ಹೆದ್ದಾರಿಯಲ್ಲಿ ಜೆಡಿಎಸ್- ಕಾಂಗ್'ರೇಸ್'
ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವಿನ ಹೆದ್ದಾರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳದ್ದೇ ಪಾರುಪತ್ಯ. ಪ್ರಸಕ್ತ ವಿಧಾನಸಭೆಯಲ್ಲಿ ಇಲ್ಲಿ ಕಾಂಗ್ರೆಸ್ ತೆಕ್ಕೆಯೊಳಗೆ ಒಂದು ಕ್ಷೇತ್ರವೂ ಇಲ್ಲ. ಈ ಬಾರಿ ಚುನಾವಣೆಯಲ್ಲಿ ಹೆದ್ದಾರಿ ಕ್ಷೇತ್ರಗಳು ಯಾವ ಪಕ್ಷಕ್ಕೆ ರಹದಾರಿಯಾಗುತ್ತವೆ ಎನ್ನುವ ಕುತೂಹಲ ಕೆರಳಿಸಿದೆ.
ಬೃಹತ್ ಬೆಂಗಳೂರು ಹಾಗೂ ಮೈಸೂರು ನಡುವೆ 6 ಕ್ಷೇತ್ರಗಳಿವೆ. ಈ ಪೈಕಿ ಪ್ರಸಕ್ತ ವಿಧಾನಸಭೆಯಲ್ಲಿ 5 ಕ್ಷೇತ್ರಗಳು ಜೆಡಿಎಸ್ ತೆಕ್ಕೆಯಲ್ಲಿವೆ, ಒಂದು ಕ್ಷೇತ್ರ ಬಿಜೆಪಿ ಹಿಡಿತದಲ್ಲಿತ್ತು. ಈ ಬಾರಿ ಚುನಾವಣೆಯಲ್ಲಿ ಹೆದ್ದಾರಿ ನಡುವಿನ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ.
ರಾಮನಗರ ವ್ಯಾಪ್ತಿ ಕ್ಷೇತ್ರಗಳು: ಬಿಬಿಎಂಪಿ ವ್ಯಾಪ್ತಿ ಬಿಟ್ಟು ಮೈಸೂರು ಕಡೆಗೆ ಹೊರಡುತ್ತಿದ್ದಂತೆಯೇ ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ಸಿಗುತ್ತದೆ. ಕ್ಷೇತ್ರ ಮರು ವಿಂಗಡಣೆಯಲ್ಲಿ ಬಿಡದಿ ಹೋಬಳಿ ಮಾಗಡಿ ಕ್ಷೇತ್ರಕ್ಕೆ ಸೇರಿದೆ. ಹೀಗಾಗಿ ಹೆದ್ದಾರಿ ನಡುವಿನ ಕ್ಷೇತ್ರಗಳಲ್ಲಿ ಮಾಗಡಿಯೂ ಒಂದಾಗಿದೆ. ಇಲ್ಲಿ ಜೆಡಿಎಸ್ನ ಎಚ್.ಸಿ. ಬಾಲಕೃಷ್ಣ ಶಾಸಕರಾಗಿದ್ದಾರೆ.
ಬಿಡದಿ ಹೋಬಳಿ ದಾಟುತ್ತಿದ್ದಂತೆಯೇ ರಾಮನಗರ ವಿಧಾನಸಭಾ ಕ್ಷೇತ್ರವು ಜಾನಪದ ಲೋಕದವರೆಗೆ ಚಾಚಿಕೊಂಡಿದೆ. ಈ ಕ್ಷೇತ್ರದಲ್ಲಿ 2008ರಲ್ಲಿ ಆಯ್ಕೆಯಾದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಲೋಕಸಭೆಗೆ ಆರಿಸಿ ಹೋದರು. ಬಳಿಕ ನಡೆದ ಮರು ಚುನಾವಣೆಯಲ್ಲಿ ಆಯ್ಕೆಯಾದ ಜೆಡಿಎಸ್ನ ಕೆ.ರಾಜು ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.
ಚನ್ನಪಟ್ಟಣದಲ್ಲಿ 3 ಫಲಿತಾಂಶ: ರಾಮನಗರದಾಚೆಗೆ ಸಿಗುವ ಚನ್ನಪಟ್ಟಣ ಕ್ಷೇತ್ರದಲ್ಲಿ 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸಿ.ಪಿ. ಯೋಗೇಶ್ವರ್ ಗೆಲವು ಸಾಧಿಸಿದ್ದರು. ಹೀಗಾಗಿ ಬೆಂಗಳೂರು-ಮೈಸೂರು ನಡುವೆ ಕಾಂಗ್ರೆಸ್ಗೆ ಏಕೈಕ ಸ್ಥಾನ ಸಿಕ್ಕ ಸಮಾಧಾನವಿತ್ತು.
2009ರಲ್ಲಿ ಆಪರೇಷನ್ ಕಮಲದಿಂದ ನಡೆದ ಮೊದಲ ಮರು ಚುನಾವಣೆಯಲ್ಲಿ ಜೆಡಿಎಸ್ನ ಎಂ.ಸಿ.ಅಶ್ವತ್ ಗೆದ್ದರು. ಆ ಮೂಲಕ ಹೆದ್ದಾರಿ ನಡುವಿನ ಎಲ್ಲ ಕ್ಷೇತ್ರಗಳು ಜೆಡಿಎಸ್ ತೆಕ್ಕೆಗೆ ಒಳಪಟ್ಟಂತಾಯಿತು. ಆದರೆ, ಮತ್ತೊಂದು ಆಪರೇಷನ್ ಕಮಲದಿಂದ 2011ರ ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಯೋಗೇಶ್ವರ್ ಗೆದ್ದರು. ಈ ಫಲಿತಾಂಶದೊಂದಿಗೆ ಹೆದ್ದಾರಿಯ ಕ್ಷೇತ್ರಗಳಲ್ಲಿ ಜೆಡಿಎಸ್ ಕೊಂಡಿಯೊಂದು ಕಳಚಿ ಬಿದ್ದಿತು. ಹೆದ್ದಾರಿ ನಡುವೆ ಮೊದಲ ಬಾರಿ ಬಿಜೆಪಿ ಬಾವುಟ ಹಾರಿತು. ಇದೀಗ ಯೋಗೇಶ್ವರ್ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ, ಸಮಾಜವಾದಿ ಪಕ್ಷ ಸೇರಿದ್ದಾರೆ.
