ಕೇಂದ್ರದಿಂದ ಸದೃಢ ಭಾರತ ನಿರ್ಮಾಣಕ್ಕೆ ಪಣ
ಕ.ಪ್ರ.ವಾರ್ತೆ ರಾಮನಗರ ಡಿ. 7
ಮಹಾತ್ಮ ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿ ಕನಸನ್ನು ನನಸು ಮಾಡಲು ಹೊರಟಿರುವ ಕೇಂದ್ರದ ಯುಪಿಎ ಸರ್ಕಾರವು ಹತ್ತು ಹಲವು ಯೋಜನೆಗಳ ಜಾರಿ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಕೇಂದ್ರದ ವಾರ್ತಾ ಶಾಖೆಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನತೆಗೆ ಸಮಗ್ರ ಮಾಹಿತಿ: ಸಾರ್ವಜನಿಕ ಮಾಹಿತಿ ಆಂದೋಲನದ ಮೂಲಕ ಕೇಂದ್ರ ಸರ್ಕಾರವು ಕೈಗೊಳ್ಳುತ್ತಿರುವ ಜನಪರ ಯೋಜನೆಗಳನ್ನು ಗ್ರಾಮೀಣ ಜನತೆಗೂ ಪರಿಚಯಿಸುತ್ತಿದೆ. ಉದ್ಯೋಗ ಖಾತ್ರಿ, ಗ್ರಾಮೀಣ ಆರೋಗ್ಯ ಅಭಿಯಾನ, ಆಹಾರ ಭದ್ರತೆ, ಸರ್ವ ಶಿಕ್ಷಣ ಅಭಿಯಾನ, ಆರ್.ಟಿ.ಐ., ಆರ್.ಟಿ.ಇ. ಸಹಿತ ಹಲವು ಕಾರ್ಯಕ್ರಮಗಳ ಸಮಗ್ರ ಅರಿವನ್ನು ಇಲ್ಲಿ ಜನತೆಗೆ ಮೂಡಿಲಾಗುತ್ತಿದೆ ಎಂದರು.
ಈ ಮೂಲಕ ಜನರಿಗೆ ಮೂಲಭೂತ ಸೌಕರ್ಯ, ಭದ್ರತೆ ಒದಗಿಸಿ ನೆಮ್ಮದಿಯ ಜೀವನ ಸಾಗಿಸಲು ನೆರವು ನೀಡಲಾಗುತ್ತಿದೆ. ಸರ್ಕಾರ ಈ ಎಲ್ಲ ಯೋಜನೆಗಳನ್ನು ಗ್ರಾಮೀಣ ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಆಗಷ್ಟೇ ಕಾರ್ಯಕ್ರಮ ಜಾರಿಯ ಉದ್ದೇಶ ಸಾರ್ಥಕವಾಗಲಿದೆ ಎಂದು ಸುರೇಶ್ ಅಭಿಪ್ರಾಯಪಟ್ಟರು.
ಇಲ್ಲೂ ನಗರ ಸಾರಿಗೆ: ಕೇಂದ್ರ ಸರ್ಕಾರದ ನರ್ಮ್ ಯೋಜನೆಯಡಿ ರಾಮನಗರಕ್ಕೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರವು ಮಂಜೂರಾತಿ ನೀಡಿದೆ. ಇದರ ಫಲವಾಗಿ ನಗರದ ಸಂಚಾರಿ ವ್ಯವಸ್ಥೆ ಕಲ್ಪಿಸಲು 20 ಬಸ್ಸುಗಳನ್ನು ಮಂಜೂರು ಮಾಡಲಾಗಿದೆ. ಬೆಂಗಳೂರಿಗೆ ಪರ್ಯಾಯವಾಗಿ ರಾಮನಗರ-ಚನ್ನಪಟ್ಟಣ ಅವಳಿ ನಗರಗಳ ಅಭಿವೃದ್ಧಿಗೂ ಒತ್ತು ನೀಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಯೋಜನೆಗಳ ಮಾಹಿತಿ ಸಮರ್ಪಕವಾಗಿ ದೊರೆಯದ ಕಾರಣ ಯೋಜನೆಗಳ ಲಾಭವು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇಂತಹವರಿಗೆ ಯೋಜನೆಗಳ ಮಾಹಿತಿಯನ್ನು ಒದಗಿಸುವುದು ಜನಪ್ರತಿನಿಧಿಯಾದ ನನ್ನಂತವರು ಹಾಗೂ ಆಡಳಿತ ನಡೆಸುವ ಅಧಿಕಾರವರ್ಗದ ಕರ್ತವ್ಯವಾಗಿದೆ ಎಂದರು.
