ತೇಜಸ್ಸು ಕಳೆದುಕೊಂಡ ವೀರಾವೇಶದ ವಾಚಾಳಿ!
ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ರಾಮನಗರ ಏ.10
ಪ್ರಸಕ್ತ ಚುನಾವಣೆಯಲ್ಲಿ ರಾಮನಗರ ರಾಜಕಾರಣದ ದಿಕ್ಕನ್ನೇ ಬದಲಿಸುವ ವೀರಾವೇಶದ ಮಾತುಗಳನ್ನಾಡಿದ್ದ ಮಾಜಿ ಸಂಸದೆ ತೇಜಸ್ವಿನಿಗೌಡ ಈಗ ಅಪ್ರಸ್ತುತರಾಗಿದ್ದಾರೆ. ನಂಬಿದವರಿಗೆ ಟಿಕೆಟ್ ಕೊಡಿಸಿಯೇ ತೀರುವುದಾಗಿ ಪ್ರತಿಜ್ಞೆ ಮಾಡಿದ್ದ ಅವರೀಗ ತಮ್ಮದೊಂದು ಟಿಕೆಟ್ಗಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಇನ್ನಿಲ್ಲದಂತೆ ದುಂಬಾಲು ಬಿದ್ದಿದ್ದಾರೆ.
2004ರ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನೇ ಮಣಿಸುವ ಮೂಲಕ ತೇಜಸ್ವಿನಿಗೌಡ ರಾಷ್ಟ್ರದ ಗಮನ ಸೆಳೆದಿದ್ದರು. 2009ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಎದುರು ಸ್ಪರ್ಧಿಸಿ, ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು.
ಡಿಕೆಶಿ ಜತೆ ವಿರಸ: ತೇಜಸ್ವಿನಿಗೌಡ ಗೆಲವು ಸಾಧಿಸಿದ್ದಾಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ನಂತರದಲ್ಲಿ ಇಬ್ಬರ ನಡುವೆ ವಿರಸ ಮೂಡಿತ್ತು. ಹಾದಿ-ಬೀದಿಯಲ್ಲಿ ದೊಡ್ಡ ರಂಪಾಟವೇ ನಡೆದಿತ್ತು. ಕಾಂಗ್ರೆಸ್ ವೇದಿಕೆಗಳಲ್ಲಿ ಹಲ್ಲೆ ಸಂಬಂಧ ಸ್ವಪಕ್ಷೀಯರ ಮೇಲೆ ತೇಜಸ್ವಿನಿ ದಾಖಲಿಸಿದ್ದ ದೂರು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಜಿಲ್ಲಾ ಕಾಂಗ್ರೆಸ್ನಲ್ಲಿ ಹಾಲಿ-ಮಾಜಿ ಸಂಸದರು, ಲೋಕಸಭೆ ಅಭ್ಯರ್ಥಿ ಆಗಿದ್ದವರು ಕಾರ್ಯಕಾರಿ ಸದಸ್ಯರು. ಆದರೆ, ರಾಮನಗರ ಜಿಲ್ಲಾ ಕಾಂಗ್ರೆಸ್ ತೇಜಸ್ವಿನಿಗೌಡ ಅವರನ್ನು ಯಾವ ಹಂತದಲ್ಲೂ ಪರಿಗಣಿಸಿಯೇ ಇಲ್ಲ. ಒಂದು ಸಭೆಗೂ ಆಹ್ವಾನ ನೀಡಿಲ್ಲ. ಈ ಬಗ್ಗೆ ಸ್ವತ- ಅವರೇ ಆರೋಪ ಮಾಡಿದ್ದಾರೆ.
ತಣ್ಣಗಾದ ತೇಜಸ್ವಿನಿ: ವಿಧಾನಸಭೆ ಚುನಾವಣೆಗೆ ಜಿಲ್ಲೆಯಿಂದ ಕ್ಷೇತ್ರವಾರು ಅಭ್ಯರ್ಥಿಗಳನ್ನು ಶಿಫಾರಸ್ಸು ಮಾಡುವ ನಿಟ್ಟಿನಲ್ಲಿ ಮೂರು ತಿಂಗಳ ಹಿಂದೆ ಜಿಲ್ಲಾ ಕಾಂಗ್ರೆಸ್ ಸಭೆ ನಡೆದಿತ್ತು. ಅದಕ್ಕೆ ತೇಜಸ್ವಿನಿಗೌಡ ಅವರಿಗೆ ಆಹ್ವಾನವಿರಲಿಲ್ಲ. ಆಗ ಅವರು ಮಾಗಡಿ ಕ್ಷೇತ್ರದ ಆಕಾಂಕ್ಷಿ ಜೇಡ್ರಳ್ಳಿ ಕೃಷ್ಣಪ್ಪ ಮತ್ತು ದಂಡು ಸಮೇತ ಕಾಂಗ್ರೆಸ್ ಕಚೇರಿಗೆ ಬಂದಿದ್ದರು.