ಮಂಡ್ಯದ 3 ಕಡೆ ಜೆಡಿಎಸ್: ರಾಮನಗರ ಜಿಲ್ಲೆ ಗಡಿಯಾಚೆಗೆ ಮಂಡ್ಯ ಜಿಲ್ಲೆಯಲ್ಲಿ ಸಿಗುವ ಮೂರು ಕ್ಷೇತ್ರಗಳೂ ಜೆಡಿಎಸ್ ತೆಕ್ಕೆಯಲ್ಲಿವೆ. ಮೊದಲಿಗೆ ಸಿಗುವ ಮದ್ದೂರಿನಲ್ಲಿ ಜೆಡಿಎಸ್ನಿಂದ ಎಂ.ಎಸ್. ಸಿದ್ದರಾಜು ಆಯ್ಕೆಗೊಂಡು, ಮೂರೇ ತಿಂಗಳಲ್ಲಿ ನಿಧನರಾದರು. ಬಳಿಕ ಮರು ಚುನಾವಣೆಯಲ್ಲಿ ಸಿದ್ದರಾಜು ಪತ್ನಿ ಕಲ್ಪನಾ ಸಿದ್ದರಾಜು ಗೆಲವು ಸಾಧಿಸಿ ಪಕ್ಷಕ್ಕೆ ಸ್ಥಾನ ಉಳಿಸಿದರು. ಈಗ ಅವರು ಜೆಡಿಎಸ್ ಟಿಕೆಟ್ ಸಿಗದೆ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಮಂಡ್ಯ ಕ್ಷೇತ್ರವನ್ನು ಸತತ ಎರಡು ಬಾರಿಯಿಂದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಪ್ರತಿನಿಧಿಸುತ್ತಿದ್ದಾರೆ. ಅದರಾಚೆಗೆ ಸಿಗುವ ಶ್ರೀರಂಗಪಟ್ಟಣದಲ್ಲಿ ಸತತ ಎರಡು ಬಾರಿಯೂ ಜೆಡಿಎಸ್ನದ್ದೇ ಗೆಲವು. 2004ರಲ್ಲಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಗೆದ್ದರೆ, ಅವರ ಪುತ್ರ ರಮೇಶ್ ಬಂಡಿಸಿದ್ದೇಗೌಡ 2008ರಲ್ಲಿ ಆಯ್ಕೆಗೊಂಡರು.
ಎರಡೂ ತುದಿಯಲ್ಲಿ ಕಾಂಗ್ರೆಸ್
ಬೆಂಗಳೂರು ಸಿಟಿ ಬಸ್ ನಿಲ್ದಾಣವಿರುವ ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಇದ್ದಾರೆ. ಇಲ್ಲಿಂದ ಹೊರಟರೆ ಮತ್ತೆ ಕಾಂಗ್ರೆಸ್ ಹಿಡಿತದ ಕ್ಷೇತ್ರ ಸಿಗುವುದೇ ಮೈಸೂರು ಪ್ರವೇಶ ದ್ವಾರದಲ್ಲಿ. ಅಲ್ಲಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸತ್ಯನಾರಾಯಣ ಶಾಸಕ. ಇಬ್ಬರೂ ಮರಳಿ ಆಯ್ಕೆ ಬಯಸಿದ್ದಾರೆ.
ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗುವಾಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಗುವ ಚಾಮರಾಜಪೇಟೆ ಜೆಡಿಎಸ್ ವಶದಲ್ಲಿದ್ದರೆ, ರಾಜರಾಜೇಶ್ವರಿ, ಬೆಂಗಳೂರು ದಕ್ಷಿಣ ಮತ್ತು ಯಶವಂತಪುರ ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿವೆ. ಈ ಬಾರಿ ರಾಜಕೀಯ ಮೇಲಾಟದಲ್ಲಿ ಹೆದ್ದಾರಿಯಲ್ಲಿನ ಕ್ಷೇತ್ರಗಳು ಸಹಜವಾಗಿಯೇ ಗಮನ ಸೆಳೆದಿವೆ. ಇನ್ನು, ಬೆಂಗಳೂರು ಮತ್ತು ಮೈಸೂರು ನಡುವೆ ಇರುವ 2 ಲೋಕಸಭಾ ಕ್ಷೇತ್ರಗಳೂ ಜೆಡಿಎಸ್ ವಶದಲ್ಲಿವೆ. ಈ ಪೈಕಿ ಬೆಂಗಳೂರು ಗ್ರಾಮಾಂತರವನ್ನು ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸಿದರೆ, ಮಂಡ್ಯದಲ್ಲಿ ಎನ್.ಚಲುವರಾಯಸ್ವಾಮಿ ಸಂಸದ. ಪ್ರಸ್ತುತ ಇಬ್ಬರೂ ವಿಧಾನಸಭೆ ಪ್ರವೇಶಕ್ಕೆ ಸ್ಪರ್ಧಿಸಿದ್ದಾರೆ.
- ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

