ಕೊಟ್ಟ ಅಧಿಕಾರ ವೃಷಭಾವತಿಗೆ ಬಿಸಾಕಿದ ಎಚ್ಡಿಕೆ
ಕ.ಪ್ರ.ವಾರ್ತೆ ಬೆಂಗಳೂರು ಆ.14
'ನೀವು ಕೊಟ್ಟ ಅಧಿಕಾರವನ್ನು ವೃಷಭಾವತಿ ನದಿಗೆ ಬಿಸಾಕಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಕ್ಕ ಪಾಠ ಕಲಿಸಿ. ಸದಾ ನಿಮ್ಮ ಜತೆಯಿದ್ದು ಮನೆಯ ಮಕ್ಕಳಂತೆ ಕೆಲಸ ಮಾಡುವ ನಮಗೆ ಅವಕಾಶ ಕೊಡಿ'.
ಇದು ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮತದಾರರಿಗೆ ಮಾಡಿರುವ ಮನವಿ. ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.
'ದೇವೇಗೌಡರ ಕುಟುಂಬಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಎಲ್ಲವನ್ನೂ ಕೊಟ್ಟಿದ್ದಾರೆ. ನಿಮ್ಮ ಔದಾರ್ಯದಿಂದ ದೇವೇಗೌಡರು ಪ್ರಧಾನಿಯಾದರು, ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಅದಕ್ಕೆ ಪ್ರತಿಯಾಗಿ ಅವರು ಜಿಲ್ಲೆಗೆ ಮಾಡಿದ್ದೇನು? ಸಂಸತ್ತಿನಲ್ಲಿ ಕ್ಷೇತ್ರದ ಧ್ವನಿಯಾಗಿ ಎಂದು ನೀವು ನೀಡಿದ ಅಧಿಕಾರವನ್ನು ಅವರು ವೃಷಭಾವತಿ ನದಿಗೆ ಎಸೆದು ಅಪಮಾನ ಮಾಡಿದ್ದಾರೆ. ಅವರು ಬೇಡ ಎಂದು ತ್ಯಜಿಸಿದ ಅಧಿಕಾರವನ್ನು ನಮಗೆ ಕೊಡಿ. ನಿಮ್ಮ ಮನೆ ಮಗನಾಗಿ ದುಡಿಯುವ ಸೋದರ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಿ' ಎಂದು ಕೋರಿದರು.
ಮತದಾರರ ತೀರ್ಪಿಗೆ ಅಪಮಾನ ಮಾಡಿರುವ ಕುಮಾರಸ್ವಾಮಿ ಉಪ ಚುನಾವಣೆಯನ್ನು ತಂದಿಟ್ಟಿದ್ದಾರೆ. ನನ್ನ ಪತಿ ಹೇಳಿದ್ದಕ್ಕಲ್ಲ, ಮಾವನವರ ಮಾತಿಗೆ ಕಟ್ಟುಬಿದ್ದು ಚುನಾವಣೆಗೆ ನಿಂತಿದ್ದೇನೆ ಎಂದು ಸೋದರಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ದೇವೇಗೌಡರು ತಮ್ಮದೇ ಕುಟುಂಬದ ಹೆಣ್ಣುಮಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇವೇಗೌಡರ ದ್ವಿಮುಖ ರಾಜಕಾರಣ: ದೇವೇಗೌಡರು ಕಳೆದ ಐವತ್ತು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಸಿದ್ಧಾಂತ ಹಾಗೂ ಜಾತ್ಯತೀತ ಮೌಲ್ಯಗಳನ್ನು ಅವರ ಪುತ್ರ ಹಾಳುಗೆಡವಿದ್ದಾರೆ. ಬಿಜೆಪಿ ಜತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂದಿದ್ದ ದೇವೇಗೌಡರು ಈಗ್ಯಾಕೆ ಸುಮ್ಮನಾಗಿದ್ದಾರೆ. ಅವರು ಈ ರೀತಿ ದ್ವಿಮುಖ ರಾಜಕಾರಣ ನಡೆಸಿದರೆ ನಮ್ಮ ಹಳ್ಳಿಯ ಜನ ಯಾರ ಆದರ್ಶವನ್ನು ಪಾಲನೆ ಮಾಡಬೇಕು ಎಂದು ವ್ಯಂಗ್ಯವಾಡಿದರು.
