ಕನಕಪುರದಲ್ಲಿ ದಿಗ್ಗಜರ ಕದನ
ರಾಮನಗರ: ಜೀವನದಿ ಕಾವೇರಿ ಹರಿದರೂ ನೀರಾವರಿ ಮರೀಚಿಕೆ. ತಮಿಳುನಾಡು ಗಡಿಗೆ ಚಾಚಿಕೊಂಡ ಕ್ಷೇತ್ರವನ್ನು ಆವರಿಸಿರುವ ದಟ್ಟ ಕಾನನ, ರಫ್ತು ಗುಣಮಟ್ಟದ ಕರಿಕಲ್ಲು ಗಣಿಗಾರಿಕೆಯ ಸಪ್ಪಳದ ಜತೆಗೆ ರಾಜಕೀಯ ಕಾದಾಟದ ಅಬ್ಬರ. ಹೀಗೆ ನಾನಾ ವೈಶಿಷ್ಟ್ಯಗಳನ್ನು ಹೊಂದಿದ ಕ್ಷೇತ್ರ ಕನಕಪುರ. ಇಲ್ಲೀಗ ದಾಖಲೆವೀರ ದಿಗ್ಗಜರ ಕದನವೇರ್ಪಟ್ಟಿದೆ.
ಸುದೀರ್ಘ ರಾಜಕೀಯ ಇತಿಹಾಸವಿರುವ ಕನಕಪುರ ಕ್ಷೇತ್ರದಲ್ಲಿ ಮಾಜಿ ಸಚಿವದ್ವಯರಾದ ಡಿ.ಕೆ.ಶಿವಕುಮಾರ್ ಮತ್ತು ಪಿ.ಜಿ.ಆರ್.ಸಿಂಧ್ಯಾ ನಡುವೆ ನೇರ ಹಣಾಹಣಿ ಇದೆ. ಶಿವಕುಮಾರ್ ಕಾಂಗ್ರೆಸ್ ಪಾಳಯದಲ್ಲಿ ಪ್ರಭಾವಿ ನಾಯಕರಾಗಿದ್ದರೆ, ಸಿಂಧ್ಯಾ ಜನತಾ ಪರಿವಾರದ ಪ್ರಮುಖ. ಇಬ್ಬರೂ ತಮ್ಮದೇ ಆದ ದಾಖಲೆಗಳನ್ನು ಹೊಂದಿದ್ದಾರೆ.
ಸಿಂಧ್ಯಾ ದಾಖಲೆ : ಮೂಲತಃ ಸಂಘ ಪರಿವಾರದ ಕಾರ್ಯಕರ್ತರಾದ ಸಿಂಧ್ಯಾ 1983ರಲ್ಲಿ ಜನತಾ ಪಕ್ಷದಿಂದ ಸಕ್ರಿಯ ರಾಜಕಾರಣ ಪ್ರಾರಂಭಿಸಿದವರು. ದೇವೇಗೌಡರ ಗರಡಿಯಲ್ಲಿ ಪಳಗಿದ ಅವರು ಕನಕಪುರದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಜನತಾ ಪರಿವಾರದಲ್ಲೇ ಉಳಿದು ಸತತ 6 ಬಾರಿ ಚುನಾವಣೆಯಲ್ಲಿ ಗೆಲವು ಸಾಧಿಸಿದ ಏಕೈಕ ನಾಯಕ ಎನ್ನುವ ದಾಖಲೆ ಅವರ ಬೆನ್ನಿಗಿದೆ. 2 ಬಾರಿ ಲೋಕಸಭೆ ಚುನಾವಣೆಯಲ್ಲಷ್ಟೇ ಮುಗ್ಗರಿಸಿದ್ದಾರೆ.
ಸ್ವತಃ ದೇವೇಗೌಡ ಸಹಿತ ಹಲವು ನಾಯಕರು ಸೋಲು-ಗೆಲವನ್ನು ಕಂಡಿದ್ದಾರೆ. ಆದರೆ, ಸಿಂಧ್ಯಾ ವಿಧಾನಸಭೆ ಚುನಾವಣೆ ಮಟ್ಟಿಗೆ ಒಮ್ಮೆಯೂ ಸೋಲು ಕಂಡೇ ಇಲ್ಲ. ಇವರು 1983ರ ಚೊಚ್ಚಲ ಯತ್ನದಲ್ಲೇ ಗೆಲವು ಸಾಧಿಸಿದ ಸಿಂಧ್ಯಾ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಕ್ಷೇತ್ರ ತೆರವು ಮಾಡಿಕೊಟ್ಟಿದ್ದರು.
