ಬೆಂಗಳೂರು ಗ್ರಾಮಾಂತರ

ಭಾರತೀಯರ ಅಂತಃಪ್ರಜ್ಞೆಯಲ್ಲಿ 'ವಿವೇಕಾ' ಚಿರಂತನ

Published On :

ದೊಡ್ಡಬಳ್ಳಾಪುರ: ಪ್ರತಿಯೊಬ್ಬ ಭಾರತೀಯನ ಅಂತಃಪ್ರಜ್ಞೆಯಲ್ಲಿ ವಿವೇಕಸ್ಮೃತಿ ಜೀವಂತವಾಗಿದೆ. ಅದು ರಾಷ್ಟ್ರ ಚಿಂತನೆಯ ಚಿರಂತನ ನಂದಾದೀವಿಗೆಯಾಗಿರುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ, ವಿವೇಕಾನಂದ ಚಿಂತನೆಗಳ ಪ್ರಚಾರಕ ಸಂತೋಷ್ ಹೇಳಿದರು.
ಇಲ್ಲಿನ ಶ್ರೀದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಸಮಿತಿ, ಕಾಲೇಜಿನ ಎನ್ಎಸ್ಎಸ್ ನೇತೃತ್ವದಲ್ಲಿ ನಡೆದ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ  ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೈಜ್ಞಾನಿಕ ಮನೋಭಾವವುಳ್ಳ ಯುವಕರನ್ನು ಬೆಳೆಸಿ ಎಂದು ಪದೇ ಪದೇ ಹೇಳುತ್ತಿದ್ದ ವಿವೇಕಾನಂದರು ದೇಶದ ಸರ್ವಾಂಗೀಣ ಪ್ರಗತಿ ಬಯಸಿದ್ದರು.  ವ್ಯಕ್ತಿಯೊಬ್ಬನ ಶ್ರೇಷ್ಠತೆ ಆತನ ನೆರಳಿನಿಂದ ಅಳೆಯಬಹುದಾಗಿದೆ ಎನ್ನುವ ಹಾಗೆ ವಿವೇಕಾನಂದರು ಬಿಟ್ಟು ಹೋದ ಆದರ್ಶಗಳು ಶತಮಾನ ಕಳೆದರೂ ಪ್ರಸ್ತುತ ಎನಿಸಿವೆ. ಇಂದು ಜನ ಬದುಕಿದ್ದಾರೆ, ಆದರೆ ಅವರಲ್ಲಿನ ಆತ್ಮವಿಶ್ವಾಸ ಸತ್ತುಹೋಗಿದೆ. ಎಲ್ಲಿ ಹಸಿದ ಹೊಟ್ಟೆಗೆ ಅನ್ನ ಇರುವುದಿಲ್ಲವೋ ಅಲ್ಲಿ ಆಧ್ಯಾತ್ಮ ರುಚಿಸುವುದಿಲ್ಲ. ಒಂದು ನೆಲದ ಮೂಲಭೂತ ಗುಣಗಳನ್ನು ಅರ್ಥ ಮಾಡಿಕೊಂಡು ಜಗತ್ತು ಕಟ್ಟುವ ಕೆಲಸ ಆಗಬೇಕು ಎಂದರು.
ಜಾತಿ ಸನ್ಯಾಸಿಗಳು ಅಪಾಯಕಾರಿ: ಇಂದು ಜಗದ್ಗುರುಗಳೆಸಿಕೊಳ್ಳುವವರು ಒಂದು ಜಾತಿಯ ಪರಿಮಿತಿಯಲ್ಲಿ ಸಿಲುಕಿಕೊಂಡಿರುತ್ತಾರೆ. ಇಂತಹವರು ಅತ್ಯಂತ ಅಪಾಯಕಾರಿ. ಆದರೆ ವಿವೇಕಾನಂದರಿಗೆ ಯಾವುದೇ ಜಾತಿ, ಭಾಷೆಗಳ ಸಂಕೋಲೆ ಇರಲಿಲ್ಲ. ಹೀಗಾಗಿಯೇ ಅವರು ದಾರ್ಶನಿಕರಾದರು ಎಂದರು.
ಪ್ರಭಾರ ಪ್ರಾಂಶುಪಾಲ ಜೆ.ವಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕ ಕೆ.ಆರ್.ರವಿಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗ ಮುಖ್ಯಸ್ಥ ದಕ್ಷಿಣಾಮೂರ್ತಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಎಂ.ಚಿಕ್ಕಣ್ಣ ಮತ್ತಿತರರು ಹಾಜರಿದ್ದರು. ವಿದ್ಯಾರ್ಥಿನಿ ಡಿ.ಎಸ್.ಪ್ರಿಯಾಂಕ ಪ್ರಾರ್ಥನ ಗೀತೆ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.