ಬೆಂಗಳೂರು ಗ್ರಾಮಾಂತರ

ರೇಷ್ಮೆನಾಡಲ್ಲೂ ವಂಶಪಾರಂಪರ್ಯ ರಾಜಕಾರಣ

Published On :

ರಾಮನಗರ: ರೇಷ್ಮೆನಾಡು ರಾಮನಗರದಲ್ಲೂ ವಂಶಪಾರಂಪರ್ಯ ರಾಜಕಾರಣ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮೂರು ಪ್ರಮುಖ ರಾಜಕೀಯ ಕುಟುಂಬಗಳ ಪೈಕಿ 2 ಕುಟುಂಬದ ಕುಡಿಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಸಿದ್ದರೆ, ಮತ್ತೊಂದು ಕುಟುಂಬದ ಕುಡಿಗಳು ಟಿಕೆಟ್ ವಂಚಿತರಾಗಿ ಸ್ಪರ್ಧಾ ಕಣದಿಂದ ದೂರ ಉಳಿದಿದ್ದಾರೆ.  
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವದ್ವಯರಾದ ಚನ್ನಪಟ್ಟಣದ ವಿ.ವೆಂಕಟಪ್ಪ ಹಾಗೂ ಮಾಗಡಿಯ ಎಚ್.ಜಿ.ಚನ್ನಪ್ಪ ಅವರ ಕುಟುಂಬ ರಾಜಕಾರಣ ಇಲ್ಲಿ ನಡೆಯುತ್ತಿದೆ. ವೆಂಕಟಪ್ಪ ಕುಟುಂಬದ ಕುಡಿಗಳನ್ನು ಹೊರತುಪಡಿಸಿ ಉಳಿದ ಕುಟುಂಬದವರ ಸ್ಪರ್ಧೆ ಮುಂದುವರೆದಿದೆ.
ದೇವೇಗೌಡ ಕುಟುಂಬ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹಾಸನದೊಟ್ಟಿಗೆ ರಾಮನಗರ ರಾಜಕಾರಣದಲ್ಲೂ ಕೈಯಾಡಿಸಿದವರು. ಈ ಭಾಗದಿಂದ ಲೋಕಸಭೆ ಚುನಾವಣೆಯಲ್ಲಿ ತಲಾ 1 ಸೋಲು ಮತ್ತು ಗೆಲವು ಕಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ 3 ಬಾರಿ ಕಣಕ್ಕೆ ಇಳಿದು, 2ರಲ್ಲಿ ಗೆಲವು ಮತ್ತು 1ರಲ್ಲಿ ಸೋಲನುಭವಿಸಿದ್ದಾರೆ.
ಇವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಲೋಕಸಭೆ ಚುನಾವಣೆಗಳಲ್ಲಿ ತಲಾ 2ರಲ್ಲಿ ಗೆಲವು ಮತ್ತು ಸೋಲು ಕಂಡಿದ್ದಾರೆ.  ವಿಧಾನಸಭೆಗೆ 1999ರಲ್ಲಿ  ಸಾತನೂರಿನಿಂದ ಸ್ಪರ್ಧಿಸಿ ಸೋಲನುಭವಿಸಿದ್ದು, 2004 ಮತ್ತು 2008ರಲ್ಲಿ ರಾಮನಗರದಿಂದ ಆಯ್ಕೆಯಾಗಿದ್ದರು.
ವಿಶೇಷವೆಂದರೆ, ಹಾಸನದವರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಬ್ಬರೂ ರಾಮನಗರದಿಂದಲೇ ಗೆದ್ದು ಸಿಎಂ ಹುದ್ದೆಗೇರಿದ್ದರು. ಈ ಬಾರಿ ಕುಮಾರಸ್ವಾಮಿ ಹ್ಯಾಟ್ರಿಕ್ ಗೆಲವಿನ ನಿರೀಕ್ಷೆ ಹೊತ್ತು ರಾಮನಗರದಿಂದ ಸ್ಪರ್ಧಿಸಿದ್ದಾರೆ.
ನೆರೆಯ ಚನ್ನಪಟ್ಟಣದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಿದ್ದಾರೆ.
ಹುಲಿಕಟ್ಟೆ ವಂಶದ ಕುಡಿ: ಮಾಗಡಿಯ ಮಾಜಿ ಸಚಿವ ಎಚ್.ಜಿ. ಚನ್ನಪ್ಪ ಅವರು ಹುಲಿಕಟ್ಟೆ ಚನ್ನಪ್ಪ ಎಂದೇ ಹೆಸರಾದವರು. 1972, 1983 ಹಾಗೂ 1985ರಲ್ಲಿ ಮಾಗಡಿಯಿಂದ ಆಯ್ಕೆಯಾಗಿದ್ದು, ಕೆಲವೇ ದಿನಗಳ ಮಟ್ಟಿಗೆ ಸಚಿವರಾಗಿದ್ದರು. ಇವರ ನಂತರದಲ್ಲಿ ಪುತ್ರ ಎಚ್.ಸಿ.ಬಾಲಕೃಷ್ಣ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು.
