ಸೈನಿಕ ಯೋಗೇಶ್ವರ್ಗೆ ಕೈಕೊಟ್ಟ ಬಲಗೈ ಭಂಟರು
ಮತ್ತೀಕೆರೆ ಜಯರಾಮ್
ರಾಮನಗರ: ಮರು ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನಿಲುವು ಪ್ರಕಟಕ್ಕೆ ಮುನ್ನವೇ ಸೈನಿಕ ಸಿ.ಪಿ.ಯೋಗೇಶ್ವರ್ಗೆ ಬಲಗೈ ಭಂಟರೇ ಬೆನ್ನು ತೋರಿದ್ದಾರೆ. ನಾಯಕನಿಗೂ ಮೊದಲೇ ತಮ್ಮ ನಿರ್ಧಾರ ಪ್ರಕಟಿಸಿರುವ ಬೆಂಬಲಿಗರು ಕೈ ಪಡೆಗೆ ಬೆಂಬಲ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ಯೋಗೇಶ್ವರ್ ಪಾಲಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬದವರು ಸಮಾನ ಶತ್ರುಗಳು. ಚುನಾವಣಾ ಸಮರದಲ್ಲಿ ಶತ್ರುಗಳ ಸೆಣೆಸಾಟ ನೋಡಿ ಖುಷಿ ಪಡಬೇಕೆಂದಿದ್ದ ಯೋಗೇಶ್ವರ್ ಆಸೆಗೆ ಈಗ ಬೆಂಬಲಿಗರೇ ತಣ್ಣೀರೆರೆಚಿದ್ದಾರೆ.
ಯೋಗೇಶ್ವರ್ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಜೆಡಿಎಸ್ ವಿರುದ್ಧ ಸೆಣೆಸುತ್ತಲೇ ಬಂದಿದ್ದಾರೆ. ದೇವೇಗೌಡ ಕುಟುಂಬದ ವಿರುದ್ಧವೇ 2 ಬಾರಿ ಸ್ಪರ್ಧಿಸಿ, ತಲಾ ಒಮ್ಮೆ ಸೋಲು ಮತ್ತು ಗೆಲವು ಕಂಡಿದ್ದಾರೆ. ಅಂತೆಯೇ ಡಿ.ಕೆ.ಶಿವಕುಮಾರ್ ಜತೆ ಕಡುವೈರತ್ವ ಮುಂದುವರೆದಿದೆ.
ಯೋಗಿಗೆ ತೀವ್ರ ಹಿನ್ನಡೆ: ಬೆಂಗಳೂರು ಗ್ರಾಮಾಂತರದ ಜಿದ್ದಾಜಿದ್ದಿನ ಅಖಾಡದಲ್ಲಿ ದೇವೇಗೌಡ ಮತ್ತು ಶಿವಕುಮಾರ್ ಕುಟುಂಬ ಪ್ರತಿಸ್ಪರ್ಧಿಗಳಾಗುತ್ತಲೇ ಯೋಗೇಶ್ವರ್ ಬೇಡಿಕೆಯ ನಾಯಕರಾಗಿ ಹೊರ ಹೊಮ್ಮಿದ್ದರು. ಅವರ ಬೆಂಬಲ ಗಿಟ್ಟಿಸಲು ಉಭಯ ಪಕ್ಷಗಳ ನಾಯಕರು ಕಸರತ್ತಿಗೆ ಇಳಿದಿದ್ದರು.
ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ತಾವು ರಾಷ್ಟ್ರೀಯ ಪಕ್ಷವೊಂದರ ನಾಯಕ. ಹೀಗಾಗಿ ಯಾರನ್ನು ಬೆಂಬಲಿಸಬೇಕೆನ್ನುವ ಕುರಿತು ಪಕ್ಷದ ಸರ್ವೋಚ್ಚ ನಾಯಕ ಮುಲಾಯಂಸಿಂಗ್ ಯಾದವ್ ಜತೆ ಚರ್ಚಿಸಿ, ಆ.15ರ ವೇಳೆಗೆ ಪ್ರಕಟಿಸುವುದಾಗಿ ಯೋಗೇಶ್ವರ್ ಈಗಾಗಲೇ ಖಚಿತಪಡಿಸಿದ್ದರು.
