ಹದಿನೇಳು ಬಿಟ್ಟಿತು ಸಂಕಟದ ಚೇಳು!
ರಾಮನಗರ: ಪ್ರತಿ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಗರಿಷ್ಠ ಹದಿನಾರು ಅಭ್ಯರ್ಥಿಗಳ ಹೆಸರು ಅಳವಡಿಕೆ ಮಾತ್ರ ಸಾಧ್ಯ. ಕ್ಷೇತ್ರದಲ್ಲಿ 16ಕ್ಕಿಂತ ಒಬ್ಬ ಅಭ್ಯರ್ಥಿ ಹೆಚ್ಚಾಗಿ ಕಣದಲ್ಲಿದ್ದರೂ ಮತಗಟ್ಟೆಯಲ್ಲಿ 2 ಮತಯಂತ್ರಗಳನ್ನು ಜೋಡಿಸದೆ ಅನ್ಯ ಮಾರ್ಗವಿಲ್ಲ. ಇದು ಚುನಾವಣಾ ಆಯೋಗಕ್ಕೆ ಮಾತ್ರವಲ್ಲದೆ ಪ್ರಮುಖ ಅಭ್ಯರ್ಥಿಗಳಿಗೂ ತಲೆಬಿಸಿ ತಂದೊಡ್ಡಿದೆ.
ರಾಮನಗರ ಜಿಲ್ಲೆಯ 3 ಕ್ಷೇತ್ರಗಳು ಸಹಿತ ರಾಜ್ಯದ ವಿವಿಧೆಡೆ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಅಭ್ಯರ್ಥಿಗಳ ಸಂಖ್ಯೆ 17 ಆದರೂ 2 ಮತಯಂತ್ರ ಅಳವಡಿಸಬೇಕಿದೆ. ನಿಯಮ ಪ್ರಕಾರ ಗರಿಷ್ಠ 4 ಮತಯಂತ್ರಗಳನ್ನು ಮಾತ್ರವೇ ಸಾಧ್ಯ. ಅಭ್ಯರ್ಥಿಗಳ ಸಂಖ್ಯೆ 64 ದಾಟಿದರೆ ಮತಪತ್ರ ವ್ಯವಸ್ಥೆಯಲ್ಲೇ ಚುನಾವಣೆ ನಡೆಯಲಿದೆ.
ಗೊಂದಲ ತಪ್ಪಿದ್ದಲ್ಲ: ಒಂದಕ್ಕಿಂತ ಹೆಚ್ಚು ಮತಯಂತ್ರಗಳನ್ನು ಅಳವಡಿಸುವುದು ಚುನಾವಣೆ ಆಯೋಗಕ್ಕೆ ತಾಪತ್ರಯದ ಕೆಲಸ. ಮತದಾನ, ಎಣಿಕೆವರೆಗೂ ಗೊಂದಲ ತಪ್ಪಿದ್ದಲ್ಲ. ಅಂತೆಯೇ ಪ್ರಮುಖ ಪಕ್ಷಗಳ ಹುರಿಯಾಳುಗಳು, ಪಕ್ಷಗಳಿಂದ ಟಿಕೆಟ್ ವಂಚಿತರಾಗಿ ಸ್ವತಂತ್ರ ಸ್ಪರ್ಧೆಗೆ ಇಳಿದ ಪ್ರಮುಖ ರಾಜಕಾರಣಿಗಳ ಪಾಲಿಗೂ ನಾನಾ ರೀತಿಯಲ್ಲಿ ತೊಡಕಾಗಲಿದೆ.
ಹಿಂತೆಗೆತಕ್ಕೆ ಕಸರತ್ತು: ಅಧಿಕ ಸಂಖ್ಯೆಯಲ್ಲಿ ಕಣಕ್ಕೆ ಇಳಿದ ಪಕ್ಷೇತರರನ್ನು ಮನವೊಲಿಸಿ, ನಾಮಪತ್ರ ಹಿಂತೆಗೆಸುವ ನಿಟ್ಟಿನಲ್ಲಿ ಪ್ರಮುಖ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.
ಶತಾಯ ಗತಾಯ ಅಭ್ಯರ್ಥಿಗಳ ಸಂಖ್ಯೆಯನ್ನು 16ಕ್ಕಿಂತ ಕಡಿಮೆಗೆ ಸೀಮಿತಗೊಳಿಸಿ ಒಂದೇ ಮತಯಂತ್ರ ಅಳವಡಿಕೆಯಾಗುವಂತೆ ನೋಡಿಕೊಳ್ಳುವ ಪ್ರಯತ್ನ ಸಾಗಿದೆ.
17 ಮತ್ತು ಅದಕ್ಕೂ ಹೆಚ್ಚುಸಂಖ್ಯೆಯಲ್ಲಿ ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ ಕ್ರಮ ಸಂಖ್ಯೆ 1 ಹಾಗೂ ಕಟ್ಟ ಕಡೆಯಲ್ಲಿ ಬರುವ ಪ್ರಮುಖ ಹುರಿಯಾಳುಗಳಿಗೆ ಪರೋಕ್ಷ ಪೆಟ್ಟು ಸಾಧ್ಯತೆ ಇದೆ. ಇದೀಗ ಅವರೇ ಒಟ್ಟಾರೆ ಅಭ್ಯರ್ಥಿಗಳ ಸಂಖ್ಯೆಯನ್ನು 16ಕ್ಕಿಂತ ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನ ಹಾಕಿದ್ದಾರೆ. ಅದಕ್ಕೆ ಅಡ್ಡಗಾಲು ಹಾಕುವ ಕುತಂತ್ರ ವಿರೋಧಿಗಳಿಂದ ನಡೆದಿದೆ.
