ಬೆಂಗಳೂರು ಗ್ರಾಮಾಂತರ

ಮರು ಚುನಾವಣೆಗೆ ಕಾಂಗ್ರೆಸ್ ಷಡ್ಯಂತ್ರವೇ ಕಾರಣ

Published On :

ಕ.ಪ್ರ.ವಾರ್ತ್ಣೆ ರಾಮನಗರ    ಆ.8
ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿರುವಾಗ ಮರು ಚುನಾವಣೆ ಎದುರಾಗಲು ಕಾಂಗ್ರೆಸ್ ಷಡ್ಯಂತ್ರವೇ ಕಾರಣ. ಜೆಡಿಎಸ್ ಹಣಿಯಲೆಂದೇ ಈ ಮರು ಚುನಾವಣೆಯನ್ನು ಕಾಂಗ್ರೆಸ್ ಹುಟ್ಟು ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮರು ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಲು ಕಾಂಗ್ರೆಸ್ ಸಾಕಷ್ಟು ಚಿತಾವಣೆ ನಡೆಸುತ್ತಿದೆ ಎಂದು ದೂರಿದರು.
ಒಂದೊಮ್ಮೆ ಈಗ ಜೆಡಿಎಸ್ ಸೋಲಿಸಿದರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ನಾಮಾವಶೇಷವಾಗಿದೆ ಎಂದು ಬಿಂಬಿಸುವ ಹುನ್ನಾರವನ್ನು ಕಾಂಗ್ರೆಸ್ ನಡೆಸಿದೆ. ಈ ಕಾರಣಕ್ಕಾಗಿಯೇ ಮರು ಚುನಾವಣೆಯನ್ನು ತಂದೊಡ್ಡಲಾಗಿದೆ ಎಂದರು.
ಲೋಕಸಭೆಗೆ ಅವಧಿಗೆ ಮುನ್ನವೇ ಚುನಾವಣೆ ನಡೆಸುವ ಇರಾದೆ ಕೇಂದ್ರ ಸರ್ಕಾರಕ್ಕೆ ಇದೆ. ಈ ವಿಷಯವನ್ನು ಸ್ಪಷ್ಟಪಡಿಸಿ, ಮರು ಚುನಾವಣೆ ಎದುರಾಗದಂತೆ ಕಾಂಗ್ರೆಸ್ ನೋಡಿಕೊಳ್ಳಬಹುದಿತ್ತು. ಹಾಗೆ ಮಾಡುವ ಗೋಜಿಗೆ ಹೋಗಿಲ್ಲ ಎಂದು ದೂಷಿಸಿದರು.
ಕಾರ್ಯಕರ್ತರ ಒತ್ತಡ ಕಾರಣ: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಒತ್ತಡವೇ ಕಾರಣವಾಯಿತು. ಈಗ ಕಾರ್ಯಕರ್ತರ ಆಶಯದಂತೆಯೇ ವಿಧಾನಸಭೆಗೆ ಸ್ಪರ್ಧಿಸಿ, ಸಂಸದ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.  ನಾನೇನು ಹುಡುಗಾಟಕ್ಕೆ ರಾಜಿನಾಮೆ ಸಲ್ಲಿಸಿ, ಚುನಾವಣೆ ಬರುವಂತೆ ಮಾಡಿಲ್ಲ. ಕಾಂಗ್ರೆಸ್ ನಾಯಕರು ದುರುದ್ದೇಶದಿಂದ ನನ್ನತ್ತ ಬೊಟ್ಟು ಮಾಡಿ ತೋರುತ್ತಿದ್ದಾರೆ. ಅವರ ಆರೋಪವು ತಾ ಕಳ್ಳ, ಪರರನ್ನು ನಂಬ ಎನ್ನುವ ಗಾದೆ ಮಾತಿನಂತಾಗಿದೆ ಎಂದು ಛೇಡಿಸಿದರು.
ಸಿದ್ದುಗೆ ತಿರುಗೇಟು:  ದೇವೇಗೌಡರನ್ನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹುದ್ದೆಗೇರಿಸಿದ್ದು ನಾನೇ ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. ಅವರು ನಮ್ಮ ಪಕ್ಷದಲ್ಲಿದ್ದಾಗಲೂ ಬರೇ 58 ಸ್ಥಾನ ಬಂದಿತ್ತೆನ್ನುವುದನ್ನು ಮರೆಯದಿರಲಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಇದ್ದಾಗ, ಹೊರ ಹೋದ ಬಳಿಕವೂ ಜೆಡಿಎಸ್ ಶಕ್ತಿ ಕುಂದಿಲ್ಲ. ಹೀಗಾಗಿ ಸಿದ್ದರಾಮಯ್ಯ ಶಕ್ತಿ ಅರ್ಥವಾಗುತ್ತದೆ. ಕಳೆದ ಬಾರಿ ಕಾಂಗ್ರೆಸ್ ಅಪಪ್ರಚಾರ ಮತ್ತು ರಾಜಕೀಯ ಷಡ್ಯಂತ್ರದಿಂದ ನಮ್ಮ ಪಕ್ಷಕ್ಕೆ 25ಕ್ಕೂ ಹೆಚ್ಚು ಸ್ಥಾನ ಕೈತಪ್ಪಿವೆ ಎಂದರು.
ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಸಾಮರ್ಥ್ಯ ಸಾಬೀತುಪಡಿಸಲಾಗುವುದು. ಮರು ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿ, ಪಕ್ಷದ ಕಾರ್ಯಕರ್ತರನ್ನು ಅಧೀರರನ್ನಾಗಿಸಬೇಕೆನ್ನುವ ಕಾಂಗ್ರೆಸ್ ಕುತಂತ್ರ ಫಲಿಸಲು ಬಿಡಬಾರದು ಎಂದು ಕರೆ ನೀಡಿದರು.
