ರೈಲು ನಿಲ್ದಾಣದಲ್ಲಿ ಅಭ್ಯರ್ಥಿಗಳ ಠಿಕಾಣಿ
ಕ.ಪ್ರ.ವಾರ್ತೆ ರಾಮನಗರ ಏ.29
ಪ್ರಯಾಣಿಕರ ದಟ್ಟಣೆಯಿಂದ ಕೂಡಿದ್ದ ಚನ್ನಪಟ್ಟಣ ರೈಲು ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಒಂದೂವರೆ ತಾಸು ಠಿಕಾಣಿ ಹೂಡಿದ್ದ ಕ್ಷೇತ್ರದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತ್ತು ಬೆಂಬಲಿಗರ ದಂಡು ಮತಯಾಚನೆಯಲ್ಲಿ ನಿರತವಾಗಿತ್ತು.
ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್ ಹುರಿಯಾಳು ಸಾದತ್ ಆಲಿಖಾನ್ ಮತ್ತು ಬಿಜೆಪಿ ಸ್ಪರ್ಧಾಳು ರವಿಕುಮಾರಗೌಡ ಅವರು ಬೆಂಬಲಿಗರ ಪಡೆಯೊಂದಿಗೆ ಕರಪತ್ರ, ಪ್ರಣಾಳಿಕೆ ಪ್ರತಿಗಳ ವಿತರಣೆಯೊಂದಿಗೆ ಪ್ರಯಾಣಿಕರ ಬಳಿ ಮತಯಾಚಿಸಿದರು.
ಬೆಂಗಳೂರು-ಮೈಸೂರು ನಡುವೆ ಅತಿ ಹೆಚ್ಚು ಪ್ರಯಾಣಿಕರು ಹತ್ತಿ ಇಳಿಯುವುದೇ ಚನ್ನಪಟ್ಟಣ ನಿಲ್ದಾಣದಲ್ಲಿ. ಅದರಲ್ಲೂ ಸೋಮವಾರ ಪ್ರಯಾಣಿಕರ ಸಂಖ್ಯೆ ಕನಿಷ್ಠ 5 ರಿಂದ 6 ಸಾವಿರದಷ್ಟು ಇರುತ್ತದೆ. ನಾನಾ ಹಳ್ಳಿ, ಭಾಗ ಮತ್ತು ವರ್ಗದವರನ್ನು ಒಂದೇ ಬಾರಿಗೆ ಭೇಟಿಯಾಗುವ ಅವಕಾಶ ಅಭ್ಯರ್ಥಿಗಳಿಗೆ ಒದಗಿ ಬಂದಿತ್ತು.
ನಿಲ್ದಾಣಕ್ಕೆ ಮೊದಲಿಗೆ ಅನಿತಾ ಕುಮಾರಸ್ವಾಮಿ ಮತ್ತು ಸಾದತ್ ಆಲಿಖಾನ್ ಆಗಮನವಾಗಿತ್ತು. ವಿಷಯ ತಿಳಿದು ರವಿಕುಮಾರಗೌಡ ಪಡೆಯೂ ಆಗಮಿಸಿತು. ರೈಲು ನಿಲ್ದಾಣದ ಒಳಗೆ, ಹೊರಗೆ ಮೂರು ಪಕ್ಷದವರೂ ಮತಭಿಕ್ಷೆಯನ್ನು ಬೇಡುತ್ತಿದ್ದ ದೃಶ್ಯ ಕಂಡು ಬಂದಿತು.
ಬಿಜೆಪಿ ಕೊಡುಗೆ: ಚನ್ನಪಟ್ಟಣದಲ್ಲಿ ಏತ ನೀರಾವರಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸೇರಿದಂತೆ ರು.400 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳು ಬಿಜೆಪಿ ಕೊಡುಗೆ. ಆ ಪಕ್ಷದಿಂದ ಕಣಕ್ಕೆ ಇಳಿದಿರುವ ನನಗೆ ಮತ ನೀಡಿ, ಋಣ ತೀರಿಸುವಂತೆ ರವಿಕುಮಾರಗೌಡ ಮನವಿ ಮಾಡಿದರು.