ಇಲ್ಲೂ ವ್ಯಾಪಾರ: ನಾಮಪತ್ರ ಹಿಂತೆಗೆಸುವುದಕ್ಕಾಗಿ ಪಕ್ಷೇತರರಿಗೆ ಆಸೆ, ಆಮಿಷ ಒಡ್ಡುವ ಕೆಲಸವೂ ನಡೆದಿದೆ. ಹೇಗೂ ನಾಮಪತ್ರ ಹಿಂತೆಗೆದುಕೊಂಡರೆ ಠೇವಣಿ ಉಳಿಯುತ್ತದೆ. ಇದರ ಜತೆಗೆ ಕೈತುಂಬ ಕಾಸು ಸಿಗುವ ಲೆಕ್ಕಾಚಾರ ಕೆಲ ಪಕ್ಷೇತರರದ್ದಾಗಿದೆ. ಕೆಲ ಅಭ್ಯರ್ಥಿಗಳು ಹೆಚ್ಚು ಹಣಕ್ಕೆ ಬೇಡಿಕೆ ಇಡುತ್ತಿರುವುದೂ ಉಂಟು.
ಪ್ರಭಾವಿ ಹುರಿಯಾಳುಗಳು ಪಕ್ಷೇತರರ ಜತೆ ಮಾತುಕತೆ ನಡೆಸಿ, ಬೇಡಿಕೆ ಈಡೇರಿಸುವಲ್ಲಿ ತೊಡಗಿದ್ದಾರೆ. ಎರಡು ಮತಯಂತ್ರ ಅಳವಡಿಕೆಯಿಂದ ಪ್ರಬಲ ಎದುರಾಳಿಗೆ ತೊಡಕಾಗುತ್ತದೆ ಎನ್ನುವ ಸಾಧ್ಯತೆ ಅರಿತ ಕಡುವೈರಿಗಳು ಪಕ್ಷೇತರರನ್ನು ಕಣದಲ್ಲಿ ಉಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಶನಿವಾರ ಕಡೆಯ ದಿನ
ನಾಮಪತ್ರ ಹಿಂತೆಗೆತಕ್ಕೆ ಏ.20ರ ಮಧ್ಯಾಹ್ನ 3ರವರೆಗೂ ಅವಕಾಶವಿದೆ. ಆ ಬಳಿಕ ಕ್ರಮ ಸಂಖ್ಯೆ, ಚಿಹ್ನೆ ನಿಗದಿಯೊಂದಿಗೆ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಶುಕ್ರವಾರ ಉಮೇದುವಾರಿಕೆ ಹಿಂತೆಗೆತ ವಿರಳವಾಗಿದ್ದು, ಶನಿವಾರ ಅಂತಿಮ ಚಿತ್ರಣ ಹೊರಬೀಳಲಿದೆ. ರಾಮನಗರ ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಕನಕಪುರದಲ್ಲಿ 14 ಮಂದಿ ಅಭ್ಯರ್ಥಿಗಳಿದ್ದಾರೆ. ರಾಮನಗರದಲ್ಲಿ 17 ಮಂದಿ ಪೈಕಿ ಒಬ್ಬರು ಶುಕ್ರವಾರ ಹಿಂಪಡೆದಿದ್ದು, ಅಲ್ಲೂ 16 ಮಂದಿ ಉಳಿದಿದ್ದಾರೆ. ಇವೆರಡೂ ಕಡೆ ಹೆಚ್ಚುವರಿ ಮತಯಂತ್ರ ಅಳವಡಿಕೆಯ ಚಿಂತೆ ಇಲ್ಲದಂತಾಗಿದೆ. ಜಿದ್ದಾಜಿದ್ದಿನ ಹೋರಾಟದಿಂದ ಕೂಡಿದ ಚನ್ನಪಟ್ಟಣದಲ್ಲಿ ಎಲ್ಲ 21 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ. ಅವರ ಪೈಕಿ ಮೊದಲ ದಿನ ಯಾರೂ ನಾಮಪತ್ರ ಹಿಂಪಡೆದಿಲ್ಲ. ಕಡೆಯ ದಿನ ಕನಿಷ್ಠ 5 ಮಂದಿ ಹಿಂತೆಗೆದರಷ್ಟೆ ಒಂದು ಮತಯಂತ್ರ. ಇಲ್ಲವಾದರೆ 2 ಮತಯಂತ್ರ ಅಳವಡಿಸಬೇಕಾಗುತ್ತದೆ. ಮಾಗಡಿಯಲ್ಲಿ 17 ಅಭ್ಯರ್ಥಿಗಳಿದ್ದು, ಒಬ್ಬರು ಹಿಂದೆ ಸರಿದರೆ ಸಾಕು.
- ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