ಇದೀಗ ಯೋಗೇಶ್ವರ್ ನಿಲುವು ಪ್ರಕಟಕ್ಕೆ ಮುನ್ನವೇ ಅವರ ಎಡಗೈ, ಬಲಗೈ ಮತ್ತು ನೆರಳೆಂದೇ ಬಿಂಬಿಸಿಕೊಳ್ಳುತ್ತಿದ್ದವರು ತಮ್ಮದೇ ದಾರಿ ಹುಡಿಕಿಕೊಂಡಿದ್ದಾರೆ. ಇದರೊಂದಿಗೆ ಸಹಜವಾಗಿಯೇ ಯೋಗೇಶ್ವರ್ ತೀವ್ರ ಹಿನ್ನಡೆ ಜತೆಗೆ ಮುಖಭಂಗ ಅನುಭವಿಸಿದಂತಾಗಿದೆ.
ಮೂಲ ಕಾಂಗ್ರೆಸ್ಸಿಗರೇ: ಚೊಚ್ಚಲ ಚುನಾವಣೆಯಲ್ಲಿ ಪಕ್ಷೇತರರಾಗಿ ವಿಧಾನಸಭೆ ಮೆಟ್ಟಿಲೇರಿದ್ದ ಯೋಗೇಶ್ವರ್ ನಂತರ ಸತತ ಎರಡು ಬಾರಿ ಕಾಂಗ್ರೆಸ್ನಿಂದ ಚುನಾಯಿತರಾಗಿದ್ದರು. ಆಪರೇಷನ್ ಕಮಲದ ಖೆಡ್ಡಕ್ಕೆ ಬಿದ್ದು, ಸಂಸತ್ ಮತ್ತು ವಿಧಾನಸಭೆ ಮರು ಚುನಾವಣೆಯಲ್ಲಿ ಮುಗ್ಗರಿಸಿದ್ದರು.
ಎಂ.ಸಿ.ಅಶ್ವತ್ಥ್ ಅವರನ್ನೂ ಆಪರೇಷನ್ ಕಮಲದ ಕೂಪಕ್ಕೆ ದೂಡಿ ಮತ್ತೊಂದು ಮರು ಚುನಾವಣೆಯಲ್ಲಿ ವಿಧಾನಸಭೆಗೆ ಮರು ಆಯ್ಕೆಗೊಂಡು, ಸಚಿವರಾಗುವ ಕನಸು ಈಡೇರಿಸಿಕೊಂಡರು. ಕಳೆದ ಬಾರಿ ಸಮಾಜವಾದಿ ಪಕ್ಷದ ಸೈಕಲ್ ಏರಿ ಗೆದ್ದಿದ್ದೂ ಆಯಿತು.
ಇದೆನೇ ಇದ್ದರೂ ಯೋಗೇಶ್ವರ್ ಮೂಲತಃ ಕಾಂಗ್ರೆಸಿಗ. ಅವರ ಬಹುಪಾಲು ಬೆಂಬಲಿಗರೂ ಕಾಂಗ್ರೆಸ್ಸಿನಿಂದಲೇ ಬಂದವರು. ಇಲ್ಲಿವರೆಗೆ ನಾಯಕನನ್ನೇ ಹಿಂಬಾಲಿಸಿಕೊಂಡುಬಂದಿದ್ದರು. ಈಗ ತಾವೇ ನಡೆ ನಿರ್ಣಯಿಸಿ, ತಮ್ಮನ್ನೇ ಅನುಸರಿಸುವಂತೆ ಯೋಗೇಶ್ವರ್ ಅವರನ್ನು ಅಡಕತ್ತರಿಗೆ ಸಿಲುಕಿಸಿದ್ದಾರೆ.
