ಬೆಂಗಳೂರು ಗ್ರಾಮಾಂತರ

ನುಡಿದಂತೆ ನಡೆಯುವುದೇ ನೈತಿಕತೆ: ಜಿ.ಶಿವಣ್ಣ

Published On :

ಕ.ಪ್ರ.ವಾರ್ತೆ  ರಾಮನಗರ  ಡಿ.1
ಮಾನವನ ಒಳಿತಿಗಾಗಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಚಿಂತಿಸುವುದು ಹಾಗೂ ನುಡಿದಂತೆ ನಡೆಯುವುದನ್ನು ತನ್ನ ಬದುಕಿನುದ್ದಕ್ಕೂ ನಿಷ್ಠೆಯಿಂದ ಪರಿಪಾಲಿಸುವುದೇ ನೈತಿಕತೆ ಎಂದು ಉಪನ್ಯಾಸಕ ಜಿ.ಶಿವಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಪಾದರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ನೈತಿಕತೆಯ ಪಾತ್ರ ವಿಷಯವಾಗಿ ಮಾತನಾಡಿದ ಅವರು, ಕೇವಲ ಮಾತಿನಲ್ಲಿ ನೈತಿಕತೆ ಮೆರೆಯುತ್ತಾ ಕೃತಿಯಲ್ಲಿ ಅನೈತಿಕವಾಗಿ ವರ್ತಿಸುವುದು ಅನಾಗರಿಕರ ಲಕ್ಷಣ ಎಂದರು.
ನೈತಿಕತೆ ರೂಢಿಸಿಕೊಳ್ಳಿ: ನೈತಿಕತೆ ಎಂಬುದು ಚಿಂತನೆ ಮತ್ತು ಧ್ಯಾನದಿಂದ ರೂಪುಗೊಳ್ಳುವ ಪರಿಪಾಕ. ಕಂಡು, ಕೇಳಿ, ಚಿಂತಿಸಿ, ಪರಾಮರ್ಶಿಸಿ ಪರಿಶುದ್ಧವಾಗಿ ನಡೆದುಕೊಳ್ಳುವ ಪ್ರಕ್ರಿಯೆಯಾಗಿದೆ. ನೈತಿಕತೆ ಎಂದರೆ ಸರಿ ತಪ್ಪುಗಳನ್ನು ವಿಂಗಡಿಸುವ ವಿವೇಕ. ಶುದ್ಧ ಆಲೋಚನೆಗಳ ಉಗಮ ಕ್ರಿಯೆ. ಇತರರಿಗೆ ಕೇಡಾಗದ ಸಾತ್ವಿಕ ನಡತೆ. ಇಂಥ ನಡತೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ನೀತಿಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ತಿಳಿಸಿದರು.
ಜೀವನಪ್ರೀತಿ ಬೆಳೆಸಿ: ಮಕ್ಕಳಲ್ಲಿ ಮನೋ ಸಾಮರ್ಥ್ಯ ವಿಕಾಸಗೊಳ್ಳಲು ನೈತಿಕ ನಡಾವಳಿಗಳನ್ನು ಪ್ರೆರೇಪಿಸಬೇಕು. ದೈನಂದಿನ ಜೀವನದಲ್ಲಿ ನೀತಿ ನಿಯಮಗಳನ್ನು ಅನುಸರಿಸುವ ವಾತಾವರಣವನ್ನು ನಿರ್ಮಿಸಬೇಕು. ಮಕ್ಕಳ ಮನಸ್ಸಿನಲ್ಲಿ ಭೀತಿಯನ್ನು ಬಿತ್ತದೆ, ಜೀವನ ಪ್ರೀತಿ ಬೆಳೆಸಬೇಕು. ನಿರ್ಭೀತಿಯಿಂದ ಮಾತನಾಡಲು, ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಬೇಕು. ತನ್ನ ಕೆಲಸವನ್ನು ತಾನು ಮಾಡಿಕೊಳ್ಳುವ ಅಭ್ಯಾಸಗಳನ್ನು ಪ್ರೇರೇಪಿಸಬೇಕು. ಆಗ ಇತರರ ಅವಲಂಬನೆ ಕ್ಷೀಣಿಸಿ ಸ್ವಾವಲಂಬಿತನ ಮೈಗೂಡುತ್ತದೆ ಎಂದರು.
ಕೇವಲ ಇಂಗ್ಲೀಷ್ ಭಾಷೆಯ ಕಲಿಕೆಯೇ ಶಿಕ್ಷಣವಲ್ಲ. ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಕಲೆಯನ್ನು ತಿಳಿಸುವುದೇ ಶಿಕ್ಷಣ. ಕೆಟ್ಟದ್ದನ್ನು ಬಿಟ್ಟು, ಆರೋಗ್ಯಕರ ಆಲೋಚನೆಗಳತ್ತ ಪ್ರೇರೇಪಿಸುವುದು. ಜೀವನ ಕೌಶಲಗಳನ್ನು ವೃದ್ಧಿಸುವುದು, ಒತ್ತಡಗಳನ್ನು ಹತೋಟಿಯಲ್ಲಿಡುವುದಾಗಿದೆ ಎಂದು ಹೇಳಿದರು.
