ಬೆಂಗಳೂರು ಗ್ರಾಮಾಂತರ

ಧ್ವಜಾರೋಹಣಕ್ಕೆ ಎಸಿಗೆ ಅವಕಾಶವಿಲ್ಲ

Published On :

ಕ.ಪ್ರ.ವಾರ್ತೆ     ದೊಡ್ಡಬಳ್ಳಾಪುರ     ಆ. 10
ಬೆಂಗಳೂರು ನಗರದಲ್ಲಿರುವ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿ ದೊಡ್ಡಬಳ್ಳಾಪುರ ನಗರಕ್ಕೆ ಸ್ಥಳಾಂತರ ಆಗದ ಹೊರತು ಆ.15ರ ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮಹತ್ವದ ನಿರ್ಣಯ ಕೈಗೊಂಡಿದೆ.
ಶನಿವಾರ ಸಂಜೆ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ನಡೆದ ವಿವಿಧ ಸಂಘ-ಸಂಸ್ಥೆಗಳ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಜತೆಗೆ ಅಂದು ಉಪವಿಭಾಗಾಧಿಕಾರಿಗಳ ಬದಲಿಗೆ ತಹಶೀಲ್ದಾರ್, ಸ್ಥಳೀಯ ಶಾಸಕರು ಅಥವಾ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಂದ ಧ್ವಜಾರೋಹಣ ಮಾಡಿಸಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ.
ಅಸಹಕಾರ ಚಳವಳಿ: ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕು ಮತ್ತು ಉಪವಿಭಾಗ ಕಚೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರವಾಗಬೇಕು. ಈ ಎರಡು ಪ್ರಮುಖ ಒತ್ತಾಯಗಳನ್ನು ಮುಂದಿಟ್ಟುಕೊಂಡು ಅಸಹಕಾರ ಚಳವಳಿ ಆರಂಭಿಸಲು ಸಭೆಯಲ್ಲಿ ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಆ.15ರಂದು ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಪೆರೇಡ್‌ನಲ್ಲಿ ಜನರ ಆಶೋತ್ತರಗಳನ್ನು ಮೀರಿಯೂ ಉಪವಿಭಾಗಾಧಿಕಾರಿಗಳು ಬಂದು ಧ್ವಜಾರೋಹಣ ಮಾಡುವುದೇ ಆದರೆ ಯಾವುದೇ ಚುನಾಯಿತ ಜನಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಸಂಘ-ಸಂಸ್ಥೆಗಳೊಂದಿಗೆ ಎಲ್ಲ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಆಗ್ರಹಿಸಲಾಯಿತು.
ಉಸ್ತುವಾರಿ ಮಂತ್ರಿಗಳೇ ಧ್ವಜಾರೋಹಣ ಮಾಡಲಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರ ಬೆಂಗಳೂರಿನಲ್ಲಿರುವುದರಿಂದ ಸ್ವಾತಂತ್ರ್ಯ ದಿನದಂದು ದೊಡ್ಡಬಳ್ಳಾಪುರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಧ್ವಜಾರೋಹಣ ಮಾಡಲಿ. ಇದಕ್ಕೆ ಎಲ್ಲರ ಸಹಮತ ಇದೆ. ಯಾವಾಗಲೂ ಜಿಲ್ಲೆಯ ಪ್ರದೇಶ ವ್ಯಾಪ್ತಿಯ ಹೊರಗೇ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸದೆ ಜಿಲ್ಲಾ ವ್ಯಾಪ್ತಿಯ ಪ್ರಮುಖ ಕೇಂದ್ರವಾಗಿರುವ ದೊಡ್ಡಬಳ್ಳಾಪುರಕ್ಕೆ ಬರಲಿ. ಎಲ್ಲ ಸಂಘಟನೆಗಳೂ ಅವರನ್ನು ಧ್ವಜಾರೋಹಣಕ್ಕೆ ಸ್ವಾಗತಿಸುತ್ತೇವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲಾ ಕೇಂದ್ರ ಹೋರಾಟ ತೀವ್ರ: ದೊಡ್ಡಬಳ್ಳಾಪುರ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಆಗ್ರಹ ತೀವ್ರವಾಗಿದ್ದು, ಹೋರಾಟ ಕೂಡ ತೀವ್ರ ಸ್ವರೂಪ ಪಡೆಯುತ್ತಿದೆ. ಮುಂದಿನ ಹಂತದಲ್ಲಿ ಜಿಲ್ಲಾ ಕೇಂದ್ರ ಹೋರಾಟ ಬೆಂಗಳೂರಿನ ಶಕ್ತಿ ಕೇಂದ್ರಗಳನ್ನು ಪ್ರಮುಖವಾಗಿ ಕೇಂದ್ರೀಕರಿಸಬೇಕು. ರಾಜ್ಯದ ಗಮನ ಸೆಳೆಯುವ ಹೋರಾಟಗಳು ಅಗತ್ಯವಾಗಿವೆ. ಜಿಲ್ಲೆಯಲ್ಲಿ ಎದ್ದಿರುವ ಹೋರಾಟದ ಕೂಗು ಜಿಲ್ಲಾ ವ್ಯಾಪ್ತಿಯನ್ನು ಬಿಟ್ಟು ಹೊರಗೆ ಹೋಗಿಲ್ಲ. ಹೀಗಾಗಿ ಹೋರಾಟದ ರೂಪರೇಷೆಗಳನ್ನು ವಿಸ್ತರಿಸಿಕೊಳ್ಳಬೇಕು. ಜಿಲ್ಲಾ ಕೇಂದ್ರವಾಗಲು ಇರುವ ಅಂಕಿ-ಅಂಶಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಸರ್ಕಾರಿ ಮಾಹಿತಿಯ ಅನುಸಾರವೇ ಅದನ್ನು ಕ್ರೋಢೀಕರಿಸಿ ಜನತೆಗೆ ಮುಟ್ಟಿಸುವ ಕೆಲಸ ಆಗಬೇಕು. ಹೋಬಳಿ ವ್ಯಾಪ್ತಿಯಲ್ಲಿ ಹೋರಾಟ ವಿಸ್ತರಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಸಲಹೆ ಕೇಳಿಬಂದವು.
ಸಭೆಯಲ್ಲಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರು, ಸಂಚಾಲಕರು, ವಿವಿಧ ಕನ್ನಡಪರ, ಪ್ರಗತಿಪರ, ರೈತ, ಮಹಿಳಾ, ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳು ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.