3ನೇ ಸ್ಥಾನಕ್ಕೆ ದೇವೇಗೌಡ: 1985ರಲ್ಲಿ ಸುಲಭ ಗೆಲವು ಕಂಡರು. 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಸಿಂಧ್ಯಾಗೆ ಸಮಾಜವಾದಿ ಜನತಾಪಕ್ಷದಿಂದ ಎಚ್.ಡಿ.ದೇವೇಗೌಡ ಎದುರಾಳಿಯಾಗಿದ್ದರು. ಸಿಂಧ್ಯಾ ಭಾರಿ ಅಂತರದ ಗೆಲವು ದಾಖಲಿಸಿದರೆ, ದೇವೇಗೌಡ 3ನೇ ಸ್ಥಾನಕ್ಕೆ ದೂಡಲ್ಪಟ್ಟರು. 1994, 1999, 2004ರಲ್ಲೂ ಗೆಲವು ಕಂಡರು. ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ವಿರೋಧಿಸಿ ಜೆಡಿಎಸ್ನಿಂದ ದೂರ ಸರಿದಿದ್ದರು. ಬಿಎಸ್ಪಿ ಸೇರಿ, ವಾಪಸಾದರು. 2008ರಲ್ಲಿ ಅತಂತ್ರರಾಗಿ, ಚುನಾವಣಾ ಕಣದಿಂದ ದೂರ ಉಳಿದಿದ್ದರು.
ಡಿಕೆಶಿ ಮೈಲುಗಲ್ಲು: ಪ್ರಸ್ತುತ ವಿಧಾನಸಭೆ ಸದಸ್ಯರಾಗಿರುವವರ ಪೈಕಿ ಸತತ 5 ಬಾರಿ ಆಯ್ಕೆಗೊಂಡವರು ಇಬ್ಬರೇ. ಅವರಲ್ಲಿ ಬೆಂಗಳೂರಿನ ರಾಮಲಿಂಗಾರೆಡ್ಡಿ ಒಬ್ಬರಾದರೆ, ಕನಕಪುರದ ಡಿ.ಕೆ.ಶಿವಕುಮಾರ್ ಇನ್ನೊಬ್ಬರು. ಅಸ್ತಿತ್ವ ಕಳೆದುಕೊಂಡ ಸಾತನೂರು ಕ್ಷೇತ್ರದಲ್ಲಿ 4 ಬಾರಿ ಮತ್ತು ಕನಕಪುರದಲ್ಲಿ 1 ಬಾರಿ ಶಾಸಕರಾಗಿದ್ದಾರೆ. 6ನೇ ಬಾರಿ ಅವಕಾಶಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ ಒಡ್ಡಿದ್ದಾರೆ.
1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲುಂಡ ಶಿವಕುಮಾರ್, 1989ರಲ್ಲಿ ಗೆಲವು ಸಾಧಿಸಿದರು. ಅಲ್ಲಿಂದ ಇಲ್ಲಿವರೆಗೆ ಮತ್ತೆ ಹಿಂತಿರುಗಿ ನೋಡಿಯೇ ಇಲ್ಲ. 1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿತಾದರೂ ಪಕ್ಷೇತರರಾಗಿ ಗೆದ್ದು, ಪಕ್ಷಕ್ಕೆ ಮರಳಿದರು. 1999ರಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧವೂ ಗೆಲವು ಸಾಧಿಸಿದರು. 2004ರಲ್ಲೂ ಗೆಲವಿನ ಅಭಿಯಾನ ಮುಂದುವರೆದಿತ್ತು. ಸಾತನೂರು ಕ್ಷೇತ್ರ ಅಸ್ತಿತ್ವ ಕಳೆದುಕೊಂಡ ಹಿನ್ನೆಲೆಯಲ್ಲಿ 2008ರಲ್ಲಿ ಕನಕಪುರದಿಂದ ಕಣಕ್ಕಿಳಿದು ಗೆಲವಿನ ನಗೆ ಬೀರಿದ್ದಾರೆ.
2002ರಲ್ಲಿ ಕನಕಪುರ ಲೋಕಸಭೆ ಮರು ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎದುರು ಸೆಣೆಸಿ ಶಿವಕುಮಾರ್ ಸೋಲು ಕಂಡರು. ವಿಧಾನಸಭೆ ಮತ್ತು ಲೋಕಸಭೆಗೆ ತಲಾ ಒಮ್ಮೆ ಅವರಿಗೆ ಸೋಲಾಗಿದೆ. ಎರಡೂ ಬಾರಿ ಸೆಣೆಸಿ ಗೆದ್ದವರು ದೇವೇಗೌಡ ಎನ್ನುವುದು ಮತ್ತೊಂದು ವಿಶೇಷ.
ಕನಕಪುರ ಕ್ಷೇತ್ರ ಮಹಿಮೆ
ರಾಮಕೃಷ್ಣ ಹೆಗಡೆ 1983ರಲ್ಲಿ ಮುಖ್ಯಮಂತ್ರಿ ಆದಾಗ ಸದನ ಸದಸ್ಯರಾಗಲು ಆಶ್ರಯ ಕೊಟ್ಟ ಕ್ಷೇತ್ರವಿದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸೋಲಿನ ಪಾಠದ ಜತೆಗೆ ರಾಜಕೀಯ ಪುನರ್ಜನ್ಮವನ್ನೂ ನೀಡಿದೆ. ಜಾತಿ, ಹಣ, ಹೆಂಡ, ಬಳುವಳಿಗೆ ಈ ಜನ ಸೊಪ್ಪು ಹಾಕಿಲ್ಲ. ಇಂತಹ ನೆಲದಲ್ಲಿ ಈಗ ಮಾಜಿ ಸಚಿವದ್ವಯರಾದ ಡಿ.ಕೆ.ಶಿವಕುಮಾರ್ ಮತ್ತು ಪಿ.ಜಿ.ಆರ್.ಸಿಂಧ್ಯಾ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ.
-ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

