ನಾವ್ ಹೆಂಗ್ ಸ್ವಾಮಿ ಈ ಊರಲ್ಲಿ ಬದುಕೋದು?
ಎಸ್. ನಾಗಭೂಷಣ
ತುರುವೇಕೆರೆ: ನಾವ್ ಹೆಂಗ್ ಸ್ವಾಮಿ ಈ ಊರಲ್ಲಿ ಜೀವನ ಮಾಡೋದು. ಊರ ತುಂಬಾ ನೀರಿನ ಹೊಳೆ, ಮನೆಯೊಳಗೆ ನೀರಿನ ಪಸೆ. ಕೇವಲ ಅರ್ಧ ಅಡಿ ಗುಂಡಿ ತೆಗೆದರೂ ಉಕ್ಕಿ ಬರುವ ಜಲಧಾರೆ. ನಮ್ ಕಷ್ಟ ಕೇಳೋರೇ ಇಲ್ಲವಾಗಿದ್ದಾರೆ ಸ್ವಾಮಿ ಎಂದು ತಮ್ಮ ಗ್ರಾಮದ ಜನರು ಅನುಭವಿಸುತ್ತಿರುವ ದುಃಸ್ಥಿತಿಯನ್ನು ಹೇಳುತ್ತಾರೆ ಮುನೇಶ್.
ಇದು ತಾಲೂಕಿನ ಗಡಿ ಭಾಗವಾದ ವೀರಸಾಗರದ ಹತ್ತಾರು ಕುಟುಂಬಗಳ ನೋವಿನ ಕಥೆ. ತಾಲೂಕಿನ ಜನರಿಗೆ ಹೇಮಾವತಿ ನದಿ ನೀರು ವರದಾನವಾಗಿದ್ದರೆ, ಈ ಗ್ರಾಮದ ಜನರಿಗೆ ಮಾತ್ರ ಶಾಪವಾಗಿ ಪರಿಣಮಿಸಿದೆ. ಕಾರಣ ಈ ಗ್ರಾಮ ಹೇಮಾವತಿ ನಾಲಾ ಚಾನಲ್ನ ಕೆಳ ಭಾಗದಲ್ಲಿದೆ. ಹೇಮಾವತಿ ನದಿ ನೀರನ್ನು ಚಾನಲ್ ಮೂಲಕ ಕೆರೆಗೆ ಬಿಟ್ಟರೆ ಇವರ ಪಾಡು ಹೇಳತೀರದು. ವರ್ಷದಲ್ಲಿ ಕನಿಷ್ಠ 8 ತಿಂಗಳ ಕಾಲ ಪಡಬಾರದ ಯಾತನೆ ಪಡುತ್ತಾರೆ.
ಈ ಗ್ರಾಮದಲ್ಲಿ ಬಹುತೇಕ ಹಿಂದುಳಿದ ವರ್ಗದ ಜನರೇ ಇದ್ದಾರೆ. 22 ಮನೆಗಳು ಇವೆ. ಎಲ್ಲರ ಹೊಟ್ಟೆಯೂ ಕೂಲಿಯಿಂದಲೇ ತುಂಬ ಬೇಕು. ಜಮೀನಿನ ಮಾಲೀಕ ಎನಿಸಿಕೊಳ್ಳುವವರು ವಿರಳ. ಇದ್ದರೂ ಸಹ ಕೇವಲ ಅರ್ಧ ಎಕರೆ, ಹತ್ತು ಗುಂಟೆ, ಹದಿನೈದು ಗುಂಟೆ. ಸದ್ಯ ಇವರಿಗೆ ಹೇಮಾವತಿ ನೀರಿನಿಂದ ಆತಂಕವೇ ಇದೆ. ಬಹುಪಾಲು ಮನೆಗಳು ಇಂದೋ ನಾಳೆಯೋ ಉದುರುವ ಹಂತದಲ್ಲಿವೆ. ಯಾವ ಮನೆಯಲ್ಲೂ ಸಿಮೆಂಟ್ ನೆಲ ಎಂಬುದು ಇಲ್ಲ. ಎಲ್ಲವೂ ಸಗಣಿ ನೆಲವೇ. ಮನೆಯೊಳಗೇ ಅಡಿಗೆ ಮಾಡಲು, ಮಲಗಲು ಸಾಧ್ಯವಿಲ್ಲದ ಸ್ಥಿತಿ. ಮನೆಯ ತುಂಬಾ ನೀರು ಜಿನುಗುತ್ತದೆ. ಬಟ್ಟೆ, ಬರೆ, ಎಲ್ಲಾ ಬೂಸರು ಹಿಡಿದಿದೆ. ಮರಮುಟ್ಟುಗಳೆಲ್ಲಾ ಗೆದ್ದಲಿನ ಪಾಲಾಗಿದೆ. ಪ್ರತಿ ಮನೆಯಲ್ಲೂ ರೋಗಿಗಳು. ಐದಾರು ಮಂದಿ ಪಾರ್ಶುವಾಯು ಪೀಡಿತರು ಇದ್ದಾರೆ. ಶೀತ, ನೆಗಡಿ, ಆಸ್ತಮ ಬಾಧೆಯಿಂದ ಇಡೀ ದೇಹವನ್ನೇ ತಿರುಗಿಸುವ ಸ್ಥಿತಿ. ದಾರಿ ಯುದ್ದಕ್ಕೂ ನೀರಿನ ಹೊಳೆ. ಮನೆ ಮುಂದೆಲ್ಲಾ ನಿಂತಿರುವ ನೀರಿನ ಫಲವಾಗಿ ಸೊಳ್ಳೆಗಳ ಕಾಟ. ಯಾವುದೇ ಸಾರಿಗೆಯ ವ್ಯವಸ್ಥೆ ಇಲ್ಲ. ಸುಮಾರು 5 ಕಿಮೀ ದೂರದಲ್ಲಿರುವ ಸಂಪಿಗೆಗೆ ನಡೆದುಕೊಂಡೇ ಹೋಗಬೇಕು. ಯಾವುದೇ ಮೂಲಭೂತ ಸೌಲಭ್ಯಗಳು ಈ ಗ್ರಾಮಕ್ಕೆ ಇಲ್ಲ. ಚರಂಡಿ ಇಲ್ಲ. ಶೌಚಾಲಯವಿಲ್ಲ. ಎಲ್ಲರಿಗೂ ಬಯಲೇ ಶೌಚಾಲಯ.
ವಿದ್ಯಾವಂತರ ಸಂಖ್ಯೆ ಕಡಿಮೆ: ಈ ಗ್ರಾಮದಲ್ಲಿ ವಿದ್ಯಾವಂತರ ಸಂಖ್ಯೆಯೇ ಕಡಿಮೆ. ಇಲ್ಲಿ ನೀರಿನ ಹಾವಳಿ ಹೇಗಿದೆ ಎಂದರೆ ಶವ ಸಂಸ್ಕಾರವನ್ನೂ ಮಾಡದ ಸ್ಥಿತಿ ಇದೆ. ಇತ್ತೀಚೆಗೆ ನಿಧನರಾಗಿದ್ದ ಯುವತಿಯ ಶವ ಹೂಳಲು ಜನರು ಪಟ್ಟ ಪಾಡು ಯಾವ ಶತೃಗಳಿಗೂ ಬೇಡವಂತೆ. ಶೀತದ ಬಾಧೆಯಿಂದ ಮೈತ್ರಮ್ಮಳ 10 ಮೇಕೆ ಮರಿಗಳು ಸತ್ತು ಹೋಗಿವೆ. ನಮ್ ಊರ್ಗೆ ಯಾವ ನಂಟರೂ ಬರಲ್ಲ. ಯಾರೂ ಹೆಣ್ಣೂ ಕೊಡಲ್ಲ ಸ್ವಾಮಿ. ಕುಡಿಯವ ನೀರಿಗಾಗಿ ಬೋರ್ವೆಲ್ ಇದೆ. ಅದರಲ್ಲಿ ಕೊಳಚೆ ನೀರೇ ತುಂಬಿ ಹೋಗಿದೆ. ಇದನ್ನೇ ವಿಧಿ ಇಲ್ಲದೇ ಕುಡಿಯಬೇಕಿದೆ ಎಂದು ಅವಲತ್ತುಕೊಳ್ಳುತ್ತಾರೆ ಲಕ್ಷ್ಮೀಕಾಂತ.