ಹಣ ಬಲವನ್ನು ಧಿಕ್ಕರಿಸಿ: ಮರು ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ 100 ಕೋಟಿಯನ್ನು ಹೊಂದಿಸಿಕೊಂಡಿದೆ. ಚುನಾವಣೆ ನಡೆಯುತ್ತಿರುವ ಉಭಯ ಕ್ಷೇತ್ರಗಳ ಮತದಾರರು ಎಂದೂ ಹಣ ಬಲಕ್ಕೆ ಬೆಂಬಲ ನೀಡಿದವರಲ್ಲ. ಪ್ರೀತಿ, ವಿಶ್ವಾಸ ಮತ್ತು ಜನ ಬಲಕ್ಕೆ ಬೆಂಬಲ ನೀಡುತ್ತಾರೆ ಎನ್ನುವುದನ್ನು ಸಾಬೀತುಪಡಿಸಿ ಎಂದು ಕುಮಾರಸ್ವಾಮಿ ತಿಳಿಸಿದರು.
ಬಲವಂತಕ್ಕೆ ಕಟ್ಟುಬಿದ್ದೆ: ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ನಾಯಕರು ಯಾರೂ ಮುಂದೆ ಬರಲಿಲ್ಲ. ಎಲ್ಲರ ಬಲವಂತಕ್ಕೆ ಕಟ್ಟು ಬಿದ್ದು, ನಾನು ಸ್ಪರ್ಧಿಸಿದ್ದೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಇಲ್ಲ ಎನ್ನುವುದನ್ನು ಈ ಮಾರ್ಗದಲ್ಲೇ ಪ್ರಯಾಣಿಸುವ ಸಿದ್ದರಾಮಯ್ಯ ಒಮ್ಮೆ ಖುದ್ದು ವೀಕ್ಷಿಸಿ ಅವಲೋಕಿಸಲಿ ಎಂದು ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹೇಳಿದರು.
ಪ್ರಸಕ್ತ ಚುನಾವಣೆಯಲ್ಲೂ 2002ರ ಫಲಿತಾಂಶವೇ ಮರುಕಳಿಸಲಿದೆ. ಕಾರ್ಯಕರ್ತರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಭಾರಿ ಅಂತರದ ಗೆಲುವು ತಂದುಕೊಡಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಮತದಾರರ ಎಚ್ಚರ: ಡಿ.ಕೆ.ಶಿವಕುಮಾರ್ ಒಬ್ಬ ಶಾಸಕರಾಗಿ ಕನಕಪುರ ಕ್ಷೇತ್ರವನ್ನು ಹಾಳುಗೆಡವಿದ್ದಾರೆ. ಈಗ ಅವರ ತಮ್ಮನೇನಾದರೂ ಸಂಸದನಾದರೆ ಇಡೀ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವೇ ಹದಗೆಡುತ್ತದೆ. ಹೀಗಾಗಿ ಮತದಾರರು ಎಚ್ಚರ ವಹಿಸಬೇಕೆಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಕರೆ ನೀಡಿದರು.
ನಗರಸಭೆಯ ಬಿಜೆಪಿ ಸದಸ್ಯ ಬಿ.ನಾಗೇಶ್ ಇದೇ ವೇಳೆ ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಇ. ಕೃಷ್ಣಪ್ಪ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಚಂದ್ರ, ಕೆ.ದೇವೇಗೌಡ, ರಾಜಶೇಖರ್, ಚಿಕ್ಕವೀರೇಗೌಡ ಮತ್ತಿತರರು ಭಾಗವಹಿಸಿದ್ದರು.


ಆಯೋಗ ಹಲ್ಲು ಕಿತ್ತ ಹಾವು
ಚುನಾವಣಾ ಆಯೋಗವು ಹಲ್ಲು ಕಿತ್ತ ಹಾವಿನಂತಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳ ವಾಹನಗಳಲ್ಲೇ ಕಾಂಗ್ರೆಸ್ ಪಕ್ಷದ ಹಣ, ಉಡುಗೊರೆಗಳ ಸಾಗಣೆಯಾಗುತ್ತಿದೆ. ಜೆಡಿಎಸ್ ಸಭೆ, ಸಮಾರಂಭ ನಡೆಯುವ ಕಡೆ ಬಂದು ಫೋಟೋ ಮತ್ತು ವೀಡಿಯೋ ಮಾಡಿಕೊಂಡು ಭೀತಿ ಮೂಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಗಂಭೀರ ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.