ಪ್ರತಿ ಬಾರಿ ವೇದಿಕೆಗಳಲ್ಲಿ ತೇಜಸ್ವಿನಿ ಅವರನ್ನು ಮುಖಂಡರು ತೀರಾ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ, ಅಂದು ತೇಜಸ್ವಿನಿಗೌಡಗಿಂತ ಅವಕೊಂದಿಗೆ ಇದ್ದ ದಂಡು ನೋಡಿ ಸಭಾಂಗಣದಲ್ಲಿದ್ದ ಪ್ರಮುಖರು ಜಾಗ ಖಾಲಿ ಮಾಡಿದ್ದರು. ಡಿ.ಕೆ.ಶಿವಕುಮಾರ್ ಆಗಮನ ಬಳಿಕ ಮತ್ತೆ ಸಭೆ ನಡೆದಿತ್ತು. ಅಷ್ಟರಲ್ಲಿ ತೇಜಸ್ವಿನಿಗೌಡ ನಿರ್ಗಮಿಸಿದ್ದರು.
ಸವಾಲು ಹಾಕಿದ್ದರು: ತಮ್ಮನ್ನು ಕಡೆಗಣಿಸಿ ಪಕ್ಷದ ಸಭೆ ನಡೆಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಮೇಲೆ ತೇಜಸ್ವಿನಿಗೌಡ ಹರಿಹಾಯ್ದಿದ್ದರು. ಶಿವಕುಮಾರ್ ಮೇಲೆ ಆರೋಪಗಳ ಸುರಿಮಳೆಗರೆದಿದ್ದರು. ಎಲ್ಲ 4 ಕ್ಷೇತ್ರಗಳಲ್ಲಿ ತಾವು ಸೂಚಿಸಿದವರಿಗೇ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂದು ಪಟಾಕಿ ಸಿಡಿಸಿದ್ದರು.
ಕನಕಪುರದಲ್ಲಿ ಶಿವಕುಮಾರ್ ಅವರಿಗೇ ಟಿಕೆಟ್ ಸಿಗದೆಂದು ತೇಜಸ್ವಿನಿ ಅಂದು ಹೇಳಿದ್ದರು. ಕನಕಪುರದಲ್ಲಿ ಶ್ರೀಕಂಠು, ಮಾಗಡಿಯಲ್ಲಿ ಜೇಡ್ರಳ್ಳಿ ಕೃಷ್ಣಪ್ಪ, ರಾಮನಗರದಲ್ಲಿ ಕಲ್ಪನಾ ಶಿವಣ್ಣ ಅವರಿಗೆ ಟಿಕೆಟ್ ಕೊಡಿಸುವೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದು, ಅಭ್ಯರ್ಥಿಯನ್ನಾಗಿಸುವ ಘೋಷಣೆ ಮಾಡಿದ್ದರು.
ಠುಸ್ ಪಟಾಕಿಯಾಯ್ತು: ತೇಜಸ್ವಿನಿಗೌಡ ಮೂಡಿಸಿದ್ದ ಗೊಂದಲದ ಬಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಹೈಕಮಾಂಡ್ಗೆ ದೂರು ನೀಡಿತ್ತು. ಈ ಸಂಬಂಧ ತೇಜಸ್ವಿನಿಗೌಡ ಅವರನ್ನು ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ತರಾಟೆಗೆ ತೆಗೆದುಕೊಂಡಿದ್ದರು. ಆಗ ತೇಜಸ್ವಿನಿಗೌಡ ಹೇಳಿದ್ದವರ ಪೈಕಿ ಈಗ ಒಬ್ಬರಿಗೂ ಟಿಕೆಟ್ ಸಿಕ್ಕಿಲ್ಲ.
ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ಗಾಗಿ ಸ್ವತಃ ಪೈಪೋಟಿ ನಡೆಸುತ್ತಿರುವ ಅವರಿಗೆ ಮಣೆ ಹಾಕದಂತೆ ವಿರೋಧಿ ಪಡೆಯಿಂದ ಪ್ರತಿಭಟನೆಯೂ ನಡೆದಿದೆ. ಇಡೀ ಜಿಲ್ಲೆ ಬಿ ಫಾರಂ ಮತ್ತು ರಾಜಕಾರಣ ದಿಕ್ಕನ್ನೇ ಬದಲಿಸುತ್ತೇನೆ ಎಂದಿದ್ದ ಅವರ ಮಾತು ಠುಸ್ ಪಟಾಕಿಯಂತಾಗಿದೆ.
ತೇಜಸ್ವಿನಿಗೌಡರ ಬಿ ಫಾರಂ ಪಟ್ಟಿಯಲ್ಲಿದ್ದ ಕನಕಪುರದ ಶ್ರೀಕಂಠು ಈಗಾಗಲೇ ಡಿ.ಕೆ.ಶಿವಕುಮಾರ್ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಕಲ್ಪನಾ ಶಿವಣ್ಣ ನೇಪಥ್ಯಕ್ಕೆ ಸರಿದಿದ್ದಾರೆ. ಜೇಡ್ರಳ್ಳಿ ಕೃಷ್ಣಪ್ಪ ಮತ್ತು ಯೋಗೇಶ್ವರ್ ಪಕ್ಷೇತರ ಇಲ್ಲವೇ ಸೂಕ್ತ ಪಕ್ಷದಿಂದ ಸ್ಪರ್ಧೆಗೆ ಇಳಿಯುವ ಚಿಂತನೆಯಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

