ನಾನು ಈ ಜಿಲ್ಲೆಯ ಮಗ, ಇದೇ ನೆಲದಲ್ಲೇ ಮಣ್ಣು'
ಕ.ಪ್ರ.ವಾರ್ತೆ ಚನ್ನಪಟ್ಟಣ ಆ.8
ನಾನು ಈ ಜಿಲ್ಲೆಯ ಮಗ. ನಾನೇನಾದರೂ ಸತ್ತರೆ ಮಣ್ಣು ಮಾಡೋದು ಇದೇ ನೆಲದಲ್ಲೇ ಹೊರತು ಹೊಳೆನರಸೀಪುಕ್ಕೆ ಕೊಂಡೊಯ್ಯುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಟ್ಟುಕೊಂಡು ಟೀಕಾ ಪ್ರಹಾರ ನಡೆಸಿದರು.
ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನನಗೆ ನನ್ನದೆಂದು ಹೇಳಿಕೊಳ್ಳಲು ಇರುವುದು ರಾಮನಗರ ಜಿಲ್ಲೆ ಒಂದೇ. ಬೇರೆಯವರಂತೆ ಹೋದ ಕಡೆಯಲ್ಲೆಲ್ಲಾ ಒಂದೊಂದು ಜಿಲ್ಲೆಯನ್ನು ಕಣ್ಣು, ಹೃದಯ ಎನ್ನುವುದಿಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಈ ಜಿಲ್ಲೆ ಜನತೆಯ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ ಎಂದರು.
ಈ ಭಾಗದ ಜನರಿಗೆ ಏನೇ ಸಮಸ್ಯೆ ಎದುರಾದರೂ ಪೊಲೀಸ್ ಠಾಣೆ, ಆಸ್ಪತ್ರೆಗೆ, ತಾಲೂಕು ಕಚೇರಿಗೆ ನಾನಾಗಲೀ ಅಥವಾ ನನ್ನ ಸಹೋದರ ಸುರೇಶ್ ಆಗಲೀ ಬರುತ್ತಾರೆ. ಜನರ ಸಮಸ್ಯೆಗೆ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸ್ಪಂದಿಸುವುದಿಲ್ಲ ಎನ್ನುವುದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದರು.
ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ, ಕೇಂದ್ರ ಸರ್ಕಾರ ಬೆನ್ನಿಗಿದೆ. ಈ ಭಾಗದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬ ಕಾಳಜಿ ಇದೆ. ನಮಗೂ ಇದ್ದು, ಈ ಬಾರಿ ಒಂದು ಅವಕಾಶ ನೀಡಿ ನೋಡಿ ಎಂದು ಶಿವಕುಮಾರ್ ತಿಳಿಸಿದರು.
ಚನ್ನಪಟ್ಟಣ ಮೆಟ್ಟಿಲಾಗಿದೆ: ಮರು ವಿಂಗಡಣೆಯಲ್ಲಿ ಈ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ವಿರುಪಾಕ್ಷಿಪುರ ಹೋಬಳಿಯು 1985ರಿಂದ ನನ್ನ ರಾಜಕೀಯ ಬೆಳವಣಿಗೆ ಮೆಟ್ಟಿಲಾಗಿದೆ. ಚನ್ನಪಟ್ಟಣದಿಂದ ಸ್ಪರ್ಧಿಸಿ, ಇಲ್ಲಿನ ಜನರ ಸೇವೆ ಮಾಡಬೇಕೆನ್ನುವ ನನ್ನ ಅದಮ್ಯ ಬಯಕೆಗೆ ನನ್ನ ಸಹೋದರನ ಮೂಲಕ ಒಂದು ಅವಕಾಶ ಸಿಕ್ಕಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜಕೀಯವಾಗಿ ಸಂಕಷ್ಟದಲ್ಲಿರುವ ನಾವೀಗ ಅನಿವಾರ್ಯವಾಗಿ ಈ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿ ಗೆಲವು ತಂದುಕೊಟ್ಟಿದ್ದೇ ಆದರೆ ತಾಲೂಕಿನ ಜನತೆ ಎದುರಿಸುತ್ತಿರುವ ನಾಯಕತ್ವದ ಕೊರತೆಯನ್ನು ಖುದ್ದು ನಾನೇ ನೀಗಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಹಿಂದೆ ಆಗಿದ್ದನ್ನೆಲ್ಲ ಮರೆತು ಬಿಡೋಣ. ತಾಲೂಕಿನಲ್ಲಿ ಕಾಂಗ್ರೆಸ್ ಸ್ಥಿತಿಗತಿಯ ಬಗ್ಗೆ ನನಗೆ ಚೆನ್ನಾಗಿಯೇ ಗೊತ್ತಿದೆ. ಹಳೆಯದನ್ನು ಕೆದಕುವುದು ಬೇಡ. ಈ ಬಾರಿಯ ಚುನಾವಣೆಯಲ್ಲಿ ನೀವು ನಿಮ್ಮ ಊರಿನಲ್ಲೇ ಇದ್ದು ಲೀಡ್ ಕೊಡಿ. ಯಾರು ಹೆಚ್ಚಿನ ಲೀಡ್ ಕೊಡುತ್ತಾರೋ ಅವರೇ ಮುಂದಿನ ಲೀಡರ್ ಎಂದರು.
