ಸ್ವಾತಂತ್ರ್ಯೋತ್ಸವಕ್ಕೆ ಬಂದೋಬಸ್ತ್
ಬೆಂಗಳೂರು: ಭಯೋತ್ಪಾದಕರ ಸಂಭಾವ್ಯ ದಾಳಿ ಸೇರಿದಂತೆ ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ನಗರ ಪೊಲೀಸರು ಸಿದ್ದವಾಗಿದ್ದು, ಸ್ವಾತಂತ್ರ್ಯ ದಿನಾಚರಣೆಗೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ಪಂಥ್ ತಿಳಿಸಿದ್ದಾರೆ. ಆ.15ರಂದು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಸಿದ್ಧತೆ, ಬಂದೋಬಸ್ತ್ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 3 ಜಂಟಿ ಪೊಲೀಸ್ ಆಯುಕ್ತರು, 9 ಉಪ ಪೊಲೀಸ್ ಆಯುಕ್ತರು ಸೇರಿ ಒಟ್ಟು 1 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು. ಇದರಲ್ಲಿ ಕೆಎಸ್ಆರ್ಪಿ ತುಕಡಿಗಳು, ಕ್ಷಿಪ್ರ ಕಾರ್ಯ ಪಡೆ ಸಿಬ್ಬಂದಿಯೂ ಸೇರಿದ್ದಾರೆ. ಪರೇಡ್ ಮೈದಾನ, ವೇದಿಕೆ ಸುತ್ತಮುತ್ತ 40 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಪ್ರತಿಯೊಬ್ಬರ ಚಲನವಲನಗಳನ್ನು ಗಮನಿಸಲಾಗುತ್ತದೆ. ಗೇಟ್ಗಳ ಬಳಿ ಲೋಹ ಪರಿಶೋಧಕ ಯಂತ್ರಗಳನ್ನು ಅಳವಡಿಸಲಾಗಿದೆ ಎಂದರು.
ಏನೇನು ತರುವಂತಿಲ್ಲ?: ಕಾರ್ಯಕ್ರಮಕ್ಕೆ ಬರುವವರು ಚಾಕು, ಬ್ಲೇಡ್ ಸೇರಿ ಮಾರಕ ಆಯುಧ ತರುವಂತಿಲ್ಲ. ಬೆಂಕಿ ಕಡ್ಡಿಗಳು, ಬಿಡಿ, ಸಿಗರೇಟ್, ಬ್ಯಾಗ್, ಹೆಲ್ಮೆಟ್, ಲ್ಯಾಪ್ಟಾಪ್ ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ಮೈದಾನದ ಒಳಗೆ ತೆಗೆದುಕೊಂಡ ಹೋಗಲು ಅವಕಾಶವಿಲ್ಲ. ಹೀಗಾಗಿ ಕಾರ್ಯಕ್ರಮವನ್ನು ವೀಕ್ಷಿಸಲು ಇಚ್ಚಿಸುವ ಸಾರ್ವಜನಿಕರು ಖಾಲಿ ಕೈಯಲ್ಲಿ ಬರುವುದು ಉತ್ತಮ. ಇನ್ನು ಪ್ರಮುಖ ಕಂಪನಿಗಳು, ಹೊಟೇಲ್ಗಳು, ದೇವಸ್ಥಾನ ಪ್ರಾರ್ಥನಾ ಕೇಂದ್ರಗಳು ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಕಮಲ್ಪಂಥ್ ಮಾಹಿತಿ ನೀಡಿದರು. ಇದೇ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಆ.15ರಂದು ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿಗಳು ವೇದಿಕೆಗೆ ಆಗಮಿಸುತ್ತಾರೆ. ರಕ್ಷಣಾ ಪಡೆಯ ಮೂವರು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿಗಳಿಗೆ ಪರಿಚಯಿಸಲಾಗುತ್ತದೆ. ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿಗಳು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಪೊಲೀಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ, ಸೇವಾದಳ, ಶಾಲಾ ಮಕ್ಕಳು, ಬ್ಯಾಂಡ್ ಸೆಟ್ ತಂಡ ಒಳಗೊಂಡ 56 ತುಕಡಿಗಳಲ್ಲಿ 2 ಸಾವಿರ ಮಂದಿ ಕವಾಯತಿನಲ್ಲಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಶಾಲೆಗಳು 2600 ಮಕ್ಕಳು ಭಾಗವಹಿಸಲಿದ್ದಾರೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು, ಜನ್ಮಭೂಮಿ, ಸ್ವಾತಂತ್ರ್ಯ ಸಂಗ್ರಾಮ, ವೀರ ನಮನ, ಪುಣ್ಯಭೂಮಿ ಭಾರತ ಗೀತೆಗಳಿಗೆ ನೃತ್ಯ ಮಾಡಲಿದ್ದಾರೆ. ಈ ಬಾರಿಯ ಆಕರ್ಷಣೆಯಾಗಿ ಬೆಳಗಾವಿ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನಿಂದ ಮಲ್ಲಕಂಬ ಪ್ರದರ್ಶನವೂ ಇರಲಿದೆ.
