ನಿರ್ದಿಷ್ಟ ಅವಧಿಯಲ್ಲಿ ರಾಸು ಸತ್ತರೆ ಪರಿಹಾರ!
ರಾಮನಗರ: ಸರ್ಕಾರ ನೀಡುವ ಪರಿಹಾರ ಪಡೆಯಲು ರಾಸುಗಳು ನಿರ್ದಿಷ್ಟ ಅವಧಿಯಲ್ಲಷ್ಟೇ ಮೃತಪಟ್ಟಿರಬೇಕು!
ಹೀಗೆ ಕಟ್ ಆಫ್ ಡೇಟ್ ನಿಗದಿಪಡಿಸಿರುವ ಸರ್ಕಾರದ ಯಡವಟ್ಟಿನಿಂದ ರಾಸುಗಳನ್ನು ಕಳೆದುಕೊಂಡ ಅನೇಕ ರೈತರು ಕಾಲುಬಾಯಿ ಜ್ವರದಿಂದ ಮೃತಪಟ್ಟ ಹಸುಗಳಿಗೆ ನೀಡುವ ಪರಿಹಾರ ಪಡೆಯುವಲ್ಲಿ ವಿಫಲರಾಗಿದ್ದಾರೆ. ಪರಿಹಾರ ನೀಡುವುದಾಗಿ ಸರ್ಕಾರ ಅ.11ರಂದು ತೀರ್ಮಾನಿಸಿ ಹೊರಡಿಸಿದ ಆದೇಶಕ್ಕೆ ಇದುವರೆಗೆ ಅರ್ಧ ಡಜನ್ಗೂ ಹೆಚ್ಚು ತಿದ್ದುಪಡಿ ಹಾಗೂ ಪೂರಕ ಆದೇಶಗಳನ್ನೂ ನೀಡಿದೆ. ಈ ಪೈಕಿ ಪರಿಹಾರಕ್ಕೆ 2013ರ ಸೆ.1 ರಿಂದ ಅ.31ರವರೆಗೆ ಮೃತಪಟ್ಟ ರಾಸುಗಳಷ್ಟೇ ಅರ್ಹವೆನ್ನುವ ಗೊಂದಲಕಾರಿ ಆದೇಶವೂ ಒಂದು.
ರಾಮನಗರದಲ್ಲೇ ಪ್ರಥಮ: ರಾಜ್ಯದಲ್ಲೇ ಮೊದಲಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು ರಾಮನಗರ ಜಿಲ್ಲೆಯಲ್ಲಿ. ಜುಲೈ ಅಂತ್ಯದಲ್ಲಿಯೇ ಇಲ್ಲಿಗೆ ರೋಗ ಕಾಲಿಟ್ಟಿತ್ತು. ರೋಗ ಯಾವುದೆಂದು ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡುವ ಮೊದಲೇ ನೂರಾರು ರಾಸುಗಳು ಮೃತಪಟ್ಟಿದ್ದವು.
ಜಿಲ್ಲಾ ಕೇಂದ್ರ ರಾಮನಗರದ ನಗರಸಭೆ ವ್ಯಾಪ್ತಿಗೊಳಪಟ್ಟ ಕೊತ್ತೀಪುರ ಬಡಾವಣೆಯಲ್ಲಿ ಜುಲೈ-ಆಗಸ್ಟ್ ನಡುವೆ 35ಕ್ಕೂ ಹೆಚ್ಚು ರಾಸುಗಳು ಮೃತಪಟ್ಟಿವೆ. ಇದೇ ಅವಧಿಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿಯೂ ಅಂದಾಜು 300 ರಾಸುಗಳು ಸತ್ತಿವೆ. ಅಲ್ಲದೇ, ಸರ್ಕಾರ ನಿಗದಿಪಡಿಸಿರುವ ಅವಧಿಯ ನಂತರ ಅಂದರೆ ನ.1ರಿಂದ ಈಚೆಗೆ ರಾಮನಗರ, ಮಂಡ್ಯ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಲ್ಲಿಯೂ 700ಕ್ಕೂ ಹೆಚ್ಚು ರಾಸುಗಳ ಸಾವು ಸಂಭವಿಸಿದೆ ಎನ್ನುತ್ತಾರೆ ಪಶುವೈದ್ಯರೊಬ್ಬರು.