ಅಭಿವೃದ್ಧಿಗೆ ಬೆಂಬಲಿಸಿ: ತಾಲೂಕಿನ ಅಭಿವೃದ್ಧಿಗಾಗಿ ಯೋಗೇಶ್ವರ್ ಬಿಜೆಪಿಗೆ ಹೋಗಿದ್ದರು. ಇದೀಗ ಸಮಾಜವಾದಿ ಪಕ್ಷದಲ್ಲಿದ್ದಾರೆ. ಪಕ್ಷಾಂತರ ಮಾಡಿದಾಗೆಲ್ಲಾ ತಾಲೂಕಿನ ಅಭಿವೃದ್ಧಿಗಾಗಿ ಎಂದು ಹೇಳಿಕೊಳ್ಳುತ್ತಾರೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರವಿದ್ದು, ತಾಲೂಕಿನ ಅಭಿವೃದ್ಧಿಗಾಗಿ ಅವರೀಗ ನಮ್ಮ ಪಕ್ಷವನ್ನೇ ಬೆಂಬಲಿಸಲಿ ಎಂದು ಶಿವಕುಮಾರ್ ಸಲಹೆ ನೀಡಿದರು.
ಅಧಿಕಾರಕ್ಕಾಗಿ ಬಂದಿಲ್ಲ: ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ, ನಾನು ಅಧಿಕಾರಕ್ಕೋಸ್ಕರ ಸ್ಪರ್ಧೆಗೆ ಇಳಿದಿಲ್ಲ ಸಂಕಷ್ಟದಲ್ಲಿರುವ ಪಕ್ಷ ಮತ್ತು ಕಾರ್ಯಕರ್ತರನ್ನು ರಕ್ಷಿಸಬೇಕೆಂಬ ಉದ್ದೇಶದಿಂದಷ್ಟೇ ನನ್ನ ಸ್ಪರ್ಧೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿಯಾವುಲ್ಲಾ, ಮಾಜಿ ಶಾಸಕ ಸಾದತ್ ಆಲಿಖಾನ್, ಕಾಂಗ್ರೆಸ್ ಮುಖಂಡರಾದ ರಘುನಂದನ್ ರಾಮಣ್ಣ, ಟಿ.ಕೆ.ಯೋಗೇಶ್, ಭಗತ್ರಾಂ, ಪದ್ಮ ಕೃಷ್ಣಯ್ಯ, ಕಾವೇರಮ್ಮ, ರೇಣುಕಾ, ಡಿ.ಕೆ.ಕಾಂತರಾಜು, ಚಕ್ಕೆರೆ ರಾಜು, ಅಸ್ಮತ್ ಪಾಷಾ ನಿಜಾಮಿ, ಬ್ಲಾಕ್ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಕಾರ್ಯದರ್ಶಿಗಳಾದ ಪಿ.ಡಿ.ರಾಜು, ರಾಂಪುರ ಲೋಕೇಶ್, ಅಕ್ಕೂರು ಪುಟ್ಟರಾಜು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