ವಿಪತ್ತು ನಿರ್ವಹಣೆ: ವಿಪತ್ತು ನಿರ್ವಹಣೆಗೆ ಸ್ಥಳದಲ್ಲೇ ಸ್ಪಂದಿಸಲು 20 ಅಂಬುಲೆನ್ಸ್ಗಳು, 50 ವೈದ್ಯರನ್ನೊಳಗೊಂಡ 150 ಸಿಬ್ಬಂದಿ ತಂಡ ನಿಯೋಜಿಸಲಾಗುತ್ತಿದೆ. ಅಲ್ಲದೇ ನಗರದ 28 ಆಸ್ಪತ್ರೆಗಳಲ್ಲಿ 120 ಹಾಸಿಗೆಗಳು, 150 ವೈದ್ಯರು ಹಾಗೂ 320 ಸಿಬ್ಬಂದಿಯನ್ನು ಮೀಸಲು ಇರಿಸಲಾಗಿದೆ. ಅಗ್ನಿ ಅನಾಹುತಗಳ ನಿಭಾಯಿಸಲು ಮೈದಾನದಲ್ಲಿ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಕೂಡಾ ಹಾಜರಿರಲಿದ್ದಾರೆ. ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಅತಿಗಣ್ಯ, ಗಣ್ಯ, ಇತರೆ ಆಹ್ವಾನಿತರಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ವಾಹನಗಳ ಪಾರ್ಕಿಂಗ್ಗೂ ಪ್ರತ್ಯೇಕ ಜಾಗ ನಿಗದಿ ಮಾಡಿದೆ.
ಯಾರಿಗೆ, ಎಲ್ಲಿ ಪ್ರವೇಶ
ಗೇಟ್ ನಂ. ಜಿ2: ಅತಿಗಣ್ಯರು(ವಿವಿಐಪಿ) ಮತ್ತು ಮಿಲಿಟರಿ ಅಧಿಕಾರಿಗಳು ಸ್ಟ್ಯಾಂಡ್ ಸಂಖ್ಯೆ 1.
ಗೇಟ್ ನಂ. ಜಿ1: ಗಣ್ಯರು (ವಿಐಪಿ) ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಟ್ಯಾಂಡ್ ಸಂಖ್ಯೆ 2 ಮತ್ತು 3
ಗೇಟ್ ನಂ. ಜಿ3: ಸ್ವಾತಂತ್ರ್ಯ ಹೋರಾಟಗಾರರು, ನಿವೃತ್ತ ಮಿಲಿಟರಿ ಅಧಿಕಾರಿಗಳು, ಬಿಎಸ್ಎಪ್ ಅಧಿಕಾರಿಗಳು ಮತ್ತು ಪತ್ರಕರ್ತರು. ಸ್ಟ್ಯಾಂಡ್ ಸಂಖ್ಯೆ 4, 5, 6, 7, 8.
ಗೇಟ್ ನಂ.ಜಿ4, ಜಿ5: ಸಾರ್ವಜನಿಕರು. ಸ್ಟ್ಯಾಂಡ್ ಸಂಖ್ಯೆ 9, 10.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