ಬಾಲಕೃಷ್ಣ 1994ರಲ್ಲಿ ಚೊಚ್ಚಲ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. 1999ರಲ್ಲಿ ಪರಾಭವಗೊಂಡರು. ನಂತರ ಜೆಡಿಎಸ್ ಸೇರ್ಪಡೆಗೊಂಡು, 2004 ಮತ್ತು 2008ರಲ್ಲಿ ಸತತ ಗೆಲವು ಸಾಧಿಸಿದರು. ಇದೀಗ 4ನೇ ಬಾರಿ ಆಯ್ಕೆ ಬಯಸಿ ಕ್ಷೇತ್ರದ ಸ್ಪರ್ಧಾ ಕಣದಲ್ಲಿದ್ದಾರೆ.
ವೆಂಕಟಪ್ಪ ಕುಟುಂಬ: ಚನ್ನಪಟ್ಟಣದ ವಿ.ವೆಂಕಟಪ್ಪ ಅವರು ತಲಾ ಒಮ್ಮೆ ವಿಧಾನಸಭೆ ಮತ್ತು ವಿಧಾನ ಪರಿಷತ್
ಸದಸ್ಯರಾಗಿದ್ದವರು. ಉಭಯ ಸದನಗಳ ಸ್ಪೀಕರ್ ಹುದ್ದೆ ಮತ್ತು ಸಚಿವ ಸ್ಥಾನವನ್ನೂ ಅನುಭವಿಸಿದ್ದಾರೆ. ಇವರ ಇಬ್ಬರೂ ಪುತ್ರರಾದ ಟಿ.ವಿ.ರಾಮಣ್ಣ ಮತ್ತು ಟಿ.ವಿ.ಕೃಷ್ಣಪ್ಪ ಸಕ್ರಿಯ ರಾಜಕಾರಣಿಗಳಾಗಿದ್ದರು.
ಈ ಪೈಕಿ ಕೃಷ್ಣಪ್ಪ ಚನ್ನಪಟ್ಟಣದಿಂದ ಸತತ 2 ಬಾರಿ ಶಾಸಕರಾಗಿದ್ದರು. ರಾಮಣ್ಣ ಅವರು ಚನ್ನಪಟ್ಟಣ, ರಾಮನಗರ ಎರಡೂ ಕಡೆ ಸ್ಪರ್ಧಿಸಿ ಸೋಲಿನ ಕಹಿ ಉಂಡವರು. ಈಚೆಗೆ ಚನ್ನಪಟ್ಟಣದಲ್ಲಿ ನಡೆದ ಎರಡು ಮರು ಚುನಾವಣೆಗಳಲ್ಲೂ ವೆಂಕಟಪ್ಪ ಕುಟುಂಬಕ್ಕೆ ಕಾಂಗ್ರೆಸ್ ಮಣೆ ಹಾಕಿತ್ತು.
ಯೋಗೇಶ್ವರ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ 2009ರ ಮರು ಚುನಾವಣೆಯಲ್ಲಿ ಕೃಷ್ಣಪ್ಪ ಪುತ್ರ ಟಿ.ಕೆ.ಯೋಗೇಶ್ ಠೇವಣಿ ಜಪ್ತಿಯಾದರೆ, ಎಂ.ಸಿ.ಅಶ್ವತ್ಥ್ ರಾಜಿನಾಮೆಯಿಂದ 2011ರಲ್ಲಿ ನಡೆದ ಚುನಾವಣೆಯಲ್ಲಿ ರಾಮಣ್ಣ ಪುತ್ರ ರಘುನಂದನ್ ರಾಮಣ್ಣ ಠೇವಣಿ ಕಳೆದುಕೊಂಡರು. ಸದ್ಯ ರಘುನಂದನ್ ಮಾತ್ರ ಪಕ್ಷದಲ್ಲಿ ಸಕ್ರಿಯವಾಗಿದ್ದು, ಯೋಗೇಶ್ ನಿರ್ಲಿಪ್ತರಾಗಿದ್ದಾರೆ.
ಕುಟುಂಬಗಳ ಏರಿಳಿತ: ರಾಮನಗರದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಪುತ್ರ ಚಂದ್ರಶೇಖರ್ ಜಿಪಂನಲ್ಲಿ ಕಣಕ್ಕಿಳಿದಾಗ ಒಳೇಟಿನಿಂದ ಸೋಲಿನ ಆಘಾತ ಅನುಭವಿಸಿದರು. ಮಾಗಡಿಯ ಮಾಜಿ ಶಾಸಕ ಬೆಟ್ಟಸ್ವಾಮಿಗೌಡರ ಪುತ್ರ ಅಣ್ಣೇಗೌಡ ವಿಧಾನಸಭೆ, ಜಿ.ಪಂ. ಚುನಾವಣೆಯಲ್ಲೂ ಸಫಲರಾಗಲಿಲ್ಲ.
ಸಾತನೂರಿನ ಮಾಜಿ ಶಾಸಕ ಶಿವಲಿಂಗೇಗೌಡರ ಪುತ್ರ ಸುಧಾಕರ್ ಪ್ರಯತ್ನವೂ ವಿಫಲವಾಗಿದೆ. ಸದ್ಯ ಇವರಾರೂ ಕಣದಲ್ಲಿ ಇಲ್ಲ. ಮಾಜಿ ಶಾಸಕ ಸಿ.ಬೋರಯ್ಯ ಸಾಕು ಮಗ ಎಚ್.ಎಲ್.ಚಂದ್ರ ಜಿ.ಪಂ.ನಲ್ಲಿ
ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಇನ್ನಷ್ಟು ಪ್ರಭಾವಿ ರಾಜಕಾರಣಿಗಳ ವಂಶದ ಕುಡಿಗಳಿಗೆ ರಾಜಕೀಯ ಏಳ್ಗೆ ಸಿಗಲಿಲ್ಲ.

-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.