ಕಬ್ಬು ಮಾಲಿಕರೇ ಕರ ಪಾವತಿಸಿ: ಆದೂರು ಪ್ರಕಾಶ್
ಆನೇಕಲ್ಲು: ಕಾರ್ಖಾನೆಗಳ ವಶ್ಲೀಕರು ಕಾರ್ಮಿಕರ ಬೆವರನ್ನು ಮಾತ್ರ ಹಿಂಡುತ್ತಾರೆ ಎಂಬ ಭ್ರಮೆಯಿತ್ತು. ಸರ್ಕಾರದ ಪಾಲಿಗೂ ಇವರು ಬಾಕಿದಾರರಾಗಿ ಬೆಳೆಯುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಪಿವಿಸಿ(ಎಂ) ರಾಜ್ಯ ಕಾಯಂದರ್ಶಿ ಆದೂರು ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳ ಪಾಲಿಗೆ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸುವ ಕಾನೂನು ತಜ್ಞರು ಹಾಗೂ ಇಲಾಖೆಯವರು ಆಯ್ದ ಕೈಗಾರಿಕಾ ಮಾಲಿಕರ ಪಾಲಿಗೆ ಮೃದು ಧೋರಣೆ ತಳೆಯುವುದು ಸಮಂಜಸವಲ್ಲ. ಈ ಕೂಡಲೇ ಲೋಕಾಯುಕ್ತ ದಾಳಿ ಮಾದರಿಯಲ್ಲಿ ಕಬ್ಬು ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಬಾಕಿ ಇರುವ ಮೊತ್ತವನ್ನು ಸರ್ಕಾರದ ಬೊಕ್ಕಸಕ್ಕೆ ಪಡೆಯಬೇಕು. ತೆರಿಗೆ ರೂಪದ ಹಣವನ್ನು ರೈತರ ಹಿತ ಚಿಂತನೆ ಹಾಗೂ ಕಲ್ಯಾಣಕ್ಕಾಗಿ ಮರುಬಳಕೆ ಮಾಡುವ ಬಗ್ಗೆ ಸದನದಲ್ಲಿ ವಿಧೇಯಕ ಮಂಡನೆಯಾಗಬೇಕಿದೆ ಎಂದರು. ಬಹುತೇಕ ಸಕ್ಕರೆ ಕಾರ್ಖಾನೆ ಮಾಲಿಕರು ರಾಜಕಾರಣಿಗಳಾಗಿದ್ದು ಪ್ರಮಾಣ ವಚನ ಸ್ವೀಕರಿಸುವಾಗ ಅವರ ಧ್ಯೇಯ ಉದ್ದೇಶ ಏನಿತ್ತೆಂಬುತರ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಎಚ್ಚರಿಸಿದ ಅವರು ಡಿಸೆಂಬರ್ ಅಂತ್ಯದಲ್ಲಿ ಕಬ್ಬು ಕಾರ್ಖಾನೆ ಮಾಲೀಕರು ಬಾಕಿ ತೆರಿಗೆಯನ್ನು ಪಾವತಿಸದಿದ್ದಲ್ಲಿ ಪಿವಿಸಿ (ಎಂ) ಕಾರ್ಯಕರ್ತರು ಅಂತಹ ಮಾಲಿಕರ ಮನೆ, ಕಚೇರಿ ಹಾಗೂ ಕಾರ್ಖಾನೆ ಮುಂದೆ ರಾಜ್ಯಾದ್ಯಂತ ಧರಣಿ ನಡೆಸಿ ತಮಟೆ ಚಳವಳಿ ಮಾಡಲಿದ್ದಾರೆಂದು ಎಚ್ಚರಿಸಿದರು.