ಉಭಯ ಕುಶಲೋಪರಿ: ಅಭ್ಯರ್ಥಿಗಳು ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದೂ ಉಂಟು.
ನೆರೆದಿದ್ದ ಕಾರ್ಯಕರ್ತರು ಕುತ್ತಿಗೆಗೆ ಪಕ್ಷದ ಚಿಹ್ನೆಯಿದ್ದ ವಸ್ತ್ರ ಸುತ್ತಿಕೊಂಡೇ ಅನ್ಯ ಪಕ್ಷಗಳ ಸ್ನೇಹಿತರ ಜತೆ ಸಂಭಾಷಣೆಗೆ ಇಳಿದಿದ್ದರು. ಮೂರು ಪಕ್ಷಗಳವರ ನಡುವೆ ಸೌಹಾರ್ದ ಚರ್ಚೆ ಸಾಗಿತ್ತು.
ಚನ್ನಪಟ್ಟಣದಲ್ಲಿ ನೇರ ಹಣಾಹಣಿ ಇರುವುದು ಜೆಡಿಎಸ್ ಅನಿತಾ ಕುಮಾರಸ್ವಾಮಿ ಮತ್ತು ಸಮಾಜವಾದಿ ಪಕ್ಷದ ಸಿ.ಪಿ.ಯೋಗೇಶ್ವರ್ ನಡುವೆಯೇ. ರೈಲು ನಿಲ್ದಾಣದಲ್ಲಿ ಯೋಗೇಶ್ವರ್ ಪಡೆಯ ಪ್ರಚಾರ ಇರಲಿಲ್ಲ. ಮಾಹಿತಿ ತಿಳಿದಾಗ್ಯೂ ಆಗಮಿಸುವ ಗೋಜಿಗೆ ಅವರು ಹೋಗಲಿಲ್ಲ.
ಸಾಲುಗಟ್ಟಿದರು
ಪ್ರಾರಂಭದಲ್ಲಿ ನಿಲ್ದಾಣ ಒಳಗೆ ಪ್ರಯಾಣಿಕರನ್ನು ಭೇಟಿಯಾಗುತ್ತಿದ್ದ ಅಭ್ಯರ್ಥಿಗಳು ಬಳಿಕ ಮುಖ್ಯ ಗೇಟ್ನಲ್ಲಿ ಒಬ್ಬರದಾದ ನಂತರ ಒಬ್ಬರಂತೆ ಸಾಲುಗಟ್ಟಿದರು. ನಿಲ್ದಾಣಕ್ಕೆ ಬಂದು, ಹೋದವರಿಗೆಲ್ಲಾ ಕರಪತ್ರಗಳನ್ನು ನೀಡಿ ಮತಯಾಚನೆ ಮಾಡಲಾಯಿತು.
ಕ್ಷೇತ್ರದ ಅಭಿವೃದ್ಧಿ, ಶಾಶ್ವತ ನೀರಾವರಿ ಯೋಜನೆಗಾಗಿ ತಮಗೆ ಮತ ನೀಡುವಂತೆ ಅನಿತಾ ಕುಮಾರಸ್ವಾಮಿ ಮನವಿ ಮಾಡುತ್ತಿದ್ದರು. ಬೆಂಗಳೂರು-ಮೈಸೂರು ಪುಷ್ಫುಲ್ ರೈಲು ಪ್ರಾರಂಭಿಸಿದ್ದೇ ನಾನು ಎಂದು ಸಾದತ್ ಆಲಿಖಾನ್ ಅವರು ನಿಲ್ದಾಣದ ತುಂಬೆಲ್ಲಾ ಹೇಳಿಕೊಳ್ಳುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

