ಬೆಂಗಳೂರು ಗ್ರಾಮಾಂತರ

ಕಳಂಕರಹಿತರನ್ನು ಗೆಲ್ಲಿಸಿ: ಬೃಂದಾ ಕಾರಟ್

Published On :

ಕ.ಪ್ರ. ವಾರ್ತೆ  ,   ಆನೇಕಲ್ಲು  ,   ಏ.28
ನಿಷ್ಠಾವಂತ, ಕಳಂಕ ರಹಿತ ಸಂಸದರು, ಶಾಸಕರು, ನೇತಾರರು ಯಾರಾದರೂ ದೇಶದಲ್ಲಿದ್ದರೆ ಅವರು ಸಿಪಿಐ (ಎಂ) ಸದಸ್ಯರಾಗಿರುತ್ತಾರೆ ಎಂದು ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ತಿಳಿಸಿದ್ದಾರೆ.
 ಅವರು ಆನೇಕಲ್ ವಿಧಾನ ಸಭಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಡಿ. ಮಹದೇಶ ಪರವಾಗಿ ಮತ ಯಾಚನೆ ಮಾಡಿ ಸ್ಥಳೀಯವಾಗಿ ರೈತ ಪರ, ಕಾರ್ಮಿಕರ ಪರ ಹಾಗೂ ಬಡ ಜನತೆಯ ಪರ  ದನಿ ಎತ್ತಿರುವ ಎಡ ಪಕ್ಷದ ಅಭ್ಯರ್ಥಿಗೆ ನಿಮ್ಮ ಮತ ಮೀಸಲಿಡಿ ಎಂದರು.
 ದೇಶವನ್ನಾಳುತ್ತಿರುವ ಯುಪಿಎ ಸರ್ಕಾರ ಸಾವಿರಾರು ಕೋಟಿ ರು. ಹಗರಣದಲ್ಲಿ ಮಿಂದು ತೇಲುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಸಾವಿರಾರು ಕೋಟಿ ರು.ಗಳ ಭೂ ಹಗರಣ, ಗಣಿ ಹಗರಣ ರಾಜ್ಯದ ಜನರ ಬೇಸರಕ್ಕೆ ಕಾರಣವಾಗಿದೆ.
 ರಾಜ್ಯದಲ್ಲಿ ಕೇವಲ 30 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿರುವ ಸಿಪಿಐ (ಎಂ) ಪಕ್ಷದವರನ್ನು  ಗೆಲ್ಲಿಸಿ ದಲಿತ, ಅಲ್ಪ ಸಂಖ್ಯಾತರ ದನಿಯಾಗಿ ಮಾತನಾಡಲು ಅವಕಾಶ ಕೊಡಿ ಎಂದರು.
ಸೋನಿಯಾಗೆ ಕಷ್ಟದ ಅರಿವಿಲ್ಲ: ಸೋನಿಯಾ, ರಾಹುಲ್‌ಗೆ ಜನರ ಕಷ್ಟದ ಅರಿವಿಲ್ಲ. ಮನಮೋಹನ್ ಸಿಂಗ್ ಅವರಿಗೆ ಬೆಲೆ ಏರಿಕೆ ತಡೆಯುವ ಬಗ್ಗೆ ಯಾವುದೇ ಕಾರ್ಯ ಯೋಜನೆಗಳಿಲ್ಲ.  
 ವಿರೋಧ ಪಕ್ಷವಾದ ಬಿಜೆಪಿ ನೇತಾರರು ಅವರ ತಪ್ಪುಗಳು ಎಲ್ಲಿ ಪ್ರಚಾರಕ್ಕೆ ಬರುವುದೋ ಎಂಬ ಭಯದಲ್ಲಿ ಸಂಸತ್ತಿನಲ್ಲಿ ಬಾಯಿ ತೆರೆಯುವುದಿಲ್ಲ. ಬಹುಶಃ ಎರಡೂ ಪಕ್ಷಗಳ ಮುಖಂಡರ ಬಾಯನ್ನು  ಹೊಲಿದಿರಬಹುದೆಂದು ಲೇವಡಿ ಮಾಡಿದರು. ಉತ್ತರ ಭಾರತದಲ್ಲಿ  ಕರ್ನಾಟಕದ ಬಿಜೆಪಿ ಸರ್ಕಾರದ ಕುರಿತಂತೆ ಭೂಗಳ್ಳರ ಹಾಗೂ ರಿಯಲ್ ಎಸ್ಟೇಟ್ ದಂಧೆಯವರಿಗೆ ಸ್ವರ್ಗ ಎಂದು ಕರೆಯುತ್ತೇವೆ. ಬದಲಾವಣೆಗಾಗಿ ನಮ್ಮ ಪಕ್ಷಕ್ಕೆ ಮತ ನೀಡಿ ಎಂದರು.
ಅಭ್ಯರ್ಥಿ ಮಹದೇಶ ಮಾತನಾಡಿ ತಾಲೂಕಿನ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ, ನಿವೇಶನ ರಹಿತರಿಗೆ ಹಕ್ಕುಪತ್ರ, ಕಾರ್ಮಿಕರಿಗೆ ವೇತನ ಹಾಗೂ ಭತ್ಯೆ, ಅಸಂಘಟಿತ ಕೂಲಿ ಕಾರ್ಮಿಕರ ಬಗ್ಗೆ ಕನಿಷ್ಠ ವೇತನ ಜಾರಿ ಹಾಗೂ ಗಾರ್ಮೆಂಟ್ ಮಹಿಳೆಯರ ದುಡಿಮೆ ಹಕ್ಕು ಬಗ್ಗೆ ನೂರಾರು ಜಾಗೃತಿ ಚಳವಳಿಗಳನ್ನು ಮಾಡಲಾಗಿದೆ.  
ರೈತರಿಗೆ ಕೃಷಿ ಜಮೀನಿಗೆ  ಮಾರುಕಟ್ಟೆ ಬೆಲೆ ಕೊಡಿಸುವಲ್ಲಿ ಸಫಲರಾದ ಸಿಪಿಐಎಂ  ಅಭ್ಯರ್ಥಿಯಾದ ನನಗೆ ಮತ ನೀಡಿ ಎಂದು ಕೋರಿದರು.
ವೇದಿಕೆಯಲ್ಲಿ ಕಾಂ. ಉಮೇಶ್, ಅಶೋಕ್, ವಕೀಲ ಮಂಜುನಾಥ್, ಕಾಂ. ಪ್ರಕಾಶ್, ಸಿದ್ದನಗೌಡ ಪಾಟೀಲ್ ಮಾತನಾಡಿದರು. ಸಹಸ್ರಾರು ಕಾರ್ಮಿಕ ಬಂಧುಗಳು, ಮಹಿಳೆಯರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.