ಸರ್ವೇ ಕಾರ್ಯ: ವರ್ಷದಲ್ಲಿ ಕನಿಷ್ಠ 8 ತಿಂಗಳು ಶೀತಪೀಡಿತವಾಗುವ ಈ ಗ್ರಾಮ ಕುರಿತು ಹೇಮಾವತಿ ನಾಲಾ ತನಿಖಾ ವಿಭಾಗವೂ ಸಹ ಸರ್ವೇ ಕಾರ್ಯ ನಡೆಸಿ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಮಾತ್ರ ಪರಿಹಾರ ಸಾಧ್ಯ ಎಂದು ಸರ್ಕಾರಕ್ಕೆ ವರದಿ ಮಾಡಿ ಸುಮಾರು ಎರಡು ಮೂರು ವರ್ಷಗಳೇ ಕಳೆದಿದೆ.
ಈ ವೀರಸಾಗರ ಗ್ರಾಮದ ಸುತ್ತಲೂ ನೀರು ಆವರಿಸಿದೆ. ಒಂದರ್ಥದಲ್ಲಿ ಇದು ದ್ವೀಪದಂತಿದೆ. ನಮ್ಮ ಕಷ್ಟ ಕಂಡೂ ಕಾಣದಂತಿರುವ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಒಂದು ದಿನ ನಮ್ಮೂರಿನಲ್ಲಿ ಕೂಡಿ ಹಾಕಿಕೊಂಡರೇ ಮಾತ್ರ ನಮ್ ಕಷ್ಟ ಇವರ ಕಣ್ಣಿಗೆ ಬೀಳುವುದೇನೋ ಎನ್ನುತ್ತಾರೆ ವಿಜಯ ಲಕ್ಷ್ಮೀ.
ಸ್ಥಳಾಂತರ ಮಾಡಲು ಸರ್ಕಾರಿ ಜಮೀನಿದೆ: ಗ್ರಾಮದ ಅನತಿ ದೂರದಲ್ಲೇ ಇರುವ ರೇಲ್ವೆ ಗೇಟ್ ಬಳಿ ಸುಮಾರು 4.16 ಎಕರೆ ಸರ್ಕಾರಿ ಜಮೀನಿದೆ. ಆ ಸ್ಥಳಕ್ಕೆ ಗ್ರಾಮವನ್ನು ಸ್ಥಳಾಂತರ ಮಾಡಬಹುದು ಎನ್ನುವುದು ಮುನೇಶ್ರ ಸಲಹೆ. ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿಯಾಗಿದೆ. ಆದರೂ ಯಾವುದೇ ಪರಿಹಾರ ಕಂಡು ಬಂದಿಲ್ಲ. ಸದ್ಯ ನೊಂದಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕು. ನೂತನ ಮನೆ ಕಟ್ಟಿಕೊಡಲು ಸರ್ಕಾರ ಮುಂದಾಗಬೇಕು. ಈ ಬಾರಿಯ ಮನವಿಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಹೇಮಾವತಿ ನಾಲಾ ಕಚೇರಿ ಮುಂದೆ ಹಾಗೂ ಶಾಸಕರ ಮನೆ ಮುಂದೆ ಕುಟುಂಬ ಸಮೇತ ಪ್ರತಿಭಟನೆ ಮಾಡುವುದೊಂದೇ ಬಾಕಿ ಎನ್ನುತ್ತಾರೆ ಮುನೇಶ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

