ಬೆಂಗಳೂರು ಗ್ರಾಮಾಂತರ

ಕೊನೆಗೂ ಕುಡಿವ ನೀರಿನ ಸಮಸ್ಯೆಗೆ ಪರಿಹಾರ

Published On :

ಕ.ಪ್ರ.ವಾರ್ತೆ ಟಿ ಮಾಗಡಿ ಟಿ  ಆ.7
ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಜನತೆ ಕುಡಿವ ನೀರಿನ ಸಮಸ್ಯೆ ಎದುರಿಸಬೇಕಾದ ಪ್ರಸಂಗ ಲಕ್ಕೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.
ಪಂಚಾಯ್ತಿ ವತಿಯಿಂದ ಕಿರುನೀರು ಸರಬರಾಜು ಮಾಡುವ ನೌಕರನೊಬ್ಬ ಕೆಂಪಚಿಕ್ಕನಹಳ್ಳಿ ಗ್ರಾಮ ಜನತೆಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂಬ ದೂರಿನ ಮೇಲೆ ಕೆಲವೇ ಸದಸ್ಯರು ಸಹಿ ಮಾಡಿ ನೌಕರ ಸುರೇಶ್  ಅವರನ್ನು ಸೇವೆಯಿಂದ ವಜಾಗೊಳಿಸಿದ್ದರು. ಪಂಚಾಯ್ತಿ ಸದಸ್ಯರು ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳದೆ ಕೆಲ ಸದಸ್ಯರ ಸಹಿ ಆಧಾರದ ಮೇಲೆ ಅಧ್ಯಕ್ಷ ಚಲುವಯ್ಯ ನೌಕರ ಸುರೇಶ್  ಅವರನ್ನು ಕೆಲಸದಿಂದ ವಜಾ ಗೊಳಿಸಿರುವುದು ಸರಿಯಲ್ಲ. ಪಂಚಾಯ್ತಿಯು ಸಾಮಾನ್ಯ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳದೆ ಏಕಾಏಕಿ ನೌಕರರನ್ನು ವಜಾ ಗೊಳಿಸಲಾಗಿದೆ ಎಂದು ಕೆಲ ಸದಸ್ಯರು ಆರೋಪಿಸಿದರು.
ಈ ಘಟನೆ ಹಿನ್ನೆಲೆಯಲ್ಲಿ ಪಂಚಾಯ್ತಿ ವತಿಯಿಂದ ನೇಮಕಗೊಂಡಿರುವ 13 ಮಂದಿ ನೀರು ಬಿಡುವ ನೌಕರರು ಸಂಘಟನಾತ್ಮಕವಾಗಿ ಧರಣಿ ಕುಳಿತು ವಜಾಗೊಂಡಿರುವ ನೌಕರ ಸುರೇಶ್ ಅವರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಪಂಚಾಯ್ತಿ ಕಚೇರಿಗೆ ಬೀಗ ಜಡಿದರು.
ಇದರಿಂದಾಗಿ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಜನತೆಗೆ ಏಕಾಏಕಿ ನೀರು ಪೂರೈಕೆ ಸ್ಥಿಗಿತಿಗೊಂಡಿದ್ದು,ರಾಜಕೀಯ ದ್ವೇಷಕ್ಕೆ ಲಕ್ಕೇನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಜನತೆ ಕಳೆದ ಮೂರು ದಿನಗಳಿಂದ ನೀರಿನ ತೊಂದರೆ ಎದುರಿಸಬೇಕಾಯಿತು. ಶಾಲಾ ಮಕ್ಕಳ ಬಿಸಿಯೂಟಕ್ಕೂ ನೀರಿನ ಪರದಾಟ ಉಂಟಾಗಿ ಜನತೆಯನ್ನು ಕೆರಳಿಸಿತ್ತು.
  ಕಳೆದ ಮೂರು ದಿನಗಳಿಂದ ಕುಡಿಯುವ ನೀರಿಲ್ಲ ಎಂದು ಗ್ರಾಮದ ಜನತೆ ಪಂಚಾಯ್ತಿಗೆ ಜಮಾಯಿಸಿ, ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೆ ಜಾಗೃತರಾದ ಪಂಚಾಯ್ತಿ ಅಧ್ಯಕ್ಷ ಚಲುವಯ್ಯ, ಮಾಜಿ ಅಧ್ಯಕ್ಷ ಎನ್.ಗಂಗರಾಜು, ರಮೇಶ್, ಕೃಷ್ಣಪ್ಪ ಧರಣಿ ನಿರತರನ್ನು ಸಮಾಧಾನ ಪಡಿಸಿ, ಸುರೇಶ್ ಅವರಿಂದ  ಮುಚ್ಚಳಿಕೆ ಬರೆಸಿಕೊಂಡು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.
ನೀರು ಸರಬರಾಜು ನೌಕರರು ಧರಣಿ ಕೈಬಿಟ್ಟ ಕರ್ತವ್ಯಕ್ಕೆ ಹಾಜರಾದರು. ಪಿಡಿಓ ದಿವ್ಯಾ, ಕಾರ್ಯದರ್ಶಿ ವೆಂಕಟೇಶ್  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.