀರಿಟ್ಟರು:  ಜಿ.ಚಂದ್ರಣ್ಣರವರು ಈ ಸಂದರ್ಭದಲ್ಲಿ ಮಾತನಾಡಿ ತಾವು ಪಕ್ಷದ ಕಾರ್ಯಕರ್ತರಾಗಿ ಕಳೆದ 35 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿದಿದ್ದಲ್ಲದೆ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೆ ತಾವು ಎರಡು ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕೋಟ್ಯಂತರ ರು.ಗಳ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿರುತ್ತೇನೆ ಎಂದರಲ್ಲದೆ ತಮಗೆ ಜೆಡಿಎಸ್‌ನಿಂದ ಟಿಕೆಟ್ ನಿರಾಕರಿಸಿರುವುದಕ್ಕೆ ತಾವು ಮಾಡಿರುವ ತಪ್ಪಾದರೂ ಏನು ಎಂದು ಕಣ್ಣೀರಿಟ್ಟರು. ತಾಲೂಕಿನಲ್ಲಿ  ನಮ್ಮ ಪಕ್ಷದ ಕೆಲವರು ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
5ಮಂದಿ ಆಕಾಂಕ್ಷಿಗಳು: ರಾಜ್ಯದಲ್ಲಿ ನಮ್ಮ ಸಮಾಜಕ್ಕೆ ಒಂದು ಟಿಕೆಟ್ ನೀಡಿಲ್ಲ, ಪಕ್ಷಕ್ಕೆ ಮೋಸ ಮಾಡಿದ ಮತ್ತು ಪಕ್ಷದ ಮುಖಂಡರನ್ನು ಅವಹೇಳನಕಾರಿಯಾಗಿ ಬೈದವರಿಗೆ ಇಂದು (ಚನ್ನಿಗೆಪ್ಪ) ಟಿಕೆಟ್ ಕೊಟ್ಟಿದ್ದು ಏಕೆ, ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಬಿ.ಮುನೇಗೌಡರವರು  ಕೋಟ್ಯಂತರ ರು. ವೆಚ್ಚಮಾಡಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಅಲ್ಲಿನ ಜನತೆಯ ಪ್ರೀತಿ ವಿಶ್ವಾಸ ಗಳಿಸಿದ ಅವರಿಗೂ ಪಕ್ಷದ ಟಿಕೆಟ್ ನಿರಾಕರಿಸಲಾಗಿದೆ ಎಂದರು.
ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮಾತನಾಡಿ 1977-78 ರಿಂದ ಇದುವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಲಾಗುತ್ತಿತ್ತು, ಅಂತಿಮವಾಗಿ ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯ ಪಡೆದು ನಂತರ ಟಿಕೆಟ್ ವಿತರಿಸುವ ಪದ್ಧತಿ ಇತ್ತು. ಆದರೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಐದು ಮಂದಿ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಜಿ.ಚಂದ್ರಣ್ಣ ಹಾಗೂ ಪಿಳ್ಳಮುನಿಶಾಮಪ್ಪ ಉಳಿದಿದ್ದರು. ಕುಮಾರಸ್ವಾಮಿ ಇಬ್ಬರನ್ನೂ ಸೇರಿಸಿ ಒಮ್ಮತದ ಅಭ್ಯರ್ಥಿ ಆಯ್ಕೆಮಾಡಲು ನಿರ್ಧರಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ, ಇತ್ತೀಚೆಗೆ ನಡೆದ ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ Ú ಅನ್ನದಾನಿ ಹಾಗೂ ಶಿವಣ್ಣ ಅವರ ಸೂಚನೆಯಂತೆ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಕೆಲವು ಜಾತಿಗಳಿಗೆ ಟಿಕೆಟ್ ನೀಡಬೇಕಾದ್ದು ಅನಿವಾರ್ಯವಾಗಿದೆ.
ಆದ್ದರಿಂದ ಟಿಕೆಟ್ ಹಂಚಿಕೆಯಲ್ಲಿ ಬದಲಾವಣೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಅದರಂತೆ ವರಿಷ್ಠರು ಈ ಬಾರಿ ಪಿಳ್ಳಮುನಿಶಾಮಪ್ಪ ಅವರಿಗೆ ಟಿಕೆಟ್ ನೀಡಲು ಒಪ್ಪಿದ್ದಾರೆ ಎಂದಾಗ ಸಭೆಯಲ್ಲಿ ಎಲ್ಲರೂ ಎದ್ದು ನಿಂತು ಗಲಾಟೆ ಆರಂಭಿಸಿ ಚಂದ್ರಣ್ಣ ಅವರಿಗೆ ಟಿಕೆಟ್ ತಪ್ಪಲು ನೀವು ಕಾರಣ ಎಂದು ಗಲಭೆ ಎಬ್ಬಿಸಿದರು. ನಂತರ ಸಭೆಯಲ್ಲಿ ಗೊಂದಲ ಉಂಟಾಗಿ ಎಲ್ಲರೂ ಸಭೆಯಿಂದ ನಿರ್ಗಮಿಸಿದರು.  
ಪಕ್ಷೇತರರಾಗಿ ಸ್ಪರ್ಧೆ: ಜೆಡಿಎಸ್‌ನಿಂದ ಚಂದ್ರಣ್ಣರ ಅವರಿಗೆ ಟಿಕೆಟ್ ದೊರೆಯದ ಪಕ್ಷದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಇದಕ್ಕೆ ನಮ್ಮ ಸಹಕಾರ ಇದೆ ಎಂದು ಚಂದ್ರಣ್ಣ ಅಭಿಮಾನಿಗಳು ತಿಳಿಸಿದರು. ದೊಡ್ಡಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ವಂಚಿತರಾದ ಬಿ.ಮುನೇಗೌಡ ಸಭೆಗೆ ಆಗಮಿಸಿದ್ದರು. ಒಂದು ಹಂತದಲ್ಲಿ ಸಭಿಕರು ಜೆಡಿಎಸ್‌ಗೆ ಧಿಕ್ಕಾರ ಕೂಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.