ಕಳೆದ ಐದು ವರ್ಷದಿಂದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಪರಸ್ಪರ ಕೆಸರೆರಚಿಕೊಂಡಿದ್ದಾರೆ. ಉಭಯ ಪಕ್ಷದವರು ಸಂಗ್ರಹಿಸಿದ ಅಕ್ರಮ ಆಸ್ತಿ ವಿವರವನ್ನು ಬಯಲು ಮಾಡಿಕೊಂಡಿದ್ದಾರೆ. ಬಿಜೆಪಿಯ ದೆಹಲಿ ಮುಖಂಡರು ಬೆಂಗಳೂರಿಗೆ ಬಂದು ಗೌಡರ ಕುಟುಂಬದ ಅಕ್ರಮ ಆಸ್ತಿಯ ಪುಸ್ತಕ ಬಿಡುಗಡೆ ಮಾಡಿದರು. ಈಗ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಈಗ ಈ ಎರಡು ಪಕ್ಷಗಳ ನಡುವೆ ಕಲುಷಿತ ಮೈತ್ರಿ ಏರ್ಪಟ್ಟಿದೆ ಎಂದು ಆರೋಪಿಸಿದರು.
ಷರತ್ತು ಹಾಕಿಲ್ಲ: ನನ್ನ ಸೋದರನನ್ನು ಚುನಾವಣೆಗೆ ನಿಲ್ಲಿಸುವ ಸಂದರ್ಭದಲ್ಲಿ ಪಕ್ಷದ ಮುಖಂಡರಿಗೆ ಯಾವುದೇ ಷರತ್ತನ್ನು ವಿಧಿಸಿಲ್ಲ. ನನಗೆ ಹಲವು ವರ್ಷಗಳಿಂದ ಕಾಂಗ್ರೆಸ್ ಒಡನಾಟವಿದೆ. ಇಲ್ಲಿ ಷರತ್ತು ಹಾಕಿದರೆ ಪ್ರಯೋಜನವಿಲ್ಲ. ಪಕ್ಷ ನನಗೆ ಎಲ್ಲವನ್ನು ನೀಡಿದ್ದು ಅದು ನೀಡಿದ ಜವಾಬ್ದಾರಿಯನ್ನು ಬೇಷರತ್ತಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ನಾನು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಸತ್ಯ. ಅವರು ಬಿಜೆಪಿಯ ವಿರುದ್ಧ ಸಿಡಿದೆದ್ದು ಬೇರೆ ಪಕ್ಷ ಸ್ಥಾಪಿಸಿದ್ದಾರೆ. ಆದರೆ ಲೋಕಸಭೆಗೆ ಅಭ್ಯರ್ಥಿಯನ್ನು ಹಾಕಿಲ್ಲ. ಈ ಹಿನ್ನೆಲೆಯಲ್ಲಿ ನಾನು ಬೆಂಬಲ ಕೋರಿದ್ದೇನೆ. ಇದರಲ್ಲಿ ಯಾವುದೇ ತಪ್ಪೂ ಕಾಣುತ್ತಿಲ್ಲ. ಅದೇ ರೀತಿ ಸಮಾಜವಾದಿ ಪಕ್ಷ ಕೇಂದ್ರದಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದೆ. ಹೀಗಾಗಿ ಯೋಗೇಶ್ವರ ಅವರ ನೆರವು ಕೇಳಿದ್ದೇನೆ ಎಂದು ಹೇಳಿದರು.
ಯೋಗೇಶ್ವರ ಮೇಲೆ ಒತ್ತಡ ಹಾಕಿಲ್ಲ
ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಮುಂದಿಟ್ಟುಕೊಂಡು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರ ಮೇಲೆ ನಾನು ಯಾವುದೇ ಒತ್ತಡ ಹಾಕಿಲ್ಲ ಎಂದು ಶಿವಕುಮಾರ್ ಹೇಳಿದರು. ನಾನು ಇಂಥ ಒತ್ತಡ ತಂತ್ರವನ್ನು ಅನುಸರಿಸುವುದಿಲ್ಲ. ನನ್ನ ವಿರುದ್ಧವೂ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದರು. ಯೋಗೇಶ್ವರ ಜತೆ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದೇವೆ. ಅವರು ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ಯಾರಿಗೆ ಬೆಂಬಲ ನೀಡಿದರೆ ಚನ್ನಪಟ್ಟಣ ಕ್ಷೇತ್ರದ ಜನತೆಗೆ ಅನುಕೂಲವಾಗುತ್ತದೆ ಎಂಬುದು ಅವರಿಗೆ ಗೊತ್ತಿದೆ ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