ಸಮಾಜಕ್ಕೆ ಮಾದರಿಯಾಗಿರಬೇಕಾದ ರಾಜಕಾರಣಿಗಳು ಹಾಗೂ ಮಠಾಧಿಪತಿಗಳು ಇತ್ತೀಚೆಗೆ ದಿನ ನಿತ್ಯದ ಚರ್ಚೆಗೆ ಆಹಾರ ವಾಗುತ್ತಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಇವರ ವರ್ತನೆಯಿಂದ ಅಧಿಕಾರಿಗಳೂ ಅಡ್ಡ ದಾರಿ ಹಿಡಿಯುತ್ತಾರೆ. ಇವರನ್ನು ಸರಿದಾರಿಗೆ ತರಲು ಸಂಘಟನೆಗಳು ಹಾಗೂ ಚಳವಳಿಕಾರರು ನಿರಂತರ ಹೋರಾಟ ಮಾಡಬೇಕೆಂದು ಕೋರಿದ್ದಾರೆ.
ಬನ್ನೇರುಘಟ್ಟ: ಕರಡಿ ಸಾವು
ಆನೇಕಲ್ಲು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಸಫಾರಿಯಲ್ಲಿನ ಏಂಜೆಲೋ(17) ಎಂಬ ಕರಡಿ ಮೃತ ಪಟ್ಟಿದೆ ಎಂದು ಉದ್ಯಾನ ಅಡಳಿತಾಧಿಕಾರಿ ರಂಗೇಗೌಡ ತಿಳಿಸಿದ್ದಾರೆ. ಎಸ್ಒಎಸ್ ಸಂಸ್ಥೆಯ ಆಶ್ರಯದಲ್ಲಿ ಕರಡಿ ಪುನರ್ವಸತಿ ಕೇಂದ್ರ ನಡೆಯುತ್ತಿದ್ದು ದೇಶದ ವಿವಿಧ ಭಾಗಗಳಿಂದ ರಕ್ಷಿಸಿ ತಂದ ಹಲವಾರು ಕರಡಿಗಳು ಇಲ್ಲಿ ಆಶ್ರಯ ಪಡೆದಿವೆ. ಏಂಜೆಲೋನನ್ನು 2011ರಲ್ಲಿ ಚಿತ್ರದುರ್ಗದ ಕಲಂದರ್ಗಳಿಂದ ವಶಪಡಿಸಿಕೊಳ್ಳಲಾಗಿತ್ತು. ಕರಡಿಯು ಟಿಬಿ ಸಂಬಂಧ ಶ್ವಾಸಕೋಶದ ಕಾಯಿಲೆಯಿಂದ ನರಳುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ.
ದೇವಾಲಯದ ಬಾಗಿಲು ಒಡೆದು ಆಭರಣ ಕಳವು
ಚನ್ನಪಟ್ಟಣ: ದೇವಾಲಯದ ಬಾಗಿಲು ಒಡೆದು ಆಭರಣ ಕಳವು ಮಾಡಿರುವ ಘಟನೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಸೋಮುವಾರ ರಾತ್ರಿ ನಡೆದಿದೆ. ಗ್ರಾಮದ ಹುಚ್ಚಮ್ಮ ತಾಯಿ ದೇವಾಲಯಕ್ಕೆ ಕನ್ನಹಾಕಿರುವ ಕಳ್ಳರು ದೇವಿಯ ಬೆಳ್ಳಿ ಕಿರೀಟ, ಎರಡು ತಾಳಿ, ಕಾಸಿನ ಸರ, 6 ಗಂಟೆಗಳ ಜತೆಗೆ ಹುಂಡಿಯನ್ನು ಕಳ್ಳತನ ಮಾಡಿದ್ದಾರೆ. ಹುಂಡಿಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮೊತ್ತ ಇತ್ತೆಂದು ಗ್ರಾಮಸ್ಥರು ಅಂದಾಜಿಸಿದ್ದು, ದೇವಾಲಯದ ಚಿನ್ನ ಬೆಳ್ಳಿ ಮತ್ತು ಹಿತ್ತಾಳೆ ಸಾಮಗ್ರಿಗಳು 2 ಲಕ್ಷ ರು. ಗಳಷ್ಟಾಗಬಹುದೆಂದು ಅಂದಾಜಿಸಲಾಗಿದೆ. ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

