ಬೆಂಗಳೂರು ಗ್ರಾಮಾಂತರ

ನರೇಗಾ ಕೂಲಿ ಲೆಕ್ಕದಲ್ಲಿ ವೆಚ್ಚ ನಿಗದಿ

Published On :

ರಾಮನಗರ: ನಾಮಪತ್ರ ಸಲ್ಲಿಕೆ, ಪ್ರಚಾರ, ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಜನರ ತಲೆಗೆ ನರೇಗಾ ಕೂಲಿ ಲೆಕ್ಕದಲ್ಲಿ ವೆಚ್ಚ ನಿಗದಿಪಡಿಸಿರುವ ಚುನಾವಣಾ ವೆಚ್ಚ ವೀಕ್ಷಕರು, ಆ ಮೊತ್ತವನ್ನು ಅಭ್ಯರ್ಥಿಗಳ ವೆಚ್ಚದ ಲೆಕ್ಕಕ್ಕೆ ಸೇರಿಸಿ ಪೀಕಲಾಟ ತಂದೊಡ್ಡಿದ್ದಾರೆ.
ಜಿದ್ದಾಜಿದ್ದಿನ ಅಖಾಡವಾಗಿರುವ ರಾಮನಗರ ಜಿಲ್ಲೆಯ ಎಲ್ಲ 4 ಕ್ಷೇತ್ರಗಳಲ್ಲೂ ಲೆಕ್ಕ ವೀಕ್ಷಕರು ಒಂದೇ ಮಾನದಂಡ ಅನುಸರಿಸಿ, ಅಭ್ಯರ್ಥಿಗಳ ವೆಚ್ಚವನ್ನು ಚುನಾವಣಾ ಆಯೋಗ ನಿಗದಿಪಡಿಸಿರುವ ರು.16 ಲಕ್ಷದ ಮಿತಿ ಸನಿಹಕ್ಕೆ ತಂದಿಟ್ಟಿದ್ದಾರೆ. ಈ ಬಗ್ಗೆ ಅಭ್ಯರ್ಥಿಗಳು, ಅವರ ಪರ ಏಜೆಂಟರು ಆಕ್ಷೇಪಣೆ ಸಲ್ಲಿಕೆಗೆ ಮುಂದಾಗಿದ್ದಾರೆ. ಜಿಲ್ಲೆಯ 4 ಕ್ಷೇತ್ರಗಳಿಂದ 8ಕ್ಕೂ ಹೆಚ್ಚು ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ವೀಕ್ಷಕರು ಈಗಾಗಲೇ ರು.10 ರಿಂದ 12 ಲಕ್ಷ ದಾಟಿಸಿದ್ದಾರೆ. ಈ ಪೈಕಿ ನಾಮಪತ್ರ ಸಲ್ಲಿಕೆ ಸಂದರ್ಭದ ಮೆರವಣಿಗೆ ವೆಚ್ಚವೇ ಅಧಿಕವಾಗಿದೆ. ಪ್ರಮುಖ ಅಭ್ಯರ್ಥಿಗಳ ಮೆರವಣಿಗೆ ವೆಚ್ಚವನ್ನು ರು.6 ಲಕ್ಷದಿಂದ ರು.9 ಲಕ್ಷದವರೆಗೂ ನಮೂದಿಸಲಾಗಿದೆ.  ಲೆಕ್ಕ ಪರಿಶೀಲನೆ ವಿಷಯವಾಗಿ ಕ್ಷೇತ್ರವಾರು ಕರೆದಿದ್ದ ಸಭೆಯಲ್ಲಿ ವೀಕ್ಷಕರ ಲೆಕ್ಕದ ಪುಸ್ತಕ ನೋಡಿ ಅಭ್ಯರ್ಥಿಗಳ ಚುನಾವಣಾ ಏಜೆಂಟರು ಹೌಹಾರಿದ್ದಾರೆ. ತಮ್ಮ ಪುಸ್ತಕದಲ್ಲಿರುವ ವೆಚ್ಚದ ಲೆಕ್ಕಕ್ಕೂ ವೀಕ್ಷಕರು ಹಾಕಿಕೊಂಡಿರುವ ವೆಚ್ಚಕ್ಕೂ ಅಜಗಜಾಂತರವಿದೆ ಎಂದು  ಕೆಲ ಏಜೆಂಟರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ವೆಚ್ಚದ ತಾಪತ್ರಯ: ಮೆರವಣಿಗೆ, ಪ್ರಚಾರ, ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿರುವ ಕಾರ್ಯಕರ್ತರು, ಬೆಂಬಲಿಗರು ಮತ್ತು ಸಾರ್ವಜನಿಕರ ತಲಾವಾರು ವೆಚ್ಚವನ್ನು ನರೇಗಾ ಕೂಲಿಯಂತೆ ರು.175 ನಮೂದಿಸಲಾಗಿದೆ.  ಅಂತೆಯೇ ಊಟ, ತಿಂಡಿ, ಕಾಫಿ, ವಾಹನಗಳ ಬಾಡಿಗೆ ಇತರೆ ವೆಚ್ಚವೂ ವಾಸ್ತವಕ್ಕೆ ಹತ್ತಿರವಲ್ಲ ಎನ್ನುವ ದೂರು ಕೇಳಿ ಬಂದಿದೆ. ಮೆರವಣಿಗೆಗೆ ಯಾರನ್ನೂ ಹಣ ಕೊಟ್ಟು ಕರೆತಂದಿಲ್ಲ. ಈ ಬಗ್ಗೆ ವೀಡಿಯೋ ಸಹಿತ ಯಾವುದೇ ಸಾಕ್ಷ್ಯಾಧಾರ ಇದ್ದರೆ ಒದಗಿಸಿ ಎಂದು ಅಭ್ಯರ್ಥಿಗಳ ಪರ ಏಜೆಂಟರು ಪಟ್ಟು ಹಿಡಿದಿದ್ದಾರೆ. ಈ ಎಲ್ಲ ವಿವರಣೆಯನ್ನು ಚುನಾವಣಾಧಿಕಾರಿಗೆ ಲಿಖಿತವಾಗಿ ಸಲ್ಲಿಸಿ ಎಂದು ಸೂಚಿಸುವ ಮೂಲಕ ವೀಕ್ಷಕರು ಕೈತೊಳೆದುಕೊಂಡಿದ್ದಾರೆ.
ಇತರೆ ವೆಚ್ಚಕ್ಕೂ ಆಕ್ಷೇಪಣೆ: ಕಾರು ಬಾಡಿಗೆ ಪ್ರತಿ ನಿತ್ಯ ರು.3 ಸಾವಿರ ಬೆಂಗಳೂರಿನಂತಹ ಕಡೆಯೂ ಇಲ್ಲ. ಈ ಭಾಗದಲ್ಲಿ ಸರಾಸರಿ ರು.1500 ರಿಂದ ರು.2300 ಇದೆ. ಚಾಲಕರ ಸಂಬಳ, ಪೆಂಡಾಲ್, ಧ್ವನಿವರ್ಧಕ, ಬಾವುಟಕ್ಕೆ ನಿಗದಿಪಡಿಸಿರುವ ವೆಚ್ಚಕ್ಕೂ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ.  ಅಭ್ಯರ್ಥಿ ಹೊರತಾಗಿ ಆಯಾ ಗ್ರಾಮಗಳಲ್ಲಿ ಕಾರ್ಯಕರ್ತರು ನಡೆಸುತ್ತಿರುವ ಪ್ರಚಾರ, ಅಲ್ಲಲ್ಲಿ ಕಾಫಿ, ಟೀ, ಬಿಸ್ಕತ್ ಸೇವಿಸಿದ್ದಕ್ಕೂ ಹೆಚ್ಚಿನ ಲೆಕ್ಕ ಜಡಿಯಲಾಗಿದೆ. ಊಟದ ವೆಚ್ಚ  ಸ್ಟಾರ್ ಹೊಟೇಲ್‌ಗಳಿಗೆ ಸಮನಾಗಿದೆ. ಪಟಾಕಿ ಸಿಡಿತಕ್ಕೆ ಪ್ರತಿ ನಿಮಿಷಕ್ಕೆ ರು.1500 ರಂತೆ ನಿಗದಿಯಾಗಿದೆ. ಇದೆಲ್ಲಕ್ಕೂ ಕ್ಯಾತೆ ತೆಗೆಯಲಾಗುತ್ತಿದೆ.

 -ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.