ಗ್ರಾಮೀಣರಿಗೆ ತಲುಪುತ್ತಿಲ್ಲ: ಸರ್ಕಾರ ಗ್ರಾಮೀಣ ಜನರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೆ ಈ ಎಲ್ಲಾ ಕಾರ್ಯಕ್ರಮಗಳ ಮಾಹಿತಿ ಮತ್ತು ಅನುಕೂಲ ಬಹುತೇಕ ಗ್ರಾಮೀಣ ಜನರಿಗೆ ತಲುಪುವುದೇ ಇಲ್ಲ. ಇದಕ್ಕೆಲ್ಲಾ ವ್ಯವಸ್ಥೆಯಲ್ಲಿನ ವೈಫಲ್ಯ, ಲೋಪವೇ ಕಾರಣ ಎಂದು ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಆರೋಪಿಸಿದರು.
ದೇಶವಿನ್ನೂ ನಿದ್ರಿಸುತ್ತಿದೆ: ರಾಷ್ಟ್ರವು ಹಲವಾರು ಯೋಜನೆಗಳ ಮೂಲಕ ಸ್ವಾವಲಂಬನೆ ಸಾಧಿಸಿದೆ. ಹಲವು ಕ್ಷೇತ್ರಗಳಲ್ಲಿ ಪ್ರಪಂಚದಲ್ಲಿಯೇ ಅತ್ಯುನ್ನತ ಸಾಧನೆ ಮಾಡಿದೆ. ಆದಾಗ್ಯೂ ಅರ್ಥಶಾಸ್ತ್ರ ವ್ಯವಸ್ಥೆಯಲ್ಲಿ ಅರ್ಥಶಾಸ್ತ್ರಜ್ಞರು ಭಾರತವನ್ನು ನಿದ್ರಿಸುತ್ತಿರುವ ದೇಶವೆಂದು ಅಭಿಪ್ರಾಯ ಪಟ್ಟಿರುವರು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ವಿಷಾದಿಸಿದರು.
ತೋಟಗಾರಿಕಾ ಕ್ಷೇತ್ರದಲ್ಲಿ ತರಕಾರಿ ಹಾಗೂ ಹಣ್ಣು ಉತ್ಪಾದನೆಯಲ್ಲಿ ಇಡೀ ಪ್ರಪಂಚದಲ್ಲಿಯೇ 2ನೇ ಸ್ಥಾನದಲ್ಲಿದೆ. ಶೀಥಲೀಕರಣ ಮತ್ತಿತರ ಸೌಕರ್ಯಗಳಿಲ್ಲದೆ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹಾಲು ಉತ್ಪಾದನೆಯಲ್ಲಿ ದೇಶವು ಪ್ರಥಮ ಸ್ಥಾನದಲ್ಲಿದೆ. ಕೈಗಾರಿಕಾಭಿವೃದ್ಧಿಯಲ್ಲಿ 6ನೇ ಸ್ಥಾನಕ್ಕೇರಿದೆ ಎಂದು ಹೇಳಿದರು.
ನಮ್ಮದೇ ದೀರ್ಘ ಇತಿಹಾಸ: ಇಡೀ ಪ್ರಪಂಚವನ್ನು ಅವಲೋಕಿಸಿದಾಗ ನಮ್ಮ ದೇಶ ಹೆಚ್ಚು ಇತಿಹಾಸ ಹೊಂದಿದೆ.
ಅತಿ ಹೆಚ್ಚು ಬುದ್ಧಿವಂತರನ್ನು ಹೊಂದಿರುವುದೂ ನಮ್ಮ ದೇಶವೇ. ಇದಕ್ಕೆ ನಾಸಾದಲ್ಲಿ ಭಾರತೀಯ ವಿಜ್ಞಾನಿಗಳು ಶೇಕಡ 65 ರಷ್ಟಿರುವುದೇ ಸಾಕ್ಷಿ. ಆದರೂ ನಮ್ಮ ದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿಯೇ ಉಳಿರುವುದು ವಿಪರ್ಯಾಸದ ಸಂಗತಿ ಎಂದು ಜಿ.ಪಂ. ಸಿಇಒ ಡಾ.ವೆಂಕಟೇಶ್ ತಿಳಿಸಿದರು.
ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ನಿರ್ದೇಶಕ ಎಂ.ನಾಗೇಂದ್ರ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕ್ಷೇತ್ರ ಪ್ರಚಾರಾಧಿಕಾರಿ ಎನ್.ಡಿ.ಪ್ರಸಾದ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಎಲ್.ಚಂದ್ರ, ರಘುಕುಮಾರ್, ಸದಸ್ಯ ಇಕ್ಬಾಲ್ ಹುಸೇನ್, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕರ ಎಚ್. ವೆಂಕಟೇಶ್ವರ್ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಮಿನಿ ವಿಧಾನಸೌಧ ಆವರಣದಿಂದ ಜೂನಿಯರ್ ಕಾಲೇಜು ಮೈದಾನದವರೆಗೆ ಜಾಥಾ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