ಸರ್ಕಾರದ ಹಗ್ಗ ಜಗ್ಗಾಟ: ಕುರಿ ಮೃತಪಟ್ಟರೆ 3 ಸಾವಿರ ಪರಿಹಾರ ನೀಡಲು ಅವಧಿ ನಿಗದಿಗೊಳಿಸದ ಸರ್ಕಾರ ರಾಸುಗಳ ವಿಷಯದಲ್ಲಿ ನಿರ್ದಿಷ್ಟ ಅವಧಿಯನ್ನು ನಿಗದಿಗೊಳಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರ ಪ್ರತಿ ರಾಸುವಿಗೆ ನೀಡುವ ಗರಿಷ್ಠ ಪರಿಹಾರದ ಮೊತ್ತ 316400 ಮಾತ್ರ. ಆದರೆ, ಘೋಷಿಸಿದ್ದು 25 ಸಾವಿರ. ಅದನ್ನು ಸರಿದೂಗಿಸಲು ಸರ್ಕಾರವು ಕೆಎಂಎಫ್ ಪರಿಹಾರ ನಿಧಿಯ ಬೊಕ್ಕಸಕ್ಕೆ ಕೈ ಹಾಕಿದೆ.
ಕೆಎಂಎಫ್ನಲ್ಲೂ ಗೊಂದಲ: ಕೆಎಂಎಫ್ ತನ್ನ ಪಾಲಿನ ಪರಿಹಾರ ಮೊತ್ತವನ್ನು ಸರ್ಕಾರದ ಖಾತೆಗೆ ಜಮಾ ಮಾಡಿದೆ. ಸರ್ಕಾರ ನಿಗದಿಪಡಿಸಿದ ಅವಧಿಯ ಹೊರತಾಗಿ ಮರಣಹೊಂದಿದ ರಾಸುಗಳಿಗೆ ಪರಿಹಾರ ನೀಡುವ ಬಗ್ಗೆ ಕೆಎಂಎಫ್ ಚಿಂತಿಸಿಯೇ ಇಲ್ಲ. ಕೆಎಂಎಫ್ ಮತ್ತು ಅಧೀನದ ಜಿಲ್ಲಾ ಒಕ್ಕೂಟಗಳು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ರೈತರ ರಾಸುಗಳಿಗೆ ಮಾತ್ರ ಪರಿಹಾರ ನೀಡುತ್ತಿವೆ. ಸ್ಥಳೀಯ ರಾಜಕೀಯ ಚಿತಾವಣೆ ಸಹಿತ ನಾನಾ ಕಾರಣಗಳಿಂದ ಸದಸ್ಯತ್ವ ಹೊಂದಿಲ್ಲದ ಮೃತ ರಾಸುಗಳ ಮಾಲೀಕರೂ ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಒಟ್ಟಾರೆ, ಪರಿಹಾರದ ವಿಷಯದಲ್ಲಿ ಸರ್ಕಾರ ಮತ್ತು ಕೆಎಂಎಫ್ ಮಾರ್ಗಸೂಚಿ ಗೊಂದಲಮಯವಾಗಿದೆ. ಪರಿಹಾರಕ್ಕೆ ಕಾಯುತ್ತಿರುವ ರೈತರಲ್ಲಿ ಇದರಿಂದ ನಿರಾಸೆ ಮನೆ ಮಾಡಿದೆ.
ರಾಜ್ಯದ ವಿವಿಧೆಡೆ ಜುಲೈ, ಆಗಸ್ಟ್ನಲ್ಲಿಯೂ ಕಾಲುಬಾಯಿ ಜ್ವರಕ್ಕೆ ರಾಸುಗಳು ಬಲಿಯಾಗಿವೆ. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ವೈಫಲ್ಯದಿಂದ ರೋಗ ಪತ್ತೆಯಾಗಿರಲಿಲ್ಲ. ನ.1ರಿಂದ ಈಚೆಗೂ ಸಾವು ಸಂಭವಿಸಿದೆ. ಹೀಗಾಗಿ ಪರಿಹಾರಕ್ಕೆ ನಿರ್ದಿಷ್ಟ ಅವಧಿ ಪರಿಗಣಿಸದಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.
ಟಿ ಪಿ.ನಾಗರಾಜು, ನಿರ್ದೇಶಕ, ಕೆಎಂಎಫ್.
ಕಾಲುಬಾಯಿ ಜ್ವರದಿಂದ ರಾಸುಗಳು ಸೆ.1 ರಿಂದ ಅ.31ರೊಳಗೆ ಮೃತಪಟ್ಟರಷ್ಟೇ ಪರಿಹಾರವೆಂದು ಸರ್ಕಾರ ಆದೇಶಿಸಿದೆ. ಅದರನ್ವಯ ಸಂತ್ರಸ್ತ ರೈತರ ಪಟ್ಟಿ ಸಿದ್ಧಪಡಿಸಿದ್ದು, ಪರಿಹಾರ ವಿತರಿಸಲಾಗುತ್ತಿದೆ.
ಟಿ ಡಾ.ದೇವರಾಜು, ಉಪ ನಿರ್ದೇಶಕ, ಪಶು ಸಂಗೋಪನಾ ಇಲಾಖೆ.
ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

