ಪೊಲೀಸರ ಮೇಲೆ ಕಲ್ಲು ತೂರಾಟ: ಗಾಳಿಲಿ ಗುಂಡು
ಕ.ಪ್ರ.ವಾರ್ತೆ , ಸೂಲಿಬೆಲೆ , ಆ.18
ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಲುನರಸಾಪುರದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಭಾನುವಾರ ನಡೆದಿದೆ.
ಗುಂಪು ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಹೊಸಕೋಟೆಯ ಆಸ್ಪತ್ರೆಯಲ್ಲಿ ದಾಖಲಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿನ್ನೆಲೆ: ನಂದಗುಡಿ ಪೊಲೀಸ್ ಠಾಣೆಯಿಂದ ಆರೇಳು ಕಿ.ಮೀ ದೂರದ ಬೈಲುನರಸಾಪುರದಲ್ಲಿ ಕೆಲ ವರ್ಷಗಳಿಂದ ಎರಡು ಗುಂಪುಗಳ ಮಧ್ಯೆ ರಾಜಕಾರಣ ಮತ್ತು ಇನ್ನಿತರೇ ಕಾರಣಗಳಿಂದ ದ್ವೇಷ ಬೆಳೆದಿತ್ತು. ಪರಿಣಾಮ ಆಗಾಗ್ಗೆ ಘರ್ಷಣೆಗಿಳಿದು ಬಡಿದಾಡುತ್ತಿದ್ದರು.
ಇಂಥ ಘರ್ಷಣೆಗಳು ಪದೇ ಪದೇ ಮರುಕಳಿಸಿ ಗ್ರಾಮದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್, ದಂಡಾಧಿಕಾರಿಗಳು ಶಾಂತಿ ಸಭೆ ನಡೆಸಿ ಘಟನೆಗೆ ಕಾರಣರೆನ್ನಲಾದವರಿಂದ ಮುಚ್ಚಿಳಿಕೆ ಬರೆಸಿಕೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.
ಮತ್ತೆ ಘರ್ಷಣೆ: ಕೆಲ ತಿಂಗಳಿಂದ ಎರಡೂ ಗುಂಪುಗಳೂ ತಣ್ಣಾಗಿದ್ದವು. ಆದರೆ, ಭಾನುವಾರ ಕ್ಷುಲಕ ಕಾರಣಕ್ಕೆ ಮತ್ತೆ ಮಾರಾಮಾರಿಗೆ ಇಳಿದಿದ್ದರು. ವಿಷಯ ತಿಳಿದು ಗ್ರಾಮಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಘರ್ಷಣೆಯಲ್ಲಿ ತೊಡಗಿದ್ದ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟಕ್ಕೆ ಮುಂದಾದರು ಎನ್ನಲಾಗಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಬೇಕಾಯಿತು.
ಘಟನೆ ಸ್ಥಳಕ್ಕೆ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್, ಡಿವೈಎಸ್ಪಿ ಕುಮಾರಸ್ವಾಮಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