ನಿಲುವಿಗೆ ನೀಡುವ ಕಾರಣ: ನಾವೆಲ್ಲ ಮೂಲ ಕಾಂಗ್ರೆಸಿಗರು. ಯೋಗೇಶ್ವರ್ ಸಾಕಷ್ಟು ಬಾರಿ ಪಕ್ಷಾಂತರ ಮಾಡಿದ್ದಾಗ್ಯೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದಷ್ಟೇ ನಾವೆಲ್ಲಾ ಅವರನ್ನೇ ಬೆಂಬಲಿಸಿಕೊಂಡು ಬಂದಿದ್ದೇವೆ. ಈಗ ಕಾಂಗ್ರೆಸ್ ಬೆಂಬಲಿಸಲೂ ಕ್ಷೇತ್ರಾಭಿವೃದ್ಧಿ ಕಾರಣವೆನ್ನುವುದು ಯೋಗೇಶ್ವರ್ ಬೆಂಬಲಿಗರ ಮಾತು.
ಯೋಗೇಶ್ವರ್ ಆಪರೇಷನ್ ಕಮಲಕ್ಕೆ ಒಳಗಾದಾಗ, ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಕಾಂಗ್ರೆಸ್ ಕದ ತಟ್ಟಿದ್ದಾಗಲೂ ಕ್ಷೇತ್ರದ ಅಭಿವೃದ್ಧಿ ವಿಷಯವನ್ನೇ ಮುಂದು ಮಾಡಿದ್ದರು. ಇದೀಗ ಬೆಂಬಲಿಗರೂ ಕ್ಷೇತ್ರದ ಅಭಿವೃದ್ಧಿ ಮಂತ್ರವನ್ನೇ ಮುಂದಿಟ್ಟುಕೊಂಡು ನಾಯಕನಿಗೆ ತಿರುಗು ಬಾಣವಾಗಿದ್ದಾರೆ.
ಸಹೋದರ ಸುರೇಶ್ ಅವರನ್ನು ಕಣಕ್ಕಿಳಿಸಿ, ಶತಾಯ ಗತಾಯ ಗೆಲ್ಲಿಸಲೇಬೇಕೆಂದು ಪಣತೊಟ್ಟು ಹೋರಾಡುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಈಗಾಗಲೇ ಯೋಗೇಶ್ವರ್ ಬೆಂಬಲಿಗರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಈಗ ಮೊದಲ ತಂಡವನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಯಕನ ನಿಲುವು ಬಾಕಿ: ಸಮಾಜವಾದಿ ಪಕ್ಷದ ಒಂದು ಗುಂಪು ಈಗ ಕೈವಶವಾಗಿದೆ. ಡಿ.ಕೆ.ಶಿವಕುಮಾರ್ ಕಾರಣಕ್ಕೆ ಕಾಂಗ್ರೆಸ್ ತೊರೆದು, ಯೋಗೇಶ್ವರ್ ಜತೆ ಗುರುತಿಸಿಕೊಂಡ ಮತ್ತೊಂದು ತಂಡದ ನಿಲುವು ಇನ್ನೂ ನಿಗೂಢವಾಗಿದೆ. ಕಡೆಗೆ, ಉಳಿದಿರುವುದು ಪಕ್ಷದ ಹೈಕಮಾಂಡ್ ಮತ್ತು ಯೋಗೇಶ್ವರ್ ನಿಲುವಷ್ಟೇ.
ಚುನಾವಣೆ ವೇಳೆ ಪಕ್ಷಾಂತರ, ನಿಷ್ಠೆ ಬದಲಾವಣೆ ಹೊಸದಲ್ಲ. ಚನ್ನಪಟ್ಟಣದಲ್ಲಿ ಸಮಾಜವಾದಿ ಪಕ್ಷ ಮುಲಾಯಂ ಸಿಂಗ್ ಹಿಡಿತದಲ್ಲಿಲ್ಲ. ಇಷ್ಟಾಗಿಯೂ ಉತ್ತರ ಪ್ರದೇಶದಿಂದ ಬರುವ ಸಂದೇಶವಾದರೂ ಏನು, ಅದು ಎಷ್ಟರ ಮಟ್ಟಿಗೆ ಪಾಲನೆ ಆಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

