ಬೆಂಗಳೂರು ಗ್ರಾಮಾಂತರ

ಬಹುಕೋಟಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಿ

Published On :

ಕ.ಪ್ರ. ವಾರ್ತೆ  ,   ರಾಮನಗರ  ,   ಏ.22
ಜಿಲ್ಲೆಯ ಮಾಗಡಿ ಮತ್ತು ಚನ್ನಪಟ್ಟಣ ಉಪ ವಿಭಾಗಗಳ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿರುವ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ರೈತಸಂಘ ಮತ್ತು ಜಯಕರ್ನಾಟಕ ಸಂಘಟನೆ ಸರ್ಕಾರವನ್ನು ಆಗ್ರಹಿಸಿವೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಸಿ.ಪುಟ್ಟಸ್ವಾಮಿ, ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಹಾಗೂ ಬಿಜೆಪಿ ಸರ್ಕಾರದ ಕೆಲ ಸಚಿವರೂ ಹಗರಣದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಗಳ ಮೇಲೆ ಇವರು ಪ್ರಭಾವ ಬೀರುವ ಗುಮಾನಿ ಇರುವ ಕಾರಣಕ್ಕೆ ಸಿಬಿಐ ತನಿಖೆಯೇ ನಡೆಯಬೇಕು ಎಂದು ಒತ್ತಾಯಿಸಿದರು.
ಕಾಮಗಾರಿಯ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಸಲಾಗಿದೆ. ಬಹುತೇಕ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿಲ್ಲ. ಕಾಮಗಾರಿ ಅನುಷ್‌ಠಾನದ ಯಾವ ಹಂತದಲ್ಲೂ ಮಾನದಂಡಗಳನ್ನು ಪಾಲಿಸಿಲ್ಲ. ಭಾರಿ ಪ್ರಮಾಣದ ಭ್ರಷ್ಟಾಚಾರದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಅವರು ದೂರಿದರು.
ಕಾಮಗಾರಿ ನಡೆಸದೇ ಬಿಲ್ ಮಂಜೂರಿ: ಮಾಗಡಿ ಉಪ ವಿಭಾಗದಲ್ಲಿ ರು.305 ಕೋಟಿ ವೆಚ್ಚದಲ್ಲಿ  ಸುಮಾರು 1500 ಕಾಮಗಾರಿಗಳು, ಚನ್ನಪಟ್ಟಣ ಕ್ಷೇತ್ರದಲ್ಲಿ ರು.59 ಕೋಟಿ ವೆಚ್ಚದಲ್ಲಿ ನಡೆದಿರುವ 254 ಕಾಮಗಾರಿಗಳು ಕಳಪೆಯಾಗಿವೆ. ಕೆಲವೆಡೆ ಕಾಮಗಾರಿಯನ್ನೇ ನಡೆಸದೆ ಬಿಲ್ ಮಂಜೂರು ಮಾಡಿರುವ ನಿದರ್ಶನಗಳಿವೆ ಎಂದು ಪುಟ್ಟಸ್ವಾಮಿ ಆರೋಪಿಸಿದರು.  
ಕೆಲ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ವ್ಯಯ ಮಾಡಿರುವ ಹಣದಿಂದ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟವನ್ನೂ ಮೀರಿಸಿದ ರಸ್ತೆಗಳನ್ನೇ ನಿರ್ಮಾಣ ಮಾಡಬಹುದಿತ್ತು. ರೈತರು, ಸಾರ್ವಜನಿಕರು ಪಾವತಿಸಿದ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪೋಲಾಗಿರುವ ಹಣವನ್ನು ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಂದ ವಸೂಲು ಮಾಡಿ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ  ಈಗಾಗಲೇ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಬೈರೇಗೌಡ, ಲಕ್ಷ್ಮಣಸ್ವಾಮಿ, ಕೃಷ್ಣಪ್ಪ, ಚೆಲುವೇಗೌಡ, ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳಾದ ಡಿ.ಜಿ.ಕುಮಾರ್, ರಮೇಶ್, ಸಂಜೀವ ರೈ, ರವಿ, ಪ್ರಶಾಂತ್, ಮಧು ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.