ಬೆಂಗಳೂರು ಗ್ರಾಮಾಂತರ

ಫೋರ್ಜರಿ ಅಧಿಕಾರಿಗಳಿದ್ದಾರೆ ಎಚ್ಚರ!

Published On :


ಮಾಗಡಿ:  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪೋರ್ಜರಿ ಸಹಿ ಮಾಡುವ ಕಳ್ಳ ಅಧಿಕಾರಿಗಳಿದ್ದಾರೆ ಎಚ್ಚರಿಕೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ.ಧನಂಜಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಹರಿಹಾಯ್ದರು.     
ತಿಪ್ಪಸಂದ್ರ ಶಾಲೆಯಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಸಹಿಯನ್ನೇ ಪೋರ್ಜರಿ ಮಾಡುವಂತಹ ಹೀನ ಕೃತ್ಯವೆಸಗುವ ಬಿಇಒ ಕಚೇರಿ, ಈಗ ಪೋರ್ಜರಿ ಸಹಿ ಮಾಡುವ ಕಚೇರಿಯಾಗಿ ಪರಿವರ್ತನೆಯಾಗುತ್ತಿದೆ. ಲಂಚ ಕೊಟ್ಟರೆ ಮಾತ್ರ ಶಿಕ್ಷಕರ ಬಿಲ್‌ಗಳಿಗೆ ಸಹಿ ಮಾಡುವ ಕ್ಷೇತ್ರ ಶಿಕ್ಷಣಾಧಿಕಾರಿ. ಒಬ್ಬ ಡಿ. ಗುಂಪು ನೌಕರನ 6 ಸಾವಿರ ರು ಸಂಬಳ ನೀಡಲು, 2 ಸಾವಿರ ರು. ಬಿಇಒ ಅಧಿಕಾರಿ ಲಂಚ ಪಡೆದಿದ್ದಾರೆ ಎಂದರೆ ಇದು ನಾಚಿಕೆಗೇಡಿನ ಸಂಗತಿ.
ಶಿಕ್ಷಕರ ಹಣವನ್ನೇ ನುಂಗುವ ಬಿಇಒ ಅಧಿಕಾರಿ ಒಬ್ಬ  ಗೋಮುಖ ವ್ಯಾಘ್ರ ಈ ಸತ್ಯ ಹರಿಶ್ಚಂದ್ರ. ಈತನ ಇನ್ನೊಂದು ಮುಖವಾಡವೀಗ ಬಯಲಾಗುತ್ತಿದೆ ಎಂದು ಲೇವಡಿ ಮಾಡಿದರು.
ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಕರಿಗೆ, ಅಧಿಕಾರಿಗಳು ತೊಂದರೆ ಕೊಡುವುದನ್ನು ನಾನು ಸಹಿಸುವುದಿಲ್ಲ. ಶಿಕ್ಷಕರೇ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಬಿಲ್ ಇರಲಿ, ಹಣ ಮಂಜೂರಾತಿಗೆ ಒಂದು ನಯಾಫೈಸೆ ಲಂಚ ಕೊಡಬೇಡಿ. ಲಂಚ ಕೇಳಿದರೆ ನನಗೆ ತಿಳಿಸಿ, ಲಂಚಕೇಳುವವರಿಗೆ ಚಳಿ ಬಿಡಿಸುತ್ತೇನೆ. ಜತೆಗೆ ಇಂಥ ಹೀನ ಕೃತ್ಯವೆಸಗುವ ಅಧಿಕಾರಿಯನ್ನು ಕೂಡಲೆ ಎತ್ತಂಗಡಿ ಮಾಡಿಸುವುದಾಗಿ ಶಿಕ್ಷಕರಿಗೆ ಧೈರ್ಯ ತುಂಬಿದರಲ್ಲದೆ ಗ್ರಾಮೀಣ ಪ್ರದೇಶದ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದನ್ನು ಬಿಟ್ಟು, ಖಾಸಗಿ ಶಾಲೆಗಳತ್ತ ವ್ಯಾಮೋಹಿ ತೋರುತ್ತಿರುವುದು ಸರಿಯಲ್ಲ. ಸರ್ಕಾರಿ ಶಾಲೆಯಲ್ಲಿ ಓದಿ, ರಾಜ್ಯದ ವಿವಿಧ ಮೂಲೆಗಳಲ್ಲಿ ಉನ್ನತ ಸ್ಥಾನದ ಅಧಿಕಾರಿಗಳಾಗಿ ಹೆಸರುಗಳಿಸಿರುವುದನ್ನು ಕಂಡಿದ್ದೇವೆ. ಹೀಗಿರುವಾಗ ಖಾಸಗಿ ಶಾಲೆಯ ವ್ಯಾಮೋಹವೇಕೆ ಎಂದು ಪ್ರಶ್ನಿಸಿದರು.ಸರ್ಕಾರಿ ಶಾಲಾ ಮಕ್ಕಳೇ ಹೆಚ್ಚು ಪ್ರತಿಭಾವಂತರು ಎಂದರಲ್ಲದೆ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮಕ್ಕಳಿಗೆ ಸಹಕಾರ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು
ತಾಪಂ ಸದಸ್ಯ ಜಿ.ವಿ. ರಾಮಣ್ಣ ಮಾತನಾಡಿ, ಗ್ರಾಮೀಣ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವಣಗೊಳಿಸಲು ಶಿಕ್ಷಕರು ಹೆಚ್ಚೆಚ್ಚು ಅವಕಾಶ ನೀಡಿ ಪ್ರೋತ್ಸಾಹಿಸಬೇಕು.ಮಕ್ಕಳು ಸಹ ಸಂಕುಚಿತ ಮನೋಭಾವ ಬಿಟ್ಟು ಪ್ರತಿಭೆ ಅನಾವರಣಗೊಳಿಸುವಂತೆ ಕರೆ ನೀಡಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ ಮಕ್ಕಳ ಪ್ರತಿಭೆಗಳನ್ನು  ಗುರುತಿಸಲು ಶಿಕ್ಷಕರು ಶಕ್ತಿ ಮೀರಿ ಶ್ರಮಿಸಿದ್ದಾರೆ.ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸುವ ಮಕ್ಕಳನ್ನು ತಾಲೂಕು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಮುಖ್ಯ ಶಿಕ್ಷಕಿ ಎಲ್.ಎಸ್. ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರತಿಭಾವಂತ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  ಎಸ್.ಡಿ.ಎಂ.ಸಿ ಅಧ್ಯಕ್ಷ ರಂಗಶೆಟ್ಟಿ, ಸದಸ್ಯರಾದ ನಾರಾಯಣ, ವೆಂಕಟೇಶ್, ಎಲ್.ಲಕ್ಷ್ಮಯ್ಯ, ಜಯಲಕ್ಷ್ಮೀ ವೀಣಾ, ಪುಷ್ಪಲತಾ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.