ಸ್ಪರ್ಧೆ ಎಂದರೆ ಮತ್ತೊಬ್ಬರನ್ನು ಸೋಲಿಸಲು ಹವಣಿಸುವುದಲ್ಲ. ಜಾಣ್ಮೆಯಿಂದ ಗೆಲವು ಸಾಧಿಸುವುದು.
ಸೋತವನನ್ನು ಸಂತೈಸುವ, ಸಮಾಧಾನ ಚಿತ್ತವನ್ನು ಬೆಳೆಸಿಕೊಳ್ಳುವ ಕಲೆಯನ್ನು ಕಲಿಸಬೇಕು. ಮಕ್ಕಳಲ್ಲಿ ನೈತಿಕತೆ ಮೂಡಿಸುವ ಮುನ್ನ ಶಿಕ್ಷಕರು ಮತ್ತು ಪೋಷಕರು ಮೊದಲು ತಮ್ಮಲ್ಲಿ ನೈತಿಕತೆ ರೂಢಿಸಿಕೊಳ್ಳಬೇಕು ಎಂದು ಶಿವಣ್ಣ ತಿಳಿಸಿದರು.
ಶ್ಲಾಘನೀಯ: ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಿದವರನ್ನು ಸ್ಮರಿಸಿಕೊಳ್ಳುವ ಮೂಲಕ ಯುವ ಜನಾಂಗಕ್ಕೆ ಅರಿವು ಮೂಡಿಸುವ ನಿಟ್ಟನಲ್ಲಿ ಕಸಾಪ ರೂಪಿಸುವ ದತ್ತಿ ಕಾರ್ಯಕ್ರಮಗಳು ಶ್ಲಾಘನೀಯವಾದವು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಜಿಲ್ಲಾಧ್ಯಕ್ಷ ಬಿ. ಶ್ರೀಧರ್ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟನಲ್ಲಿ ಶಿಕ್ಷರರು ಹಾಗೂ ಪೋಷಕರು ಧನಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಇದರಿಂದ ಕನ್ನಡ ಶಾಲೆಗಳು ಯಶಸ್ಸಿನತ್ತ ಸಾಗುತ್ತವೆ ಎಂದರು.
ವಿಷಾದನೀಯ: ಮಾನವ ಅತಿ ಬೇಗ ಶ್ರೀಮಂತಿಕೆ ಗಳಿಸಬೇಕು ಎಂಬ ದುರಾಸೆಯಿಂದ ಅನೈತಿಕ ಮಾರ್ಗ ಹಿಡಿದಿರುವುದು ವಿಷಾದದ ಸಂಗತಿಯಾಗಿದೆ. ಅನೈತಿಕ ಮಾರ್ಗದಿಂದ ಗಳಿಸಿದ ಶ್ರೀಮಂತಿಕೆ ಹೆಚ್ಚು ದಿನ ಉಳಿಯುವುದಿಲ್ಲ. ಪ್ರಾಮಾಣಿಕತೆ, ಸತ್ಯ, ಧರ್ಮಗಳನ್ನು ರೂಢಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕ ಆರ್.ಕೆ. ಬೈರಲಿಂಗಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
 ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿ ಡಾ.ಎಸ್.ಎಲ್.ತಿಮ್ಮಯ್ಯ, ಕಸಾಪ ಕಾರ್ಯದರ್ಶಿ ಸಿ.ರಾಜಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಗೌಡ, ಗ್ರಾ.ಪಂ. ಸದಸ್ಯರಾದ ರಾಮು, ಮಂಗಳಮ್ಮ ಮತ್ತಿತರರು ಭಾಗವಹಿಸಿದ್ದರು. ಶಿಕ್ಷಕ ಎಂ.ಪ್ರಕಾಶ್ ಸ್ವಾಗತಿಸಿದರು.  ನಾಗರತ್ನಮ್ಮ ವಂದಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.